ಕುಮಟಾ: ಮೂಲ ಸೌಲಭ್ಯಗಳ ಕೊರತೆಯ ನಡುವೆಯೂ ಸಾಧನೆಯ ಶಿಖರವೇರಬಹುದು ಎಂಬುದನ್ನು ಕುಮಟಾ ತಾಲೂಕಿನ ಯಾಣದಂತಹ ಸೌಲಭ್ಯ ವಂಚಿತ ಗ್ರಾಮೀಣ ಪರಿಸರದಿಂದ ಬಂದ ಪ್ರತಿಭೆ ಕಾವ್ಯಾ ಮರಾಠಿ ಸಾಬೀತುಪಡಿಸಿದ್ದಾಳೆ. ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್(ಸಿಎಸ್‌ಇ) ವಿಭಾಗದಲ್ಲಿ ಐದು ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ಡಾ. ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡಿದ ಕಾವ್ಯಾ, 9.71 ಸಿಜಿಪಿಎ ಗಳಿಸಿ ಕಾಲೇಜಿನ ಇನ್‌ಸ್ಟಿಟ್ಯೂಟ್ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೆ, ಸಿಎಸ್‌ಇ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.
ಸೌಲಭ್ಯಗಳ ಕೊರತೆ, ಗ್ರಾಮೀಣ ಪರಿಸರದ ಮಿತಿಗಳು ಇವೆಲ್ಲವನ್ನೂ ಮೀರಿ ಕಾವ್ಯಾ ಸಾಧಿಸಿರುವ ಈ ಯಶಸ್ಸು ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆಯಾಗಿದೆ. ಸಾಧನೆಗೆ ನಗರಗಳಲ್ಲಿನ ಸೌಲಭ್ಯಗಳೇ ಮಾನದಂಡವಲ್ಲ; ನಿರಂತರ ಪರಿಶ್ರಮ, ಗುರಿಯೆಡೆಗಿನ ಬದ್ಧತೆ ಮತ್ತು ಆತ್ಮವಿಶ್ವಾಸ ಇದ್ದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ಉನ್ನತ ಸಾಧನೆ ಮಾಡಬಲ್ಲರು ಎಂಬುದಕ್ಕೆ ಕಾವ್ಯಾ ಮರಾಠಿ ಉದಾಹರಣೆಯಾಗಿದ್ದಾರೆ. ಇವರು ಗಣಪತಿ ಮರಾಠಿ ಹಾಗೂ ವೀಣಾ ದಂಪತಿಯ ಪುತ್ರಿ. ಯಾಣದಂತಹ ಸೌಲಭ್ಯ ವಂಚಿತ ಗ್ರಾಮದಿಂದ ಬೆಂಗಳೂರಿನ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಐದು ಚಿನ್ನದ ಪದಕಗಳನ್ನು ಗಳಿಸುವವರೆಗಿನ ಆಕೆಯ ಸಾಧನೆ ಗ್ರಾಮೀಣ ಪ್ರತಿಭೆಯ ಸಾಮರ್ಥ್ಯವನ್ನು ಎತ್ತಿ ತೋರಿಸಿದೆ. ಕಾವ್ಯಾ ಅವರ ಸಾಧನೆಗೆ ಕುಟುಂಬದವರು, ಶಿಕ್ಷಕರು, ಗ್ರಾಪಂ ಮಾಜಿ ಸದಸ್ಯ ರಾಜೀವ ಭಟ್ ಅಭಿನಂದನೆ ಸಲ್ಲಿಸಿದ್ದಾರೆ.