ಶಿರಹಟ್ಟಿ: ಜೀವಮಾನದುದ್ದಕ್ಕೂ ಬ್ರಹ್ಮಚರ್ಯವನ್ನೇ ಪಾಲನೆ ಮಾಡಿದ ಬಂಜಾರ ಸಮುದಾಯದ ಆರಾಧ್ಯ ದೈವ ಸಂತ ಶ್ರೀಸೇವಾಲಾಲ್ ಮಹಾರಾಜರು ಇಂದಿಗೂ ಜನಮಾನಸದಲ್ಲಿ ಗುರುವಿನ ಸ್ಥಾನ ಪಡೆದಿದ್ದಾರೆ. ಸತ್ಯ, ಅಹಿಂಸೆ, ತ್ಯಾಗ ಮನೋಭಾವದ ನೀತಿ ಮಾತು ಹೇಳಿದ್ದರು. ಸಮಾಜದಲ್ಲಿ ಸಮಾನತೆಯ ಸಂದೇಶ ಸಾರುವ ಮೂಲಕ ಸಂತ ಅನಿಸಿಕೊಂಡರು ಎಂದು ತಹಸೀಲ್ದಾರ್ ಅನಿಲ ಬಡಿಗೇರ ಹೇಳಿದರು.
ಗುರುವಾರ ಶಿರಹಟ್ಟಿ ತಾಲೂಕು ಆಡಳಿತದ ವತಿಯಿಂದ ತಹಸೀಲ್ದಾರ್ ಕಾರ್ಯಾಲಯದ ಸಭಾ ಭವನದಲ್ಲಿ ಸೇವಾಲಾಲ್ ಮಹಾರಾಜರ ೨೮೫ನೇ ಜಯಂತ್ಯುತ್ಸವ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಬಂಜಾರ ಸಮುದಾಯವನ್ನು ಉತ್ತಮ ಮಟ್ಟಕ್ಕೆ ತರುವಲ್ಲಿ ಸಂತ ಸೇವಾಲಾಲ್‌ರ ಪರಿಶ್ರಮ ಅಪಾರವಾದದ್ದು. ಅವರ ಅಮೂಲ್ಯ ಸಂದೇಶಗಳನ್ನು ಮತ್ತು ಹಿತವಾಣಿಗಳನ್ನು ಸಮಾಜಕ್ಕೆ ತಲುಪಿಸುವ ಕಾರ್ಯಗಳು ನಡೆಯಬೇಕು ಎಂದರು. ಭಾರತ ದೇಶ ಸಮೃದ್ಧವಾಗಿರಲು ಭಾರತೀಯ ಮನಸ್ಸುಗಳು ಒಗ್ಗಟ್ಟಾಗಿರಬೇಕು. ದೇಶದಲ್ಲಿ ಜಾತಿ ಇರಬೇಕು. ಆದರೆ, ದೇಶ ಜಾತ್ಯತೀತವಾಗಿರಬೇಕು. ದೇಶಕ್ಕೆ ಗಂಡಾಂತರ ಬಂದಾಗ ಬಂಜಾರ ಸಮಾಜ ಪರಾಕ್ರಮ ಮೆರೆದಿದೆ. ದುಷ್ಟ ಶಕ್ತಿಗಳನ್ನು ಮೆಟ್ಟಿನಿಲ್ಲುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಪ್ರಕೃತಿಯೆ ಧರ್ಮವೆಂದು ಸಾರಿದ ಸಂತ ಶ್ರೀ ಸೇವಾಲಾಲ್ ಅವರು ತನ್ನ ಅನುಯಾಯಿಗಳು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿದ್ದರು. ಆಧ್ಯಾತ್ಮದ ಅನುಭವ ಮತ್ತು ದಿವ್ಯದೃಷ್ಟಿಯ ಮೂಲಕ ಸಮಾಜಕ್ಕೆ ಉಪದೇಶಗಳನ್ನು ನೀಡಿ ವಿಶೇಷವಾಗಿ ಬುಡಕಟ್ಟು ಜನಾಂಗಕ್ಕೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ ಎಂದರು.ಬಾಲ ಬ್ರಹ್ಮಚಾರಿಯಾಗಿ ಧ್ಯಾನ ಮತ್ತು ಭಕ್ತಿ ಮೂಲಕ ಆಧ್ಯಾತ್ಮವನ್ನು ಅಪ್ಪಿಕೊಂಡು, ದೇವರನ್ನು ಒಲಿಸಿಕೊಂಡು ಮಹಾಸಂತ, ದಾರ್ಶನಿಕ ಹಾಗೂ ಯುಗಪುರುಷರಾಗಿದ್ದಾರೆ. ಬುಡಕಟ್ಟು ಜನರಲ್ಲಿ ದೈರ್ಯ, ಸಾಹಸ, ಆತ್ಮಸ್ಥೈರ್ಯ ಮತ್ತು ಆತ್ಮಾಭಿಮಾನವನ್ನು ಮೂಡಿಸುವ ಕೆಲಸ ಮಾಡಿದ್ದಾರೆ ಎಂದರು. ದೈಹಿಕ ಶಿಕ್ಷಣ ಉಪನ್ಯಾಸಕ ಎಂ.ಕೆ. ಲಮಾಣಿ ಮಾತನಾಡಿ, ಸಂತ ಶ್ರೀಸೇವಾಲಾಲರು ಸಮಾಜದ ಸುಧಾರಣೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರ ಪ್ರಾಮಾಣಿಕತೆ, ನಿಸ್ವಾರ್ಥ ಮನೋಭಾವ ಹಾಗೂ ಸಂಘಟನಾ ಚತುರತೆಯನ್ನು ಹೊಂದಿದ್ದರು. ಜೊತೆಗೆ ಮಾನವತಾವಾದಿಯಾಗಿದ್ದರು. ಭಾರತ ಸಾಧು ಸಂತರ ನಾಡು. ಇಲ್ಲಿ ಸಂತರು ಆಧ್ಯಾತ್ಮಿಕ ಸಾಧನೆಯಿಂದ ಸಮಾಜದಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಧಾರ್ಮಿಕ ಚಿಂತನೆ ಮೂಲಕ ನಾಡಿನ ಪ್ರಗತಿಗೆ ಅಮೋಘ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಬಂಜಾರ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರು ಭವಿಷ್ಯದ ಉತ್ತಮ ನಾಗರಿಕರಾಗುವಂತೆ ರೂಪಿಸುವ ಹೊಣೆ ಅವರ ಪಾಲಕರ ಮೇಲಿದೆ. ಸಂತ ಸೇವಾಲಾಲ್ ಮಹಾರಾಜರು ಬಂಜಾರ ಸಮುದಾಯದ ಅತ್ಯಂತ ಶ್ರೇಷ್ಠ ದಾರ್ಶನಿಕ ಯುಗಪುರುಷರಾಗಿದ್ದಾರೆ. ಬಂಜಾರ ಸಮುದಾಯಕ್ಕೆ ಆಧ್ಯಾತ್ಮಿಕ ತಳಹದಿ ಮೇಲೆ ನಡೆಯಲು ಮಾರ್ಗದರ್ಶನ ನೀಡಿದ ಶರಣರಲ್ಲಿ ಒಬ್ಬರಾಗಿದ್ದಾರೆ ಎಂದರು.ಮುಖಂಡ ಜಾನು ಲಮಾಣಿ, ದೇವಪ್ಪ ಲಮಾಣಿ, ನಾಗರಾಜ ಲಕ್ಕುಂಡಿ, ಪರಸು ಡೊಂಕಬಳ್ಳಿ, ವೀರಣ್ಣ ಚವ್ಹಾಣ, ವೀರಯ್ಯ ಮಠಪತಿ, ತಿಪ್ಪಣ್ಣ ಲಮಾಣಿ, ಹನಮಂತ ಲಮಾಣಿ, ಶರಣಯ್ಯ ಬಿ. ಕುಲಕರ್ಣಿ, ರೇವಣೆಪ್ಪ ಮನಗೂಳಿ, ಮಾರುತಿ ರಾಠೋಡ, ಕೌಸಿಕ ದಳವಾಯಿ, ಜಿ.ಎಂ. ಮುಂದಿನಮನಿ, ಸುರೇಶ ಕುಂಬಾರ ಸೇರಿ ಅನೇಕರು ಇದ್ದರು.