- ಆರ್ಎಸ್ಎಸ್ ಅದ್ಧೂರಿ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖಂಡ ಮಧುಕರ್‌ಜೀ- - -
ಕನ್ನಡಪ್ರಭ ವಾರ್ತೆ ಜಗಳೂರುಪ್ರಚಾರ, ಪ್ರಶಂಸೆ ಬಯಸದೇ ರಾಷ್ಟ್ರೀಯತೆಗಾಗಿ ಜೀವನ ಸಮರ್ಪಣೆ ಮಾಡುವುದೇ ನೈಜ ಸ್ವಯಂ ಸೇವಕರ ಗುಣವಾಗಿದೆ. ಡಿಸೆಂಬರ್ 7ರಿಂದ ಡಿ.28 ರವರೆಗೂ ಎಲ್ಲರ ಮನೆ ಮನಗಳನ್ನು ನಮ್ಮ ಸಂಘದ ಸ್ವಯಂ ಸೇವಕರು ತಲುಪಬೇಕು. ಜೊತೆಗೆ ಜ.18ರಿಂದ 2026ರ ಫೆ.11ರಂದು ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಬೇಕು ಎಂದು ಆರ್‌ಎಸ್‌ಎಸ್ ಸಹ ಕಾರ್ಯವಾಹ ಶಿವಮೊಗ್ಗದ ಮಧುಕರ್‌ಜೀ ಹೇಳಿದರು.
ಪಟ್ಟಣದಲ್ಲಿ ಆರ್‌ಎಸ್‌ಎಸ್ ಅದ್ಧೂರಿ ಪಥ ಸಂಚಲನ ನಂತರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಆರ್‌ಎಸ್‌ಎಸ್ ಯಾವತ್ತೂ ಸಂವಿಧಾನಕ್ಕೆ ಬದ್ಧವಾಗಿದೆ. ಯುವಜನರು ನಿತ್ಯ ಆರ್‌ಎಸ್‌ಎಸ್ ಸೇರುತ್ತಿರುವುದೇ ಇದಕ್ಕೆ ಸಾಕ್ಷಿ. ಸಂಘವನ್ನು ಕಟ್ಟಿ ಬೆಳೆಸಿದ ಹಿಂದುತ್ವದ ತಾತ್ವಿಕತೆಯಿಂದ ಪ್ರಭಾವಿತರಾಗಿದ್ದ ಕೇಶವ ಬಲಿರಾಮ ಹೆಡ್ಗೇವಾರ್ 1925 ಸೆ.27ರಂದು ವಿಜಯದಶಮಿ ದಿನದಂದು ಮಹಾರಾಷ್ಟ್ರದ ನಾಗಪುರದಲ್ಲಿ ಆರ್‌ಎಸ್‌ಎಸ್ ಸ್ಥಾಪಿಸಿದರು. ಹಿಂದೂ ಸಂಸ್ಕೃತಿ, ಹಿಂದೂ ಒಗ್ಗಟ್ಟು ಮತ್ತು ರಾಷ್ಟ್ರಿ ಸ್ವಾವಲಂಬನೆ ಸಾಧಿಸುವುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.ದೇಶದಲ್ಲಿ 83 ಸಾವಿರಕ್ಕೂ ಹೆಚ್ಚು ಶಾಖೆ:
ಆರ್‌ಎಸ್‌ಎಸ್ ದೇಶದ ಬಹುತೇಕ ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಸಂಘದ ಸದಸ್ಯರಿಗೆ ನಿಗದಿತವಾಗಿ ಸ್ವಯಂ ರಕ್ಷಣೆ ಸೇರಿದಂತೆ ವಿವಿಧ ರೀತಿಯ ತರಬೇತಿ, ಸೈದ್ಧಾಂತಿಕ ಶಿಕ್ಷಣ ನೀಡಲಾಗುತ್ತಿದೆ. ದೇಶದಲ್ಲಿ ಒಟ್ಟು 83 ಸಾವಿರಕ್ಕೂ ಹೆಚ್ಚು ಶಾಖೆಗಳಿವೆ. ಅವುಗಳಲ್ಲಿ ಹಿಂದುತ್ವ, ಹಿಂದೂ ರಾಷ್ಟ್ರೀಯತೆ ಕೇಂದ್ರೀಕರಿಸಿ ನಿರಂತರ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದ ಅವರು, ತಳಮಟ್ಟದಲ್ಲಿ ಸಂಘಕ್ಕೆ ಇರುವ ಸಂಪರ್ಕಗಳೇ ಬಿಜೆಪಿ, ವಿಎಚ್‌ಪಿ, ಭಾರತೀಯ ಸ್ವದೇಶಿ ಜಾಗರಣ ಮಂಚ್, ಬಜರಂಗದಳ, ಭಾರತೀಯ ಕಿಸಾನ್ ಸಂಘಗಳಾಗಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದರು.500ಕ್ಕೂ ಹೆಚ್ಚು ಕಾರ್ಯಕರ್ತರ ಪಥ ಸಂಚಲನ:
ಜಗಳೂರು ಪಟ್ಟಣದ ಮಾರಿಕಾಂಬ ದೇವಸ್ಥಾನದಿಂದ ಪ್ರಾರಂಭವಾಗಿ ಡಾ.ಸಮೀವುಲ್ಲಾ ಖಾನ್ ಆಸ್ಪತ್ರೆಯಿಂದ ಭುವನೇಶ್ವರಿ ವೃತ್ತದಿಂದ ರಾಮಾಲಯ ರಸ್ತೆ ಮಾರ್ಗವಾಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ 500ಕ್ಕೂ ಹೆಚ್ಚು ಸ್ವಯಂ ಸೇವಕರು ಬಹು ಶಿಸ್ತಿನಿಂದ ಸಾಗಿದರು. ಅಂಬೇಡ್ಕರ್ ವೃತ್ತದಿಂದ ಜೆಸಿಆರ್ ಬಡಾವಣೆ ಮುಖೇನ ಮಹಾತ್ಮ ಗಾಂಧಿ ವೃತ್ತದ ಮೂಲಕ ಬಯಲು ರಂಗಮಂದಿರದಲ್ಲಿ ಸಂಚಲನ ಅದ್ಧೂರಿಯಾಗಿ ಜರುಗಿತು.ಗಣವೇಶಧಾರಿಗಳಾಗಿದ್ದ ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ್, ಮಂಡಲ ಬಿಜೆಪಿ ಮಂಡಲ ಅಧ್ಯಕ್ಷ ಎ.ಮರುಳಾರಾಧ್ಯ, ಮುಖಂಡರಾದ ಎಸ್.ಕೆ.ಮಂಜುನಾಥ್, ಲಿಂಗಣ್ಣನಹಳ್ಳಿ ಕೃಷ್ಣಮೂರ್ತಿ, ಪಪಂ ಸದಸ್ಯ ರೇವಣಸಿದ್ಧಪ್ಪ ಬಿಸ್ತುವಳ್ಳಿ ಬಾಬು, ಕೃಷ್ಣಮೂರ್ತಿ ಕರಿಬಸಯ್ಯ, ಪೂರ್ವಜ್ ಎಚ್.ಪಿ.ರಾಜೇಶ್, ಸೊಕ್ಕೆ ನಾಗರಾಜ್, ಅರಿಶಿಣಗುಂಡಿ ಮರುಳಸಿದ್ದ, ಕಟ್ಟಿಗೆಹಳ್ಳಿ ಮಂಜುನಾಥ್ ಸೇರಿದಂತೆ 500ಕ್ಕೂ ಹೆಚ್ಚು ಆರ್‌ಎಸ್‌ಎಸ್ ಸ್ವಯಂ ಸೇವಕರು ಭಾಗಿಯಾಗಿದ್ದರು.
- - --20ಜೆಎಲ್.ಆರ್.ಚಿತ್ರ1:
ಜಗಳೂರು ಪಟ್ಟಣದಲ್ಲಿ ಶಿವಮೊಗ್ಗದ ಮಧುಕರ್‌ಜೀ ನೇತೃತ್ವದಲ್ಲಿ ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್, ಮಂಡಲ ಅಧ್ಯಕ್ಷ ಎ.ಮರುಳಾರಾಧ್ಯ ಸೇರಿದಂತೆ ನೂರಾರು ಕಾರ್ಯಕರ್ತರು ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಪಾಲ್ಗೊಂಡರು.