ಸದಾಶಿವ ಶೆಟ್ಟಿಗಾರ್‌, ಪಾತಾಳ ವೆಂಕಟ್ರಮಣ ಭಟ್ ನಿಧನ : ಡಾ.ತಲ್ಲೂರು ಸಂತಾಪ

KannadaprabhaNewsNetwork |  
Published : Jul 23, 2025, 02:24 AM ISTUpdated : Jul 23, 2025, 09:01 AM IST
Venkataramana Bhat

ಸಾರಾಂಶ

ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಪಾತಾಳ ವೆಂಕಟ್ರಮಣ ಭಟ್ ಹಾಗೂ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ನಿಧನಕ್ಕೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅಕಾಡೆಮಿ ಸದಸ್ಯರು ಸಂತಾಪ ಸೂಚಿಸಿದ್ದಾರೆ.

 ಉಡುಪಿ :  ಇಬ್ಬರು ಮಹಾನ್‌ ಯಕ್ಷಗಾನ ಕಲಾವಿದರು ನಮ್ಮನ್ನಗಲಿದ್ದಾರೆ. ಒಬ್ಬರು ಪ್ರಸಿದ್ದ ಸ್ತ್ರೀವೇಷಧಾರಿಗಳಾದರೆ ಇನ್ನೊಬ್ಬರು ಖ್ಯಾತ ಬಣ್ಣದ ವೇಷಧಾರಿಗಳು. ಈ ಇಬ್ಬರು ಕಲಾವಿದರ ನಿರ್ಗಮನದಿಂದ ಯಕ್ಷಗಾನ ವಲಯದಲ್ಲಿ ಉಂಟಾಗಿರುವ ನಿರ್ವಾತವನ್ನು ತುಂಬುವುದು ಕಷ್ಟ ಸಾಧ್ಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅಕಾಡೆಮಿ ಸದಸ್ಯರು ತಮ್ಮ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.

ತೆಂಕುತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿಗಳಾಗಿರುವ ಪಾತಾಳ ವೆಂಕಟರಮಣ ಭಟ್‌ (91) ಇತ್ತೀಚೆಗೆ ನಿಧನರಾದರು. ಅವರು ಪ್ರಯೋಗಶೀಲ ಕಲಾವಿದರು. ಯಕ್ಷಗಾನದ ಸ್ತ್ರೀವೇಷವನ್ನು ಕಲಾತ್ಮಕ ಘನತೆಯನ್ನು ಹೆಚ್ಚಿಸಲು ಪ್ರಯತ್ನಪಟ್ಟವರು. 

 ಪೈವಳಿಕೆ ಐತಪ್ಪ ಶೆಟ್ಟಿ, ಕರ್ಗಲ್ಲು ಸುಬ್ಬಣ್ಣ ಭಟ್‌ ಅವರಂಥ ಹಿರಿಯರ ಸಾಂಪ್ರದಾಯಿಕ ಪಥದಲ್ಲಿ ಹೊಸ ಹೆಜ್ಜೆಗಳನ್ನು ಇರಿಸಿದವರು. ಶಿಲ್ಪಶಾಸ್ತ್ರವನ್ನೂ ನಾಟ್ಯಶಾಸ್ತ್ರವನ್ನೂ ಅಧ್ಯಯನ ಮಾಡಿ ಸ್ತ್ರೀವೇಷದ ಆಹಾರ್ಯದಲ್ಲಿಯೂ ನಾಟ್ಯಾಭಿನಯದಲ್ಲಿಯೂ ಪರಿಷ್ಕಾರ ಮಾಡಿದವರು ಎಂದು ನೆನಪಿಸಿದರು.ತೆಂಕು-ಬಡಗು ಉಭಯ ತಿಟ್ಟುಗಳಲ್ಲಿಯೂ ಹೆಸರು ಮಾಡಿದವರು. ನವೀನ ಶಿರೋಭೂಷಣ, ಭುಜಾಲಂಕಾರ, ಆಭರಣಗಳನ್ನು ಧರಿಸಿ, ಬಳಕುವ ಭಂಗಿಯ ಪಾತಾಳ ಅವರು ‘ಯಕ್ಷಗಾನದ ಶಿಲಾಬಾಲಿಕೆ’ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. 

1953 ರಿಂದ 1981 ರ ವರೆಗೆ ವೃತ್ತಿಪರ ತಿರುಗಾಟ ನಡೆಸಿದ ಅವರು ವೃತ್ತಿಯಿಂದ ನಿವೃತ್ತಿಯಾದ ಬಳಿಕ ಯಕ್ಷಗಾನ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದರು. ಪುತ್ರ ಅಂಬಾಪ್ರಸಾದ ಪಾತಾಳರನ್ನು ಸಮರ್ಥ ಸ್ತ್ರೀವೇಷಧಾರಿಯಾಗಿ ರೂಪಿಸಿದ ಕೀರ್ತಿ ಪಾತಾಳ ವೆಂಕಟರಮಣ ಭಟ್ಟರಿಗೆ ಸಲ್ಲುತ್ತದೆ. ಅವರ ಪ್ರಯೋಗಶೀಲ ಗುಣವನ್ನು ಕಿರಿಯ ಕಲಾವಿದರು ಅನುಸರಿಸುವಂತಾಗಲಿ ಎಂಬ ಆಶಯವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ವ್ಯಕ್ತಪಡಿಸಿದ್ದಾರೆ.

ದೈತ್ಯಪ್ರತಿಭೆಯ ಸದಾಶಿವ ಶೆಟ್ಟಿಗಾರ್‌ (61) ಅವರು ಕೂಡ ಇತ್ತೀಚೆಗೆ ನಮ್ಮನ್ನಗಲಿದ್ದಾರೆ. ಬಣ್ಣದ ಮಾಲಿಂಗದ ಶಿಷ್ಯತ್ವದಲ್ಲಿ ರಾಕ್ಷಸ ಪಾತ್ರ ಪ್ರಸ್ತುತಿಯ ಸೂಕ್ಷ್ಮಗಳನ್ನು ಕಲಿತುಕೊಂಡ ಸದಾಶಿವ ಶೆಟ್ಟಿಗಾರ್‌ ಅವರು ಯಕ್ಷಗಾನದ ದಂತಕತೆಯಂತಿದ್ದ ಬಣ್ಣದ ಕುಟ್ಯಪ್ಪುರವರಿಂದ ಪರೋಕ್ಷ ಪ್ರೇರಣೆ ಪಡೆದವರು. ಬಣ್ಣದ ವೇಷದ ಮತ್ತೋರ್ವ ಭೀಮಪ್ರತಿಭೆ ಚಂದ್ರಗಿರಿ ಅಂಬು ಅವರ ಪಥದಲ್ಲಿ ಸಾಗಿದವರು. ಈ ಮೂವರು ಪ್ರತಿಭಾವಂತ ಬಣ್ಣದ ವೇಷಧಾರಿಗಳ ಪ್ರಭಾವಕ್ಕೊಳಗಾದರೂ ಸದಾಶಿವ ಶೆಟ್ಟಿಗಾರರು ತಮ್ಮದೇ ಸ್ವಂತಿಕೆಯ ನಡೆಯನ್ನು ರೂಪಿಸಿಕೊಂಡವರು ಎಂದತು ಅವರು ಸ್ಮರಿಸಿದ್ದಾರೆ. 

ವರಾಹ, ಮಹಿಷಾಸುರ, ಸಿಂಹ ಗಳಂಥ ಪಾತ್ರಗಳ ಪ್ರಸ್ತುತಿಗಳಲ್ಲಿ ಸೃಜನಶೀಲತೆಯನ್ನು ಮೆರೆದಿದ್ದರು. ಯಕ್ಷಗಾನ ಅಕಾಡೆಮಿಯಿಂದ ಅವರಿಗೆ ಸೂಕ್ತ ಗೌರವ ಕೊಡಬೇಕೆಂಬ ಬಗ್ಗೆ ಚಿಂತನೆಯನ್ನು ನಡೆಸುತ್ತಿರುವಾಗಲೇ ಅವರು ನಮ್ಮನ್ನಗಲಿದ್ದಾರೆ. ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರ ಗಜಗತಿಯ ಪಥದಲ್ಲಿ ಕಿರಿಯ ವೇಷಧಾರಿಗಳು ನಡೆಯುವಂತಾಗಲಿ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''