ಸಾಗರ: ಪಟ್ಟಣದ ವಿಜಯನಗರ ಬಡಾವಣೆ ಸಮೀಪದ ಭೀಮನಕೋಣೆ ರಸ್ತೆಯಲ್ಲಿ ಹೊಸ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಶುಕ್ರವಾರ ವಿಜಯನಗರ ನಾಗರಿಕ ವೇದಿಕೆ ವತಿಯಿಂದ ಮದ್ಯದಂಗಡಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ನಗರಸಭೆ ಸದಸ್ಯ ಕೆ.ಆರ್.ಗಣೇಶಪ್ರಸಾದ್, ಶಾಂತಿಯನ್ನು ಬಯಸುವ ವಿಜಯನಗರ ಬಡಾವಣೆಗೆ ಹೊಂದಿಕೊಂಡ ಭೀಮನಕೋಣೆ ರಸ್ತೆಯಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗಿರುವುದು ಖಂಡನೀಯ. ಹೊಸ ಮದ್ಯದಂಗಡಿ ಪ್ರಾರಂಭ ಮಾಡುವಾಗ ನಗರಸಭೆ ಪರವಾನಿಗೆ ಸೇರಿದಂತೆ ಯಾವುದೇ ಕಾನೂನು ಪಾಲನೆ ಮಾಡಿಲ್ಲ. ಶಾಸಕರಿಗೆ ಈ ಬಗ್ಗೆ ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಯಾವುದೇ ಕಾನೂನು ಪಾಲನೆ ಮಾಡದೆ ರಾತ್ರೋರಾತ್ರಿ ಮದ್ಯದಂಗಡಿ ತೆರೆಯಲಾಗಿದೆ ಎಂದು ದೂರಿದ ಅವರು, ಈ ಭಾಗದಲ್ಲಿ ರಾಮನಗರ, ವಿಜಯನಗರ ಸೇರಿದಂತೆ ಅನೇಕ ಬಡಾವಣೆಗಳು ಬರುತ್ತವೆ. ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು. ನಗರಸಭೆ ಸದಸ್ಯ ರವಿ ಲಿಂಗನಮಕ್ಕಿ ಮಾತನಾಡಿ, ಹೊಸದಾಗಿ ಮದ್ಯದಂಗಡಿ ತೆರೆದಿರುವುದು ಶಾಸಕರ ಗಮನಕ್ಕೆ ಇಲ್ಲ. ಮಾಹಿತಿ ಹಕ್ಕಿನಡಿ ಪರಿಶೀಲನೆ ನಡೆಸಿದಾಗ ಮದ್ಯದಂಗಡಿ ತೆರೆಯುವವರು ಯಾವುದೇ ಕಾನೂನುಪಾಲನೆ ಮಾಡಿಲ್ಲ. ಸರ್ಕಾರ ತೆರಿಗೆ ಸಂಗ್ರಹಿಸುವ ಉದ್ದೇಶದಿಂದ ಎಲ್ಲೆಂದರಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು. ಮದ್ಯದಂಗಡಿಯಿಂದ ಸ್ಥಳೀಯವಾಗಿ ಶಾಂತಿಯುತ ವಾತಾವರಣ ಹದಗೆಡುವ ಸಾಧ್ಯತೆ ಇದೆ. ಜನರ ನೆಮ್ಮದಿ ಕಿತ್ತುಕೊಂಡು ಅಬಕಾರಿ ಮೂಲಕ ಹಣ ಸಂಗ್ರಹ ಮಾಡುವ ಸರ್ಕಾರದ ನೀತಿಯನ್ನು ನಾಗರಿಕರು ಖಂಡಿಸುತ್ತೇವೆ ಎಂದರು.ನಗರಸಭೆ ಸದಸ್ಯರಾದ ಆರ್.ಶ್ರೀನಿವಾಸ್ ಮೇಸ್ತ್ರಿ, ಅರವಿಂದ ರಾಯ್ಕರ್, ಪ್ರಮುಖರಾದ ನಾರಾಯಣಮೂರ್ತಿ ಕಾನುಗೋಡು, ಶಶಿಕಾಂತ್, ಸತೀಶ್.ಕೆ, ಪರಶುರಾಮ್, ವೈ.ಮೋಹನ್, ಸತ್ಯನಾರಾಯಣ, ಶ್ರೀನಾಥ್, ಶ್ರೀಧರಮೂರ್ತಿ ಇನ್ನಿತರರು ಹಾಜರಿದ್ದರು.