ಗಣಪತಿ ಪ್ರತಿಷ್ಠಾಪನೆಗೆ ಸುರಕ್ಷತಾ ಮಾರ್ಗಸೂಚಿ

KannadaprabhaNewsNetwork |  
Published : Sep 13, 2026, 02:15 AM IST
11ಎಚ್ಎಸ್ಎನ್11: | Kannada Prabha

ಸಾರಾಂಶ

ಪೊಲೀಸ್, ಅಗ್ನಿಶಾಮಕ ಹಾಗೂ ಆಂಬ್ಯುಲೆನ್ಸ್ ಸೇರಿದಂತೆ ತುರ್ತು ಸೇವೆಗಳ ದೂರವಾಣಿ ಸಂಖ್ಯೆಗಳಿರುವ ಫ್ಲೆಕ್ಸ್ ನಲ್ಲಿ ಅಳವಡಿಸಬೇಕು. ಗಣೇಶೋತ್ಸವದ ಮೆರವಣಿಗೆ ನಡೆಸುವ ಸಂಘಟಕರು ಕನಿಷ್ಠ ಮೂರು ದಿನಗಳ ಮುಂಚಿತವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಮೆರವಣಿಗೆ ಮಾರ್ಗದ ಮಾಹಿತಿ ನೀಡಬೇಕು. ಇದರಿಂದ ಸಂಚಾರ ನಿಯಂತ್ರಣ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಸುರಕ್ಷತೆಗಾಗಿ ಅಗತ್ಯ ವ್ಯವಸ್ಥೆ ಕೈಗೊಳ್ಳಲು ಅನುಕೂಲವಾಗಲಿದೆ. ಎತ್ತರದ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವ ಸಂದರ್ಭದಲ್ಲಿ ವಿದ್ಯುತ್ ತಂತಿಗಳಿಂದ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಸೆ. ೧೪ರಿಂದ ಆರಂಭವಾಗಲಿರುವ ಗಣೇಶೋತ್ಸವಗಳು ಶಾಂತಿಯುತವಾಗಿ ನಡೆಯಲು ಅಗತ್ಯ ಬಂದೋಬಸ್ತ್‌ ಕೈಗೊಳ್ಳಲು ಜಿಲ್ಲಾ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಎಸ್ಪಿ ಶುಭನ್ವಿತಾ ಹೇಳಿದರು.

ಜಿಲ್ಲಾ ಎಸ್ಪಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮಕ್ಕೆ ಶುಕ್ರವಾರ ಮಾಹಿತಿ ನೀಡಿ, ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯುವ ಸಂಘಟಕರು ತಮ್ಮ-ತಮ್ಮ ತಾಲೂಕು ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬೇಕು. ಜಿಲ್ಲಾಡಳಿತದ ಸಹಯೋಗದಲ್ಲಿ ಸಿಂಗಲ್ ವಿಂಡೋ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಭೂ ಮಾಲೀಕರ ಅನುಮತಿ, ಕೇಬಲ್, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ ಸೇರಿದಂತೆ ಅಗತ್ಯ ಅನುಮತಿಗಳನ್ನು ಒಂದೇ ವ್ಯವಸ್ಥೆಯ ಮೂಲಕ ಪಡೆಯಬಹುದಾಗಿದೆ. ಗಣಪತಿ ಮೂರ್ತಿಯ ಎತ್ತರ ೧೫ ಅಡಿಗಿಂತ ಹೆಚ್ಚಿದ್ದಲ್ಲಿ ಪಿಡಬ್ಲ್ಯುಡಿಯಿಂದ ಫಿಟ್ನೆಸ್ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ. ಪ್ರತಿಯೊಂದು ಪೆಂಡಾಲ್‌ನಲ್ಲೂ ಪ್ರಥಮ ಚಿಕಿತ್ಸಾ ಕಿಟ್, ನೀರಿನ ವ್ಯವಸ್ಥೆ ಹಾಗೂ ಅಗ್ನಿ ಸುರಕ್ಷತೆಗಾಗಿ ಮರಳು ತುಂಬಿದ ಬಕೆಟ್, ಸಿಸಿ ಕ್ಯಾಮಾರ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಪೊಲೀಸ್, ಅಗ್ನಿಶಾಮಕ ಹಾಗೂ ಆಂಬ್ಯುಲೆನ್ಸ್ ಸೇರಿದಂತೆ ತುರ್ತು ಸೇವೆಗಳ ದೂರವಾಣಿ ಸಂಖ್ಯೆಗಳಿರುವ ಫ್ಲೆಕ್ಸ್ ನಲ್ಲಿ ಅಳವಡಿಸಬೇಕು. ಗಣೇಶೋತ್ಸವದ ಮೆರವಣಿಗೆ ನಡೆಸುವ ಸಂಘಟಕರು ಕನಿಷ್ಠ ಮೂರು ದಿನಗಳ ಮುಂಚಿತವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಮೆರವಣಿಗೆ ಮಾರ್ಗದ ಮಾಹಿತಿ ನೀಡಬೇಕು. ಇದರಿಂದ ಸಂಚಾರ ನಿಯಂತ್ರಣ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಸುರಕ್ಷತೆಗಾಗಿ ಅಗತ್ಯ ವ್ಯವಸ್ಥೆ ಕೈಗೊಳ್ಳಲು ಅನುಕೂಲವಾಗಲಿದೆ. ಎತ್ತರದ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವ ಸಂದರ್ಭದಲ್ಲಿ ವಿದ್ಯುತ್ ತಂತಿಗಳಿಂದ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ರಾತ್ರಿ ವೇಳೆ ಪೆಂಡಾಲ್‌ನಲ್ಲಿ ಮೂರ್ತಿ ಇರಿಸಿದ ಸ್ಥಳಗಳಲ್ಲಿ ಸಂಘಟಕರ ಕಡೆಯಿಂದ ಕನಿಷ್ಠ ಇಬ್ಬರು ಜವಾಬ್ದಾರಿಯುತ ವ್ಯಕ್ತಿಗಳು ಕಾವಲಿರಬೇಕು. ಅವರ ಸಂಪರ್ಕ ಸಂಖ್ಯೆಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕು. ದೊಡ್ಡ ಪ್ರಮಾಣದ ಮೆರವಣಿಗೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಕಾರ್ಯಕ್ರಮಗಳಲ್ಲಿ ಸಂಘಟಕರು ಸ್ವಯಂಸೇವಕರ ತಂಡವನ್ನು ಗುರುತಿಸಿ, ಅವರ ಹೆಸರು ಹಾಗೂ ಸಂಪರ್ಕ ಸಂಖ್ಯೆಯನ್ನು ಪೊಲೀಸ್ ಠಾಣೆಗೆ ನೀಡಬೇಕು. ಅಗತ್ಯವಿರುವ ಕಡೆ ಸ್ವಯಂಸೇವಕರಿಗೆ ಗುರುತಿನ ಚೀಟಿ ನೀಡುವಂತೆ ಸೂಚಿಸಲಾಗಿದೆ.ಗಣೇಶೋತ್ಸವದ ಸಂದರ್ಭದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳು ಹಾಗೂ ಪರಿಸರ ಸಂರಕ್ಷಣಾ ಕಾಯ್ದೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಎಚ್ಚರಿಸಿದರು. ನೀರಿನಲ್ಲಿ ಗಣಪತಿ ವಿಸರ್ಜನೆ ಮಾಡುವ ಸ್ಥಳಗಳಲ್ಲಿ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ. ಹೊಂಡ, ಕೆರೆ ಸೇರಿದಂತೆ ವಿಸರ್ಜನಾ ಸ್ಥಳಗಳಲ್ಲಿ ಮುಳುಗುವಿಕೆ ತಡೆಯಲು ಟ್ಯೂಬ್, ಹಗ್ಗ ಹಾಗೂ ಇತರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಗಣೇಶೋತ್ಸವ ಸಂಘಟಕರಿಗೆ ಈಗಾಗಲೇ ಸುರಕ್ಷತಾ ಮಾರ್ಗಸೂಚಿಗಳನ್ನು ಒಳಗೊಂಡ ನಮೂನೆಗಳನ್ನು ಪೊಲೀಸ್ ಠಾಣೆಗಳ ಮೂಲಕ ತಲುಪಿಸಲಾಗಿದ್ದು, ಅವುಗಳನ್ನು ಓದಿ ಪಾಲಿಸುವುದಾಗಿ ಅಂಡರ್‌ಟೇಕಿಂಗ್ ನೀಡಲು ಹೇಳಲಾಗಿದೆ ಎಂದು ಹೇಳಿದರು. ಗಣೇಶೋತ್ಸವವನ್ನು ಶಾಂತಿ, ಸೌಹಾರ್ದತೆ ಹಾಗೂ ಸುರಕ್ಷಿತವಾಗಿ ಆಚರಿಸಲು ಪೊಲೀಸ್ ಇಲಾಖೆ ಸಂಪೂರ್ಣ ಸಿದ್ಧವಾಗಿದ್ದು, ಮೊದಲ ಗಣಪತಿ ವಿಸರ್ಜನೆಯಿಂದ ಕೊನೆಯ ವಿಸರ್ಜನೆಯವರೆಗೂ ಅಗತ್ಯ ಪೊಲೀಸ್ ಬಂದೋಬಸ್ತ್ ಹಾಗೂ ಸುರಕ್ಷತಾ ವ್ಯವಸ್ಥೆ ಮಾಡಲಾಗುವುದು. ಸಂಘಟಕರು ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಹಬ್ಬದ ಯಶಸ್ವಿ ಆಚರಣೆಗೆ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆ ಪರವಾಗಿ ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಗ್ಗಟ್ಟಿದ್ದರೆ ವಕ್ಫ್ ಸಂಸ್ಥೆಗಳ ಅಭಿವೃದ್ಧಿ ಸಾಧ್ಯ!
ವ್ಯಕ್ತಿ ಜೀವಂತವಾಗಿದ್ದರೂ 5 ವರ್ಷಗಳಿಂದ ಸರ್ಕಾರಿ ದಾಖಲೆಗಳಲ್ಲಿ ಮೃತ!