ಮಂಗಳೂರು: ಯುವಜನತೆಯನ್ನು ಸಬಲೀಕರಣಗೊಳಿಸುವ ಮತ್ತು ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿನ ‘ಮೈ ಭಾರತ್’ (ದಕ್ಷಿಣ ಕನ್ನಡ), ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನ (ಸ್ವಾಯತ್ತ) ಎನ್‍ಎಸ್‍ಎಸ್ ಘಟಕ ಹಾಗೂ ಮಹಿಳಾ ಕೋಶದ ಜಂಟಿ ಸಹಯೋಗದೊಂದಿಗೆ ‘ವಿಕಸಿತ ಭಾರತಕ್ಕಾಗಿ ನಶಾ ಮುಕ್ತ ಯುವ - ರಾಷ್ಟ್ರೀಯ ಸಂಕಲ್ಪ ಸಮಾರೋಹ’ ಕಾರ್ಯಕ್ರಮ ಸೇಂಟ್ ಆಗ್ನೆಸ್ ಕನ್ವೆನ್ಷನ್ ಹಾಲ್‍ನಲ್ಲಿ ನಡೆಯಿತು.ಕಾರ್ಯಕ್ರಮ 100 ವಾರಗಳ ‘ನಶಾ ಮುಕ್ತ ಯುವ ಅಭಿಯಾನ’ಕ್ಕೆ ಅಧಿಕೃತ ಚಾಲನೆ ನೀಡಿತು. ಯುವಜನರನ್ನು ಮಾದಕ ವ್ಯಸನದಿಂದ ರಕ್ಷಿಸುವುದು, ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತೇಜಿಸುವುದು ಮತ್ತು ‘ವಿಕಸಿತ ಭಾರತ @2047’ ರಾಷ್ಟ್ರೀಯ ಪರಿಕಲ್ಪನೆಗೆ ಸೂಕ್ತ ಬೆಂಬಲ ನೀಡುವುದು ಜಾಗೃತಿ ಅಭಿಯಾನದ ಮುಖ್ಯ ಉದ್ದೇಶವಾಗಿದೆ.ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಮನೋರೋಗ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಅರುಣಾ ಯಡಿಯಾಳ್ ಮಾತನಾಡಿ, ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ತೀವ್ರ ಮಾನಸಿಕ ಮತ್ತು ನರಮಂಡಲದ ಹಾನಿಯ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಮಾದಕ ವ್ಯಸನಕ್ಕೆ ಬಲಿಯಾಗದೆ, ಮುಂಚಿತವಾಗಿಯೇ ಜಾಗೃತಿ ಹೊಂದುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿದರು.ಮೈ ಭಾರತ್ (ದಕ್ಷಿಣ ಕನ್ನಡ) ಉಪನಿರ್ದೇಶಕ ಉಲ್ಲಾಸ್ ಕೆ.ಟಿ.ಕೆ. ಮಾತನಾಡಿ, ಸಮಾಜದಿಂದ ಮಾದಕ ದ್ರವ್ಯದ ಪಿಡುಗನ್ನು ನಿರ್ಮೂಲನೆ ಮಾಡಲು ಮತ್ತು ಸಶಕ್ತ ಭಾರತ ನಿರ್ಮಾಣಕ್ಕೆ ಯುವಜನತೆ ಸಕ್ರಿಯ ನಾಯಕತ್ವ ವಹಿಸಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಗಣ್ಯರು ಯಾವುದೇ ರೀತಿಯ ಹಾನಿಕಾರಕ ವಸ್ತುಗಳಿಂದ ದೂರವಿರುವುದಾಗಿ ಹಾಗೂ ತಮ್ಮ ಸಮುದಾಯದಲ್ಲಿ ಈ ಬಗ್ಗೆ ಸಕ್ರಿಯವಾಗಿ ಜಾಗೃತಿ ಮೂಡಿಸುವುದಾಗಿ ‘ನಶಾ ಮುಕ್ತಿ ಸಂಕಲ್ಪ’ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ತಮ್ಮ ಬದ್ಧತೆಯನ್ನು ದಾಖಲಿಸಲು ಬೃಹತ್ ಸಹಿ ಸಂಗ್ರಹ ಅಭಿಯಾನವನ್ನು ನಡೆಸಲಾಯಿತು.
ಮಾದಕ ವ್ಯಸನದಿಂದ ವ್ಯಕ್ತಿಯ ಆರೋಗ್ಯ, ಕುಟುಂಬ ಮತ್ತು ಭವಿಷ್ಯದ ಮೇಲಾಗುವ ಭೀಕರ ಪರಿಣಾಮಗಳನ್ನು ಬಿಂಬಿಸುವ ಪ್ರಭಾವಶಾಲಿ ಬೀದಿ ನಾಟಕ ಹಾಗೂ ಸಾಂಸ್ಕೃತಿಕ ರೂಪಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಮೈ ಭಾರತ್ ಜಗದೀಶ್ ಕೆ., ಮಹಿಳಾ ಕೋಶದ ಸಂಚಾಲಕಿ ಲವಿತಾ ರಮ್ಯಾ ಡಿಸೋಜ, ಎನ್‍ಎಸ್‍ಎಸ್ ಯೋಜನಾಧಿಕಾರಿ ಪ್ರೀತಾ ಟೌರೊ ಮತ್ತಿತ್ತರರು ಇದ್ದರು.ಮುಂಬರುವ 100 ವಾರಗಳ ಕಾಲ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಈ ಜಾಗೃತಿ ಅಭಿಯಾನವನ್ನು ಸತತವಾಗಿ ಮುಂದುವರಿಸುವ ಜಂಟಿ ಸಂಕಲ್ಪ ನಡೆಸಲಾಯಿತು.