ಕನ್ನಡಪ್ರಭ ವಾರ್ತೆ ವಿಜಯಪುರ: ಹಾಸ್ಯದ ಹೊನಲು ಹರಿಸುವ ಮೂಲಕ ಖ್ಯಾತಿ ಪಡೆದ ಹುಬ್ಬಳ್ಳಿಯ ಗುರು ಇನ್ಸಿಟ್ಯೂಟ್ ತಂಡದ ಸಹಿ ರೀ ಸಹಿ ಎಂಬ ಹೊಸ ಹಾಸ್ಯ ನಾಟಕ ನಗರದ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಪ್ರದರ್ಶನ ಕಂಡಿತು.
ಸುಮಾರು ಎರಡೂವರೆ ತಾಸುಗಳ ಸಮಯದಲ್ಲಿ ಈ ನಾಟಕ ಪ್ರೇಕ್ಷರು ಬಿದ್ದು ಬಿದ್ದು ನಗುವಂತೆ ಮಾಡಿತು. ಜೀವನದ ಸಾಕಷ್ಟು ಜಂಜಾಟಗಳ ಮಧ್ಯೆ ಸಿಲುಕಿ ನಗುವುದನ್ನೇ ಮರೆತ ಜನರಿಗೆ ಮುದ ನೀಡುವಂತಿತ್ತು. ಆಸ್ತಿಯ ಸಲುವಾಗಿ ವ್ಯಕ್ತಿಗಳು, ಕುಟುಂಬಸ್ಥರು ಏನು ಬೇಕಾದರು ಮಾಡಲು ಸಿದ್ದರಿರುತ್ತಾರೆ ಎಂಬ ತಿರುಳು ಹೊಂದಿರುವ ಈ ನಾಟಕ ಶ್ರೀಮಂತ ವ್ಯಕ್ತಿಯೊಬ್ಬನ ಕೊಲೆಯ ಬಳಿಕ ಆತನ ಸಹೀಗಾಗಿ ಕುಟುಂಬಸ್ಥರ ಪರದಾಟದ ಸುತ್ತ ಸುತ್ತುವ ಕಥೆ ಕ್ಷಣಕ್ಷಣಕ್ಕು ಕುತೂಹಲ ಕೆರಳಿಸಿತು.ಡಾ.ಯಶವಂತ ಸರದೇಶಪಾಂಡೆ ನೇತೃತ್ವದಲ್ಲಿ ಇನ್ನುಳಿದ ಕಲಾವಿದರಾದ ಕೃಷ್ಣಮೂರ್ತಿ ಗಾಂವಕರ, ಶಿಲ್ಪಾ ಮೋಕಾಶಿ ಪಾಂಡೆ, ಅರ್ಪಿತಾ.ಬಿ, ಪ್ರಿಯಾ ಕುಲಕರ್ಣಿ, ಪ್ರದೀಪ ಮುಧೋಳ, ರವಿ ಕುಲಕರ್ಣಿ, ಅರವಿಂದ ಪಾಟೀಲ್, ಸುಮಂತ ಕುಲಕರ್ಣಿ, ಶೇಖರ್ ಪಾಟೀಲ್ ಸೇರಿದಂತೆ ಇತರೇ ಕಲಾವಿದರ ಅಭಿಯನ ಅದ್ಭುತವಾಗಿತ್ತು. ಜೊತೆಗೆ ಸ್ಟೇಜ್ ನಿರ್ವಹಣೆ ಜೀವನ ಫರ್ನಾಂಡೀಸ್, ಲೈಟಿಂಗ್ ನಿರ್ವಹಣೆ ನಾಗರಾಜ ಪಾಟೀಲ ಹೊತ್ತಿದ್ದರು.
ಗಂಗಾವತಿ ರೇಷ್ಮೆ ರಂಗೋತ್ಸವ ಎಂಬ ಈ ನಾಟಕ ಹಬ್ಬವನ್ನು ವಿಜಯಪುರದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಸ್ಥೆಯವರು ಆಯೋಜಿಸಿದ್ದು, ಮರಾಠಿಯ ಖ್ಯಾತ ನಾಟಕಕಾರ ಕೇದಾರ ಶಿಂಧೆ ರಚಿಸಿದ ಸಹಿ ರೀ ಸಹಿ ನಾಟಕವನ್ನು ಡಾ.ಯಶವಂತ ಸರದೇಶಪಾಂಡೆ ಕನ್ನಡಕ್ಕೆ ಅನುವಾದಿಸಿ, ನಿರ್ದೇಶಿಸಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು.ಹುಬ್ಬಳ್ಳಿಯ ಗಂಗಾವತಿ ಸಿಲ್ಕ್ ಪ್ಯಾಲೇಸ್ ಅವರ ಪ್ರಾಯೋಜಕತ್ವದಲ್ಲಿ ಸಾವಿರಾರು ರೂಪಾಯಿ ಬೆಲೆಬಾಳುವ ಹತ್ತು ಸೀರೆಗಳನ್ನು ವೀಕ್ಷಣೆಗೆ ಬಂದ ಪ್ರೇಕ್ಷಕರಿಗೆ ಲಕ್ಕಿ ಡಿಪ್ ಮೂಲಕ ಉಚಿತವಾಗಿ ನೀಡಲಾಯಿತು.