ಇಲ್ಲಿನ ಕಲ್ಯಾಣಪುರದ ಸಂತೆಕಟ್ಟೆ ಸರ್ವಿಸ್ ರಸ್ತೆಯಲ್ಲಿ ಕುಸಿದುಬಿದ್ದು ಅಸಹಾಯಕ ಸ್ಥಿತಿಯಲ್ಲಿದ್ದ ರಷ್ಯಾ ದೇಶದ ಪ್ರಜೆಯೊಬ್ಬರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಉಡುಪಿ : ಇಲ್ಲಿನ ಕಲ್ಯಾಣಪುರದ ಸಂತೆಕಟ್ಟೆ ಸರ್ವಿಸ್ ರಸ್ತೆಯಲ್ಲಿ ಕುಸಿದುಬಿದ್ದು ಅಸಹಾಯಕ ಸ್ಥಿತಿಯಲ್ಲಿದ್ದ ರಷ್ಯಾ ದೇಶದ ಪ್ರಜೆಯೊಬ್ಬರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ವಿದೇಶಿ ಪ್ರಜೆಯಾಗಿದ್ದ ಹಿನ್ನೆಲೆಯಲ್ಲಿ ಆತನ ಬಗ್ಗೆ ಒಳಕಾಡುವರು ಉಡುಪಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ವಿಚಾರಣೆಯಲ್ಲಿ ಆತನ ವೀಸಾ ಅವಧಿ ಮುಗಿದಿರುವುದು, ಪಾಸ್‌ಪೋರ್ಟ್ ನಿಷ್ಕ್ರಿಯಗೊಂಡಿರುವುದು ಹಾಗೂ ಗೋವಾ ರಾಜ್ಯದಲ್ಲಿ ಆತನ ವಿರುದ್ಧ ಪ್ರಕರಣವೊಂದು ವಿಚಾರಣೆಯಲ್ಲಿರುವುದು ತಿಳಿದುಬಂದಿದೆ.ಅನಾರೋಗ್ಯದಿಂದ ಬಳಲುತ್ತಿದ್ದ ಆತನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಪೊಲೀಸರ ಭೀತಿಯಿಂದ ಆತ ಆಸ್ಪತ್ರೆಯಿಂದ ಪಾರಿಯಾಗಿದ್ದ. ಬಳಿಕ ನಗರದಲ್ಲಿ ಸುತ್ತಾಡುತ್ತಿದ್ದ ಆತನನ್ನು ಪೊಲೀಸರು ವಶಕ್ಕೆ ಪಡೆದು ಮತ್ತೆ ಆಸ್ಪತ್ರೆಗೆ ದಾಖಲಿಸಿದರು. ನಂತರ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಅವರ ಆದೇಶದಂತೆ ಗುಣಮುಖನಾದ ಆತನಿಗೆ ಕಾರ್ಕಳದ ಹೊಸಬೆಳಕು ಪುನರ್ವಸತಿ ಕೇಂದ್ರದಲ್ಲಿ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಯಿತು. ರಷ್ಯಾದಲ್ಲಿರುವ ತನ್ನ ತಾಯಿಯೊಂದಿಗೆ ದೂರವಾಣಿ ಮೂಲಕ ಮಾತನಾಡಲು ಸಹ ಅವಕಾಶ ಕಲ್ಪಿಸಲಾಯಿತು. ಆಶ್ರಮದ ಸಂಚಾಲಕಿ ತನುಲಾ ತರುಣ್ ಅವರು ಆತನಿಗೆ ಊಟೋಪಚಾರದ ವ್ಯವಸ್ಥೆ ಮಾಡಿದರು. ಭದ್ರತೆಗಾಗಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸಂಪೂರ್ಣ ಚೇತರಿಸಿಕೊಂಡ ಬಳಿಕ ಉಡುಪಿ ಪೊಲೀಸರು ವಿದೇಶಿ ಪ್ರಜೆಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿ, ಇದೀಗ ಗೋವಾ ಪೊಲೀಸರಿಗೆ ಹಸ್ತಾಂತರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.