ಶೀಘ್ರ ಸಹಸ್ರ ಕೂಟ ಜೀನಾಲಯ ಅಭಿವೃದ್ಧಿ

KannadaprabhaNewsNetwork | Published : Dec 27, 2024 12:47 AM

ಸಾರಾಂಶ

ಅರಸೀಕೆರೆ ನಗರದಲ್ಲಿರುವ ಏಕಶೀಲ ಸಹಸ್ರಕೂಟ ಜಿನಾಲಯ ದೇಶದಲ್ಲಿಯೇ ವಿಶಿಷ್ಟವಾಗಿದೆ. ಈ ಬಸದಿಯನ್ನು ಮೂಲ ಸೌಕರ್ಯಗಳ ಮೂಲಕ ಅಭಿವೃದ್ಧಿಪಡಿಸಲು ಕಾರ್ಯ ಪ್ರವೃತ್ತವಾಗಲಿದ್ದು, ಶ್ರವಣಬೆಳಗೊಳ ಶ್ರೀಮಠವು ಎಲ್ಲ ರೀತಿಯ ಜವಾಬ್ದಾರಿ ತೆಗೆದುಕೊಂಡು ಸ್ಥಳೀಯ ಜಿನಾಲಯವನ್ನು ವಿಶ್ವದಲ್ಲಿ ಧಾರ್ಮಿಕ ಶ್ರದ್ಧಾಕೇಂದ್ರವನ್ನಾಗಿ ಕೊಂಡೊಯ್ಯಲಾಗುವುದು ಎಂದು ಶ್ರವಣಬೆಳಗೊಳ ಶ್ರೀಮಠದ ಪೀಠಾಧ್ಯಕ್ಷರಾದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದಲ್ಲಿರುವ ಏಕಶೀಲ ಸಹಸ್ರಕೂಟ ಜಿನಾಲಯ ದೇಶದಲ್ಲಿಯೇ ವಿಶಿಷ್ಟವಾಗಿದೆ. ಈ ಬಸದಿಯನ್ನು ಮೂಲ ಸೌಕರ್ಯಗಳ ಮೂಲಕ ಅಭಿವೃದ್ಧಿಪಡಿಸಲು ಕಾರ್ಯ ಪ್ರವೃತ್ತವಾಗಲಿದ್ದು, ಶ್ರವಣಬೆಳಗೊಳ ಶ್ರೀಮಠವು ಎಲ್ಲ ರೀತಿಯ ಜವಾಬ್ದಾರಿ ತೆಗೆದುಕೊಂಡು ಸ್ಥಳೀಯ ಜಿನಾಲಯವನ್ನು ವಿಶ್ವದಲ್ಲಿ ಧಾರ್ಮಿಕ ಶ್ರದ್ಧಾಕೇಂದ್ರವನ್ನಾಗಿ ಕೊಂಡೊಯ್ಯಲಾಗುವುದು ಎಂದು ಶ್ರವಣಬೆಳಗೊಳ ಶ್ರೀಮಠದ ಪೀಠಾಧ್ಯಕ್ಷರಾದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು.

ಶ್ರವಣಬೆಳಗೊಳದಿಂದ ಬೆಳಗಾವಿಗೆ ಪ್ರಯಾಣ ಮಾಡುವ ಮಾರ್ಗಮಧ್ಯೆ ನಗರದ ಹುಳಿಯಾರು ರಸ್ತೆಯಲಿರುವ ಸಹಸ್ರ ಕೂಟ ಜಿನಾಲಯಕ್ಕೆ ಭೇಟಿ ನೀಡಿದ ಅವರು, ಭಕ್ತಾದಿಗಳಿಗೆ ಆಶೀರ್ವದಿಸಿ ಮಾತನಾಡಿದರು. ಶ್ರೀಮಠದಲ್ಲಿ ಕಳೆದ ೫೪ ವರ್ಷಗಳಿಂದ ಸೇವೆ ಸಲ್ಲಿಸಿದ್ದ ಹಿರಿಯ ಸ್ವಾಮೀಜಿಯವರು ಸಮಾಧಿಯಾದ ಒಂದು ವರ್ಷದ ನಂತರ ಅರಸೀಕೆರೆ ಸಹಸ್ರಕೂಟ ಜೀನಾಲಯಕ್ಕೆ ನಾನು ಪ್ರಪ್ರಥಮ ಭೇಟಿ ನೀಡಿರುವುದು ಸಂತಸ ತಂದಿದೆ. ಇದನ್ನು ಪ್ರವಾಸಿ ತಾಣಕ್ಕಿಂತ ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ರೂಪಿಸಲು ಅಭಿವೃದ್ಧಿಗಳನ್ನು ಪ್ರಾರಂಭಿಸಲಿದ್ದೇವೆ. ಬೆಳಗಾವಿ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಋಷಿಮುನಿಗಳು ಕಾಲ್ನಡಿಗೆಯೊಂದಿಗೆ, ಯಾತ್ರಾತ್ರಿಗಳು ವಿವಿಧ ವ್ರತ ಮತ್ತು ಧಾರ್ಮಿಕ ನಿಷ್ಠೆಗಳಿಂದ ಶ್ರವಣಬೆಳಗೊಳ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುತ್ತಾರೆ. ಈ ಮಾರ್ಗಮಧ್ಯೆ ಹಾಸನ ಜಿಲ್ಲೆ ಪ್ರವೇಶಕ್ಕೆ ಮಹಾದ್ವಾರವಾಗಿರುವ ಅರಸೀಕೆರೆ ನಗರದಲ್ಲಿರುವ ಏಕಶೀಲ ಸಹಸ್ರಕೂಟ ಜಿನಾಲಯಕ್ಕೆ ಭೇಟಿ ನೀಡುವುದು ಸಾಂಪ್ರದಾಯಕ ವಾಡಿಕೆಯಾಗಿದೆ.

ಹಿರಿಯ ಸ್ವಾಮೀಜಿಯವರು ಈ ಜಿನಾಲಯವನ್ನು ಅಭಿವೃದ್ಧಿಪಡಿಸಿ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಜೀರ್ಣೋದ್ಧಾರಗೊಳಿಸಿದ್ದಾರೆ. ಈ ಪವಿತ್ರ ಕ್ಷೇತ್ರದಲ್ಲಿ ಋಷಿಮುನಿಯವರು, ಯಾತ್ರಿಗಳು ತಂಗಲು, ವಿಶ್ರಾಂತಿ ಹಾಗು ಧಾರ್ಮಿಕ ಚಟುವಟಿಕೆಗಳಿಗಾಗಿ ತ್ಯಾಗಿಭವನ ಮತ್ತು ಆಹಾರ ತಯಾರಿಕ ಭವನಗಳೊಂದಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲಾಗುವುದು. ಜಿಲ್ಲೆಯಲ್ಲಿರುವ ವಿವಿಧ ಜೀನ ಮಂದಿರಗಳೊಂದಿಗೆ ಒಂದು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಅರಸೀಕೆರೆ ಸಹಸ್ರ ಕೂಟ ಜಿನಾಲಯ ಕೂಡ ಶ್ರವಣಬೆಳಗೊಳ ಶ್ರೀಮಠದ ಧಾರ್ಮಿಕ ಅಧಿಕಾರದ ವ್ಯಾಪ್ತಿಗೆ ಬರುತ್ತದೆ. ಶ್ರೀಕ್ಷೇತ್ರದ ಹಿರಿಯ ಸ್ವಾಮಿಜಿಯವರ ಕನಸು ಮತ್ತು ಮಾರ್ಗದರ್ಶನದಂತೆ ಜಿನಾಲಯ ಅಭಿವೃದ್ಧಿಪಡಿಸಲಾಗುವುದು. ಸ್ಥಳೀಯರು ಮತ್ತು ಮಾಧ್ಯಮಗಳ ಸಹಕಾರ ಅತ್ಯಮೂಲ್ಯವಾಗಿದ್ದು ಅವೆಲ್ಲರ ಸಹಕಾರದೊಂದಿಗೆ ಈ ಬಸದಿಯನ್ನು ಮುಂದಿನ ದಿನಗಳಲ್ಲಿ ವಿಶ್ವಕ್ಕೆ ಪರಿಚಯ ಮಾಡಿಕೊಡುವುದರೊಂದಿಗೆ ಶ್ರದ್ಧಾಭಕ್ತಿಯ ಧಾರ್ಮಿಕ ಕೇಂದ್ರವನ್ನಾಗಿ ಕೊಡುಗೆಯಾಗಿ ನೀಡಲಾಗುವುದು ಎಂದರು.

ಸಹಸ್ರಕೂಟ ಜಿನಾಲಯ ಅಧ್ಯಕ್ಷ ಶಾಂತರಾಜು ಮಾತನಾಡಿ, ಅರಸೀಕೆರೆ ನಗರವೂ ಸೇರಿದಂತೆ ತಾಲೂಕಿನಾದ್ಯಂತ ಜೈನ ಮುನಿಗಳು ಸಂಚರಿಸಿ ಧರ್ಮ ಪ್ರಚಾರ ಮಾಡಿದ ಕುರುಹುಗಳು ಇಂದಿಗೂ ಕಾಣಸಿಗುತ್ತವೆ. ಬೆಳಗುಂಬ ಗ್ರಾಮದ ಬಳಿಯೂ ಜೈನ ದೇವಾಲಯಗಳ ಕುರುಹುಗಳು ದೊರೆತಿದ್ದು, ಅವುಗಳನ್ನು ಸಂರಕ್ಷಣೆ ಮಾಡಲಾಗುವುದು. ನಮ್ಮ ದೇವಾಲಯಕ್ಕೆ ನೂತನ ಶ್ರೀಯವರು ಆಗಮಿಸಿ ಆಶೀರ್ವಚನ ನೀಡುವುದರೊಂದಿಗೆ ಅನೇಕ ಸಲಹೆ ಮತ್ತು ಮಾರ್ಗದರ್ಶನಗಳನ್ನು ನೀಡಿದ್ದಾರೆ. ಬಸದಿಯಲ್ಲಿರುವ ಸಹಸ್ರಕೂಟ, ಶ್ರೀ ಪದ್ಮಾವತಿ ಅಮ್ಮನವರು, ಶ್ರೀ ಜ್ವಾಲಾಮಾಲ ದೇವಿ ಮತ್ತು ಶ್ರೀಶಾರದ ಅಮ್ಮನವರಿಗೆ ಪ್ರತಿನಿತ್ಯ ಪೂಜಾ ಕೈಂಕರ್ಯ ನಡೆಯುತ್ತಿರುತ್ತವೆ. ಭಾರತದಲ್ಲಿ ಎರಡು ಸ್ಥಳಗಳಲ್ಲಿ ಮಾತ್ರ ಸಹಸ್ರಕೂಟ ಜಿನಾಲಯವಿದ್ದು, ಒಂದು ಜಿನಾಲಯ ನಮ್ಮ ಅರಸೀಕೆರೆಯಲ್ಲಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಹಿಳೆಯರು ಕಳಸದೊಂದಿಗೆ ಶ್ರೀಯವರನ್ನು ಬರಮಾಡಿಕೊಂಡು ದೇವರ ನಾಮಸ್ಮರಣೆಗಳೊಂದಿಗೆ ಪಾದಪೂಜೆ ನೆರವೇರಿಸಿದರು. ಸಹಸ್ರ ಜಿನಾಲಯ ಸಮಿತಿ ಖಜಾಂಚಿ ರಾಜು, ಪದಾಧಿಕಾರಿಗಳಾದ ಮೃತ್ಯುಂಜಯ, ಮುಕ್ತೇಶ್, ಬಾಹುಬಲಿ ದಂಡಾವತಿ, ವಸುಪಾಲ್ ಜೈನ್, ಅರ್ಚಕರಾದ ಅಕ್ಷಯ್ ಕುಮಾರ್‌, ನವರತನ್, ಸೋಹನ್ ಲಾಲ್, ಬಿ.ವಿ ಅಶೋಕ್, ಮೋಹನ್ ಲಾಲ್, ಚಕ್ರೇಶ್ವರಿ ಮಹಿಳಾ ಸಂಘದ ಪರಿಮಳ, ಜ್ವಾಲದರ್ಶನ್, ನಳಿನ ವಸುಪಾಲ್, ಸವಿತಾ, ಪದ್ಮ, ಪಂಕಜ, ಚೈತ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

---------

ಫೋಟೋ:

ಅರಸೀಕೆರೆ ನಗರದ ಹುಳಿಯಾರು ರಸ್ತೆಯಲಿರುವ ಸಹಸ್ರ ಕೂಟ ಜಿನಾಲಯಕ್ಕೆ ಶ್ರವಣಬೆಳಗೊಳ ಶ್ರೀಮಠದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿ ಭೇಟಿ ನೀಡಿದರು.

Share this article