ಪರಿತ್ಯಕ್ತ ಮಕ್ಕಳ ಆಧಾರ್‌ ನೋಂದಣಿಗೆ ‘ಸಾಥಿ’

KannadaprabhaNewsNetwork |  
Published : Jul 23, 2025, 01:55 AM IST
ಪೋಟೋ: 22ಎಸ್‌ಎಂಜಿಕೆಪಿ01ಶಿವಮೊಗ್ಗದಲ್ಲಿ ನಡೆದ  ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್. ಸಂತೋಷ್ ಮಾತನಾಡಿದರು | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಇಲ್ಲದ 324 ಮಕ್ಕಳನ್ನು ಗುರುತಿಸಿದ್ದು, ಯಾವುದೇ ಸೌಲಭ್ಯಗಳು ದೊರಕದೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆಧಾರ್ ಇಲ್ಲವೆಂಬ ಕಾರಣಕ್ಕೆ ಶಾಲಾ ದಾಖಲಾತಿಯೂ ಸಾಧ್ಯವಾಗದೇ ಇರುವ ಮಕ್ಕಳಿಗೆ ಆಧಾರ್ ಒದಗಿಸಿ ದಾಖಲು ಮಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಹೇಳಿದರು.

ಶಿವಮೊಗ್ಗ: ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಇಲ್ಲದ 324 ಮಕ್ಕಳನ್ನು ಗುರುತಿಸಿದ್ದು, ಯಾವುದೇ ಸೌಲಭ್ಯಗಳು ದೊರಕದೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆಧಾರ್ ಇಲ್ಲವೆಂಬ ಕಾರಣಕ್ಕೆ ಶಾಲಾ ದಾಖಲಾತಿಯೂ ಸಾಧ್ಯವಾಗದೇ ಇರುವ ಮಕ್ಕಳಿಗೆ ಆಧಾರ್ ಒದಗಿಸಿ ದಾಖಲು ಮಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದ ವಿ.ಸಿ.ಕೊಠಡಿಯಲ್ಲಿ ಸೋಮವಾರ ಏರ್ಪಡಿಸಿದ್ದ ಪಾಲನೆ ಮತ್ತು ಸಂರಕ್ಷಣೆಗೆ ಬೇಕಾಗಿರುವ ಮಕ್ಕಳಿಗೆ ಆಧಾರ್ ನೋಂದಣಿ ಮತ್ತು ಸರ್ಕಾರಿ ಯೋಜನೆಗಳ ಸೇರ್ಪಡೆ ಮತ್ತು ಟ್ರ್ಯಾಕಿಂಗ್‌ಗಾಗಿ ಸಾಥಿ ಅಭಿಯಾನದ ಅನುಪಾಲನೆ ಹಾಗೂ ಅಭಿಯಾನದ ಅನುಷ್ಠಾನ ಕುರಿತಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತಾನಾಡಿದರು.

ಪರಿತ್ಯಕ್ತ, ಅನಾಥ ಮಕ್ಕಳಿಗೆ ಆಧಾರ್ ಕಾರ್ಡ್ ಒದಗಿಸುವಲ್ಲಿ ಆಗುತ್ತಿರುವ ತೊಡಕುಗಳನ್ನು ನಿವಾರಣೆ ಮಾಡಿ, ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ನೀಡಲು ಸಾಥಿ ಅಭಿಯಾನ ಹಮ್ಮಿಕೊಂಡಿದ್ದು ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪರಿತ್ಯಕ್ತ, ಏಕ ಪೋಷಕ, ಅನಾಥ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಅವರಿಗೆ ಮುಖ್ಯವಾಗಿ ಆಧಾರ್‌ಕಾರ್ಡ್ ಅವ್ಯಕತೆಯಿರುವುದರಿಂದ ಆಧಾರ್‌ಕಾರ್ಡ್ ಮಾಡಿಸಲು ಇರುವ ತೊಡಕುಗಳನ್ನು ಹೇಗೆ ನಿವಾರಿಸಬೇಕೆಂಬ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಆಧಾರ್ ಇಲ್ಲವೆಂಬ ಕಾರಣಕ್ಕೆ ಪರಿತ್ಯಕ್ತ ಮಕ್ಕಳಿಗೆ ಮಕ್ಕಳ ರಕ್ಷಣಾ ಕೇಂದ್ರಗಳಲ್ಲಿಯೂ ದಾಖಲಾತಿ ದೊರಕುತ್ತಿಲ್ಲ. ಆದ್ದರಿಂದ ಆಧಾರ್ ಕಾರ್ಡನ್ನು ನೀಡಲು ಇರುವ ಪರ್ಯಾಯ ಮಾರ್ಗಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದರು. ಆಧಾರ್ ಕಾರ್ಡ್ ನೀಡಲು ಜನನ ಪ್ರಮಾಣ ಪತ್ರ ಇರದೇ ಇರುವ ಮಕ್ಕಳಿಗೆ ಜನನ ಪ್ರಮಾಣ ಪತ್ರಕ್ಕಾಗಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಹೀಗೆ ಪಡೆದು ಅಂತಹ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಿಕೊಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿರುವನ್ವಯ ತಂದೆ-ತಾಯಿ ಇಲ್ಲದಿರುವ ಪರಿತ್ಯಕ್ತ ಮಕ್ಕಳು, ವಲಸೆ ಇನ್ನಾವುದೇ ಕಾರಣಗಳಿಂದ ಆಧಾರ್ ಹೊಂದಿರದ ಮಕ್ಕಳನ್ನು ಗುರುತಿಸಿ ಆಧಾರ್ ಕಾರ್ಡ್ ನೀಡಲು ‘ಸಾಥಿ’ ( ಸರ್ವೇ ಆಫ್ ಆಧಾರ್ ಆಂಡ್ ಆಕ್ಸಸ್ ಟು ಟ್ರ್ಯಾಕಿಂಗ್ ಮತ್ತು ಹೊಲಿಸ್ಟಿಕ್ ಇನ್ಸುಕ್ಲೆಷನ್) ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ. ಪರಿತ್ಯಕ್ತ ಮಕ್ಕಳಿಗೆ ಕಾನೂನು ಗುರುತು ಮತ್ತು ಸರ್ಕಾರದ ಸೌಲಭ್ಯಗಳನ್ನು ಒದಗಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.

ಎಷ್ಟೋ ಮಕ್ಕಳಿಗೆ ಜನನ ಪ್ರಮಾಣ ಪತ್ರ ಇಲ್ಲ. ಇಂತಹ ಪ್ರಕರಣದಲ್ಲಿ ಪೋಷಕರು ವಿಶೇಷವಾಗಿ ತಾಯಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮುಂದೆ ಬಂದು ಪೋಷಕರ ಹೆಸರು, ಮಗುವಿನ ಜನ್ಮ ದಿನಾಂಕ, ಜನ್ಮಸ್ಥಳದ ವಿವರ ನೀಡಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸುವ ಮೂಲಕ ಆಧಾರ್ ಕಾರ್ಡ್ ಪಡೆದು ಸೌಲಭ್ಯವನ್ನು ಪಡೆದುಕೊಳ್ಳಲು ಅವಕಾಶವಿದೆ. ಪೋಷಕರು ಇರುವ ಮಕ್ಕಳಿಗೆ ಪೋಷಕರ ನಿವಾಸ ದೃಢೀಕರಣ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅಥವಾ ಇತರೆ ಯಾವುದೇ ಮೂಲ ದಾಖಲಾತಿ ನೀಡಿ ಅವರಿಗೆ ಮೊದಲು ಆಧಾರ್ ನೋಂದಣಿ ಮಾಡಿಸಿ, ನಂತರ ಮಕ್ಕಳಿಗೂ ಮಾಡಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್‌.ಮಂಜುನಾಥ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಆರ್.ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್, ಆಧಾರ್ ಜಿಲ್ಲಾ ಸಂಯೋಜಕರಾದ ಸತೀಶ್ ಚಂದ್ರ.ಎಸ್, ಹಿರಿಯ ಉಪನೋಂದಣಾಧಿಕಾರಿಗಳಾದ ಧನುರಾಜ್.ಬಿ ಇತರರಿದ್ದರು.

ವಿಸಿ ಮೂಲಕ ಜಿಲ್ಲೆಯ ವಿವಿಧ ತಾಲೂಕುಗಳ ಅಧಿಕಾರಿಗಳು, ತಾಲೂಕುಗಳ ತಹಸೀಲ್ದಾರರು, ಪಂಚಾಯಿತಿ ಮುಖ್ಯ ಅಧಿಕಾರಿಗಳು, ಬಿಇಓ, ಸಿಡಿಪಿಓಗಳು ಪಾಲ್ಗೊಂಡಿದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ