ಪ್ರಕೃತಿಯಲ್ಲಿ ಲೀನರಾದ ಸಾಹಿತಿ ನಾ.ಡಿಸೋಜ

KannadaprabhaNewsNetwork |  
Published : Jan 08, 2025, 12:19 AM IST
ಸರ್ಕಾರಿ ಗೌರವ ಸಲ್ಲಿಸಲಾಯಿತು | Kannada Prabha

ಸಾರಾಂಶ

ಸಾಗರ: ಹಿರಿಯ ಸಾಹಿತಿ ನಾ.ಡಿಸೋಜ ಅವರ ಅಂತ್ಯಸಂಸ್ಕಾರವನ್ನು ಮಂಗಳವಾರ ಸಾಗರದಲ್ಲಿ ನಡೆಸಲಾಯಿತು.

ಸಾಗರ: ಹಿರಿಯ ಸಾಹಿತಿ ನಾ.ಡಿಸೋಜ ಅವರ ಅಂತ್ಯಸಂಸ್ಕಾರವನ್ನು ಮಂಗಳವಾರ ಸಾಗರದಲ್ಲಿ ನಡೆಸಲಾಯಿತು.

ಮಂಗಳೂರಿನಿಂದ ಸೋಮವಾರ ಮಧ್ಯಾಹ್ನ ತರಲಾದ ಡಿಸೋಜ ಅವರ ಪಾರ್ಥಿವ ಶರೀರವನ್ನು ಪಟ್ಟಣದ ನೆಹರೂ ನಗರದಲ್ಲಿರುವ ಅವರ ಮನೆಯಲ್ಲಿ ಇಡಲಾಗಿತ್ತು. ತಡರಾತ್ರಿಯವರೆಗೂ ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಸೇರಿದಂತೆ ಹಲವು ರಾಜಕೀಯ ಮುಖಂಡರು, ಸಂಘಸಂಸ್ಥೆಗಳ ಪ್ರಮುಖರು, ಊರಿನ ನಾಗರಿಕರು ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.

ಲಾಗಾಯ್ತಿನಿಂದಲೂ ವಾಸವಾಗಿದ್ದ ಡಿಸೋಜ ಅವರ ಸಣ್ಣ ಹಂಚಿನ ಮನೆಯಲ್ಲಿ ನೀರವ ಮೌನ ಆವರಿಸಿತ್ತು. ಅಂತಿಮ ದರ್ಶನಕ್ಕೆ ಬಂದ ಗಣ್ಯರು ಡಿಸೋಜ ಅವರ ಪತ್ನಿ ಹಾಗೂ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳುತ್ತಿದುದು ಸಾಮಾನ್ಯವಾಗಿತ್ತು.

ಮಂಗಳವಾರ ಬೆಳಗ್ಗೆ ಡಿಸೋಜಾ ಅವರ ಪಾರ್ಥಿವ ಶರೀರವನ್ನು ಅವರ ಮನೆಯಿಂದ ಮೆರವಣಿಗೆಯ ಮೂಲಕ ಗಾಂಧಿ ಮೈದಾನಕ್ಕೆ ತರಲಾಯಿತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಾದು ಬಂದ ಮೆರವಣಿಗೆಯಲ್ಲಿ ಅನೇಕರು ಪಾಲ್ಗೊಂಡಿದ್ದರು. ಮಾರ್ಗದಲ್ಲಿ ಬರುವ ಅಂಗಡಿಗಳ ಮಾಲಿಕರು, ನಾಗರಿಕರು ಪುಷ್ಪಾರ್ಚನೆ ಮಾಡಿ ಡಿಸೋಜಾ ಅವರಿಗೆ ಗೌರವ ಸಲ್ಲಿಸಿದರು.

ತಾಲೂಕು ಆಡಳಿತ ಗಾಂಧಿ ಮೈದಾನದಲ್ಲಿರುವ ನಗರಸಭೆ ರಂಗಮಂದಿರದಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿತ್ತು. ಸಾವಿರಾರು ಅಭಿಮಾನಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಊರಿನ ಹೊರ ಊರಿನ ಗಣ್ಯರು ಡಿಸೋಜಾ ಅವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.ಸರ್ಕಾರಿ ಗೌರವ :

ನಗರಸಭೆ ರಂಗಮಂದಿರದಲ್ಲಿ ಸರ್ಕಾರದ ಪರವಾಗಿ ಶಾಸಕ ಗೋಪಾಲಕೃಷ್ಣ ಬೇಳೂರು, ಉಪವಿಭಾಗಾಧಿಕಾರಿ ಯತೀಶ್ ಆರ್.ಪಾರ್ಥೀವ ಶರೀರವನ್ನು ಬರಮಾಡಿಕೊಂಡರು. ಇದೇ ವೇಳೆ ಪೊಲೀಸ್ ಪೆರೆಡ್ ಮೂಲಕ ನಾ.ಡಿಸೋಜ ಅವರಿಗೆ ಸರ್ಕಾರಿ ಗೌರವವನ್ನು ಸಲ್ಲಿಸಲಾಯಿತು.ಸಂಜೆ ೫ಕ್ಕೆ ಅಂತ್ಯ ಸಂಸ್ಕಾರ :ಮಧ್ಯಾಹ್ನ ೩ ಗಂಟೆಯವರೆಗೆ ಅಂತಿಮದರ್ಶನ ನಡೆದು ನಂತರ ಡಿಸೋಜ ಅವರ ಪಾರ್ಥಿವ ಶರೀರವನ್ನು ಸಂತ ಜೋಸೆಫರ ದೇವಾಲಯಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಧರ್ಮಗುರು ಪೆಲಿಕ್ಸ್ ನರೋನಾ ಅವರ ನೇತೃತ್ವದಲ್ಲಿ ಕ್ರೈಸ್ತ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳು ನಡೆದು ಮೃತರ ಸದ್ಗತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಸಂಜೆ ೫ಗಂಟೆಗೆ ದೇವಾಲಯದ ಹಿಂಭಾಗದಲ್ಲಿರುವ ಸಮಾಧಿ ಸ್ಥಳದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಪ್ರಕೃತಿ, ಪರಿಸರ, ನೆಲ, ಜಲವನ್ನು ಅತಿಯಾಗಿ ಪ್ರೀತಿಸುತ್ತಿದ್ದ ನಾ.ಡಿಸೋಜ ಅಂತಿಮವಾಗಿ ಈ ಪ್ರಕೃತಿಯಲ್ಲಿಯೇ ಲೀನರಾದರು.

ಶಾಲೆಗಳಲ್ಲಿ ಏಕಕಾಲದಲ್ಲಿ ನುಡಿನಮನ ಅಗಲಿದ ಹಿರಿಯ ಸಾಹಿತಿ ಡಾ.ನಾ.ಡಿಸೋಜ ಅವರಿಗೆ ತಾಲೂಕಿನ ಎಲ್ಲ ಶಾಲೆಗಳಲ್ಲಿ ಮಂಗಳವಾರ ಬೆಳಗ್ಗೆ ೧೧ ಗಂಟೆಗೆ ಏಕಕಾಲದಲ್ಲಿ ನುಡಿನಮನ ಸಲ್ಲಿಸಲಾಯಿತು. ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೊರಡಿಸಿದ್ದ ಸುತ್ತೋಲೆಯಂತೆ ಎಲ್ಲ ಶಾಲೆಗಳಲ್ಲಿ ಬೆಳಗ್ಗೆ ೧೧ ಗಂಟೆಗೆ ಸರಿಯಾಗಿ ಬೋಧನೆಯ ಒಂದು ಅವಧಿಯವರೆಗೆ ನುಡಿನಮನ ಸಲ್ಲಿಸಲಾಯಿತು. ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಡಿಸೋಜ ಅವರ ಬದುಕು - ಬರಹದ ಬಗ್ಗೆ ವಿವರಿಸಿ ನಮನ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ