ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಬಿಜೆಪಿ ನಗರಸೇವಕಿ ಸೋನಲ್ ರಾಜೇಶ ಕೊಠಿಯಾ ಅಧ್ಯಕ್ಷೆಯಾಗಿ ಮತ್ತು ಸಂತೋಷ ಸಾಂಗಾವಕರ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿಯ ಸೋನಲ್ ಅವರು 17 ಮತ ಪಡೆದು ರಾಷ್ಟ್ರೀಯವಾದಿ ಪಕ್ಷದ ಶರದಚಂದ್ರ ಪವಾರ್ ಗುಂಪಿನ ಅನಿತಾ ದಿಲೀಪ್ ಪಠಾಡೆಯನ್ನು, ಸಂತೋಷ ಸರ್ಫರಾಜ್ ದಾದಾಸಾಹೇಬ್ ಬಡೆಘರ್ ಅವರನ್ನು ಸೋಲಿಸಿದರು. ಇಬ್ಬರು ಕಾಂಗ್ರೆಸ್ ಮತ್ತು ಓರ್ವ ಪಕ್ಷೇತರ ನಗರಸೇವಕನ ಬೆಂಬಲದೊಂದಿಗೆ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ.
ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಕಸರತ್ತು ನಡೆಸಿತ್ತು. ಆದರೆ, 3 ಕಾಂಗ್ರೆಸ್ ನಗರಸೇವಕರಲ್ಲಿ ಇಬ್ಬರು ಮತ್ತು ಓರ್ವ ಪಕ್ಷೇತರ ನಗರಸೇವಕ ಬಿಜೆಪಿ ಬೆಂಬಲಿಸಿದ್ದು, ಕಾಂಗ್ರೆಸ್ ಮುಖಭಂಗ ಅನುಭವಿಸಿತು. ಕಾಂಗ್ರೆಸ್ ನ ಓರ್ವ ಕಾರ್ಪೋರೇಟರ್ ಗೈರಾಗಿದ್ದರು.ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಲ್ ಎರಚಿ, ಡಾಲ್ಬಿ ಹಾಡಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ನೂತನ ಅಧ್ಯಕ್ಷ-ಉಪಾಧ್ಯಕ್ಷರು ನಗರದ ಎಲ್ಲ ಮಹಾಪುರುಷರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರೊಂದಿಗೆ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಎಂ.ಪಿ. ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ಎಲ್ಲ ನಿರ್ದೇಶಕರು, ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ನಗರಸೇವಕ ಜಯವಂತ ಭಾಟಲೆ, ರಾಜೇಂದ್ರ ಗುಂಡೆಶಾ, ನೀತಾ ಬಾಗಡೆ, ವಿಲಾಸ ಗಾಡಿವಡ್ಡರ, ನಗರಸೇವಕರು ಸೇರಿ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.