ಸರ್ಕಾರ ಮೀಸಲಿಟ್ಟ ಕೈಗಾರಿಕಾ ಪ್ರದೇಶ । ಒಂದೆಡೆ ಸಣ್ಣ ಕೈಗಾರಿಕೆಗಳ ಸ್ಥಾಪಿಸುವ ಉದ್ದೇಶ । ಇದಕ್ಕಾಗಿ 10 ಎಕರೆ ಪ್ರದೇಶ ಮೀಡಲು
ವಿದ್ಯಾಕಾಂತರಾಜ್ಕನ್ನಡಪ್ರಭ ವಾರ್ತೆ ಸಕಲೇಶಪುರ
ಸಣ್ಣ ಕೈಗಾರಿಕೆಗಳನ್ನು ಒಂದೇ ವಲಯದಲ್ಲಿ ಸ್ಥಾಪಿಸುವ ಉದ್ದೇಶದಿಂದ ಸರ್ಕಾರ ಮೀಸಲಿಟ್ಟ ಕೈಗಾರಿಕ ಪ್ರದೇಶ ಈಗ ಖಾಲಿ ಶೆಡ್‌ಗಳಿಂದ ತುಂಬಿಹೋಗಿದೆ.ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪಟ್ಟಣದ ಚಂಪಕನಗರ ಬಡಾವಣೆಯಲ್ಲಿ ಸ್ಥಾಪಿಸಲಾದ ಕೈಗಾರಿಕೆ ವಸಾಹತು ಉಳ್ಳವರು, ರಾಜಕೀಯ ಪ್ರಭಾವಿಗಳ ಪಾಲಾಗಿದ್ದು ಪಟ್ಟಣದಲ್ಲಿ ಕೈಗಾರಿಕೆಗಳ ಸ್ಥಾಪನೆ ಉದ್ದೇಶ ಈಡೇರದಾಗಿದೆ.
೧೯೮೪ ರಲ್ಲಿ ಚಂಪಕನಗರ ಬಡಾವಣೆಯ ಸರ್ವೇ ನಂಬರ್ ೧೬೧ ರಲ್ಲಿ ಹತ್ತು ಎಕರೆ ಪ್ರದೇಶವನ್ನು ಸಣ್ಣ ಕೈಗಾರಿಕೆ ಸ್ಥಾಪಿಸುವ ಉದ್ದೇಶದಿಂದ ಮೀಸಲಿಡಲಾಗಿತ್ತು. ಇದರಲ್ಲಿ ಐದು ಎಕರೆ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ೬೪ ನಿವೇಶನಗಳನ್ನು ೨೦೦೦, ೨೦೦೫ ಹಾಗೂ ೨೦೧೦ರಲ್ಲಿ ಕೈಗಾರಿಕೆ ಸ್ಥಾಪನೆ ಉದ್ದೇಶದ ವ್ಯಕ್ತಿಗಳಿಗೆ ಹಂಚಿಕೆ ಮಾಡಲಾಗಿತ್ತುಪ್ರಭಾವಿಗಳ ಪಾಲು:
ಕೈಗಾರಿಕ ಪ್ರದೇಶದಲ್ಲಿ ನಿವೇಶನ ಪಡೆದಿರುವ ಬಹುತೇಕ ವ್ಯಕ್ತಿಗಳು ರಾಜಕೀಯ ವ್ಯಕ್ತಿಗಳ ಹಿಂಬಾಲಕರಾಗಿದ್ದು. ಬಹುತೇಕ ವ್ಯಕ್ತಿಗಳು ನಿವೇಶನ ಪಡೆಯುವ ವೇಳೆ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮಕ್ಕೆ ನೀಡಿದ ಯೋಜನಾ ವರದಿಯಂತೆ ಕೈಗಾರಿಕೆಗಳನ್ನು ಸ್ಥಾಪಿಸಲು ವಿಫಲರಾಗಿದ್ದಾರೆ.ಶೆಡ್‌ಗಳು:
ನಿವೇಶನ ಹಂಚಿಕೆಯಾದ ಒಂದು ವರ್ಷದಲ್ಲಿ ಕಟ್ಟಡಗಳನ್ನು ನಿರ್ಮಿಸಿ ಉದ್ದೇಶಿತ ಕೈಗಾರಿಕೆಗಳನ್ನೆ ಸ್ಥಾಪಿಸಬೇಕು ಎಂಬುದು ನಿಗಮದ ನಿಯಮ. ಆದರೆ, ನಿವೇಶನ ಹಂಚಿಕೆಯಾಗಿ ೨೦ ವರ್ಷಗಳೇ ಕಳೆದರೂ ಶೇ.೯೦ರಷ್ಟು ನಿವೇಶನ ಪಡೆದಿರುವ ವ್ಯಕ್ತಿಗಳು ಕೈಗಾರಿಕೆಗಳನ್ನು ಸ್ಥಾಪಿಸದೆ ನಿವೇಶನವನ್ನು ಖಾಲಿ ಬಿಟ್ಟಿದ್ದರು. ಆದರೆ, ೨೦೨೧ ರಲ್ಲಿ ಖಾಲಿ ನಿವೇಶನಗಳನ್ನು ವಾಪಸ್ಸು ಪಡೆಯುವುದಾಗಿ ನಿಗಮ ಘೋಷಿಸಿದ್ದರಿಂದ ಸಾಕಷ್ಟು ಜನರು ಶೆಡ್ ನಿರ್ಮಿಸಿ ನಾಮಫಲಕ ತಗಲುಹಾಕುವ ಮೂಲಕ ನಿವೇಶನ ಉಳಿಸಿಕೊಂಡಿದ್ದಾರೆ. ಇದರಿಂದಾಗಿ ಕೈಗಾರಿಕ ಪ್ರದೇಶದ ತುಂಬ ಶೆಡ್‌ಗಳೆ ತುಂಬಿ ಹೋಗಿವೆ. ನಿವೇಶನ ಪಡೆಯುವ ವೇಳೆ ಘೋಷಿಸಿದ ಯೋಜನಾವರದಿಯಂತೆ ಕೈಗಾರಿಕೆಗಳನ್ನು ಹಂಚಿಕೆಯಾದ ನಿವೇಶನದಲ್ಲಿ ಸ್ಥಾಪಿಸಬೇಕು. ಬದಲಿ ಕೈಗಾರಿಕೆ ಸ್ಥಾಪಿಸುವುದಾದರೆ ನಿಗಮದಿಂದ ಮತ್ತೊಮ್ಮೆ ಅನುಮತಿ ಪಡೆಯಬೇಕು. ಆದರೆ, ನಿವೇಶನ ಪಡೆದಿರುವ ಬಹುತೇಕ ವ್ಯಕ್ತಿಗಳು ಘೋಷಿಸಿದ ಕೈಗಾರಿಕೆಗಳನ್ನು ಸ್ಥಾಪಿಸಿಲ್ಲ, ಬದಲಿ ಕೈಗಾರಿಕೆ ಮಾಡಲು ನಿಗಮದ ಒಪ್ಪಿಗೆ ಪಡೆಯದೆ ಕೈಗಾರಿಕೆ ಪ್ರದೇಶ ಬಳಸಿಕೊಳ್ಳಲಾಗುತ್ತಿದೆ.ನಿವೇಶನಗಳ ಮಾರಾಟ:
ನಿವೇಶನ ಹಂಚಿಕೆಯಾದ ನಂತರ ೧೦ ವರ್ಷಗಳಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ದಿ ನಿಗಮ, ನಿವೇಶನ ಪಡೆದಾತನಿಗೆ ನಿವೇಶನವನ್ನು ಪರಭಾರೆ ಮಾಡಿದೆ. ಹೀಗೆ ಪರಭಾರೆಯಾದ ನಿವೇಶನವನ್ನು ಮಾರಾಟ ಮಾಡಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಂದು ಕೈಗಾರಿಕೆ ಸ್ಥಾಪಿಸುವ ಉದ್ದೇಶದಿಂದ ಘನ ಅಡಿಗೆ ಕೇವಲ ೨೩ ರಿಂದ ೩೦ ರು.ಗೆ ನಿವೇಶನ ಪಡೆದಿರುವ ವ್ಯಕ್ತಿಗಳು ಇಂದು ಯಾವುದೇ ಕೈಗಾರಿಕೆಯನ್ನು ಸ್ಥಾಪಿಸದೆ ಘನ ಅಡಿಗೆ ೧೫೦೦ ರು.ನಿಂದ ೨೦೦೦ ಸಾವಿರ ರು.ಗೆ ನಿವೇಶನಗಳನ್ನು ಮಾರಾಟ ಮಾಡುವ ಮೂಲಕ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ.ಅಳಿವಿನಂಚಿನಲ್ಲಿ ನಿಗಮ:
ಹಾಸನದಲ್ಲಿದ್ದ ನಿಗಮದ ಕಚೇರಿಯನ್ನು ಶಿವಮೊಗ್ಗಕ್ಕೆ ವರ್ಗಾಯಿಸಲಾಗಿದ್ದು ಕಳೆದ ಹಲವು ದಶಕಗಳಿಂದ ಸಿಬ್ಬಂದಿ ನೇಮಕ ಮಾಡದ ಕಾರಣ ಹೆಸರಿಗಷ್ಟೆ ನಿಗಮ ಕಾರ್ಯನಿರ್ವಹಿಸುತ್ತಿದೆ.ಸರ್ಕಾರದ ಉದ್ದೇಶ ಹಾಳುಮಾಡುವುದು ಹೇಗೆ ಎಂಬುದನ್ನು ಪಟ್ಟಣದ ಕೈಗಾರಿಕ ಪ್ರದೇಶ ಗಮನಿಸಿದರೆ ತಿಳಿಯಲಿದೆ. ಐದು ಎಕರೆ ಪ್ರದೇಶದಲ್ಲಿ ನಿಗಮದ ನಿಯಮದಂತೆ ಒಂದೆರಡು ಗುಡಿಕೈಗಾರಿಕೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಈ ವಂಚನೆಯ ಬಗ್ಗೆ ಸರ್ಕಾರ ಗಮನಹರಿಸುವ ಅಗತ್ಯವಿದೆ.
ರಘು ಗೌಡ, ಸಮಾಜಿಕ ಹೋರಾಟಗಾರ.