ಹರಾಜಾದರೂ ಹಸ್ತಾಂತರವಾಗದ ಸಕಲೇಶಪುರ ಪುರಸಭೆ ಮಳಿಗೆಗಳು

KannadaprabhaNewsNetwork |  
Published : May 18, 2025, 11:52 PM IST
18ಎಚ್ಎಸ್ಎನ್11 : ಹರಾಜು ನಡೆದಿರುವ ವಿಜಯಬ್ಯಾಂಕ್ ವಾಣಿಜ್ಯ ಸಂಕಿರ್ಣ. | Kannada Prabha

ಸಾರಾಂಶ

ಸುಮಾರು ೨೭ ವರ್ಷಗಳ ನಂತರ ಪುರಸಭೆ ಮಳಿಗೆ ಹರಾಜು ನಡೆಸಲು ಪುರಸಭೆ ಆಡಳಿತ ದಿಟ್ಟ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಏಪ್ರಿಲ್ ೯ರಂದು ಬಸವೇಶ್ವರ ರಸ್ತೆಯ ೩೨ ಹಾಗೂ ವಿಜಯ ಬ್ಯಾಂಕ್ ವಾಣಿಜ್ಯ ಸಂಕಿರ್ಣದ ೨೦ ಮಳಿಗೆ ಸೇರಿದಂತೆ ೫೨ ಮಳಿಗೆಗಳ ಹರಾಜು ನಡೆಸಲು ಪುರಸಭೆ ಯಶಸ್ವಿಯಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ತಿಳಿಸಿರುವಂತೆ ಟೆಂಡರ್‌ ನಡೆದ ದಿನದಿಂದಲೇ ಮಳಿಗೆ ಹರಾಜು ಪಡೆದ ಟೆಂಡರ್‌ದಾರರಿಗೆ ಮಳಿಗೆಗಳನ್ನು ತೆರವುಗೊಳಿಸಿ ಹಸ್ತಾಂತರಿಸಬೇಕಿರುವುದು ಪುರಸಭೆ ಕರ್ತವ್ಯ. ಆದರೆ, ಟೆಂಡರ್ ನಡೆದು ತಿಂಗಳು ಕಳೆದರೂ ಇದುವರೆಗೆ ಟೆಂಡರ್‌ದಾರರಿಗೆ ಮಳಿಗೆ ಹಸ್ತಾಂತರಿಸದಿರುವುದು ಹರಾಜು ಪ್ರಕ್ರಿಯೆಯ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪುರಸಭೆ ಮಳಿಗೆಗಳ ಹರಾಜು ನಡೆದು ತಿಂಗಳು ಕಳೆದರೂ ಮಳಿಗೆಗಳ ಹಸ್ತಾಂತರವಾಗದೆ ಇರುವುದು ಸಾರ್ವಜನಿಕರು ಟೆಂಡರ್ ಪ್ರಕ್ರಿಯೆಯನ್ನೇ ಅನುಮಾನದಿಂದ ನೋಡುವಂತೆ ಮಾಡಿದೆ.

ಸುಮಾರು ೨೭ ವರ್ಷಗಳ ನಂತರ ಪುರಸಭೆ ಮಳಿಗೆ ಹರಾಜು ನಡೆಸಲು ಪುರಸಭೆ ಆಡಳಿತ ದಿಟ್ಟ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಏಪ್ರಿಲ್ ೯ರಂದು ಬಸವೇಶ್ವರ ರಸ್ತೆಯ ೩೨ ಹಾಗೂ ವಿಜಯ ಬ್ಯಾಂಕ್ ವಾಣಿಜ್ಯ ಸಂಕಿರ್ಣದ ೨೦ ಮಳಿಗೆ ಸೇರಿದಂತೆ ೫೨ ಮಳಿಗೆಗಳ ಹರಾಜು ನಡೆಸಲು ಪುರಸಭೆ ಯಶಸ್ವಿಯಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ತಿಳಿಸಿರುವಂತೆ ಟೆಂಡರ್‌ ನಡೆದ ದಿನದಿಂದಲೇ ಮಳಿಗೆ ಹರಾಜು ಪಡೆದ ಟೆಂಡರ್‌ದಾರರಿಗೆ ಮಳಿಗೆಗಳನ್ನು ತೆರವುಗೊಳಿಸಿ ಹಸ್ತಾಂತರಿಸಬೇಕಿರುವುದು ಪುರಸಭೆ ಕರ್ತವ್ಯ. ಆದರೆ, ಟೆಂಡರ್ ನಡೆದು ತಿಂಗಳು ಕಳೆದರೂ ಇದುವರೆಗೆ ಟೆಂಡರ್‌ದಾರರಿಗೆ ಮಳಿಗೆ ಹಸ್ತಾಂತರಿಸದಿರುವುದು ಹರಾಜು ಪ್ರಕ್ರಿಯೆಯ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿದೆ. ನ್ಯಾಯಾಲಯದ ಮೊರೆ:

ಟೆಂಡರ್ ಪ್ರಕ್ರಿಯೆ ನಡೆದ ನಂತರ ಮಳಿಗೆಯ ಹಳೇ ಬಾಡಿಗೆದಾರರ ೧೮ ಜನರ ತಂಡ ನ್ಯಾಯಾಲಯದ ಮೊರೆ ಹೋಗಿದ್ದು, ಮಳಿಗೆಗಳು ನಮ್ಮ ಕುಟುಂಬದ ಜೀವನಾಡಿಯಾಗಿದ್ದು ಟೆಂಡರ್ ಪ್ರಕ್ರಿಯೆಗೆ ತಡೆ ನೀಡಿ, ಮೂಲ ಮಾಲೀಕರನ್ನೆ ಮುಂದುವರಿಸಬೇಕು ಎಂದು ತಮ್ಮ ವಾದವನ್ನು ಮುಂದಿಟ್ಟಿದ್ದರು. ಇದಕ್ಕೆ ನ್ಯಾಯಾಲಯ ಟೆಂಡರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಮುಂದಿನ ಮೂರು ತಿಂಗಳು ಯಥಾಸ್ಥಿತಿ ಮುಂದುವರಿಸಿ ಎಂದು ಪುರಸಭೆಗೆ ತಾಕೀತು ಮಾಡಿತ್ತು. ಆದರೆ, ಪುರಸಭೆ ತಮ್ಮ ವಾದ ಮುಂದಿಟ್ಟಿದ್ದು ಈಗಾಗಾಲೇ ಟೆಂಡರ್ ಪ್ರಕ್ರಿಯೆ ನಡೆಸಲಾಗಿದ್ದು ಕಳೆದೊಂದು ವರ್ಷದಿಂದ ಯಾವುದೇ ಮಳಿಗೆ ಮಾಲೀಕರು ಪುರಸಭೆಗೆ ಬಾಡಿಗೆ ಪಾವತಿಸಿಲ್ಲ. ಅಲ್ಲದೆ ಮಳಿಗೆ ನೀಡುವ ವೇಳೆ ವಿಧಿಸಲಾಗಿದ್ದ ಯಾವುದೇ ಷರತ್ತನ್ನು ಪಾಲನೆ ಮಾಡಲಾಗಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ ನಂತರ ಮೇ ಮೊದಲ ವಾರ ನ್ಯಾಯಾಲಯ ಮತ್ತೆ ವಿಚಾರಣೆ ನಡೆಸಿ ಟೆಂಡರ್ ಪ್ರಕ್ರಿಯೆಯನ್ನು ಎತ್ತಿ ಹಿಡಿದು ಅಂಗಡಿಮುಂಗಟ್ಟು ತೆರವುಗೊಳಿಸಿ ಹೊಸ ಟೆಂಡರ್‌ದಾರರಿಗೆ ಮಳಿಗೆಗಳನ್ನು ಹಸ್ತಾಂತರಿಸಿ ಎಂದು ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಪುರಸಭೆ ಕಳೆದ ಒಂದು ವಾರದಿಂದ ಎರಡು ನೋಟಿಸ್ ಜಾರಿಗೊಳಿಸಿದ್ದು ಮೇ ೨೩ರ ವೇಳೆಗೆ ಮಳಿಗೆಗಳನ್ನು ತೆರವುಗೊಳಿಸಲು ಗಡುವು ನೀಡಿದ್ದು ಪುರಸಭೆ ಗಡುವು ಉಲ್ಲಂಘಿಸಿದ ಮಳಿಗೆಗಳ ಬಾಗಿಲು ಹಾಕಲು ಪುರಸಭೆ ತಿರ್ಮಾನಿಸಿದೆ.ಬಾಡಿಗೆದಾರರ ಜಿಜ್ಞಾಸೆ:

ಸದ್ಯ ಪುರಸಭೆ ಮಳಿಗೆಗಳನ್ನು ಪಡೆದೆ ತೀರಬೇಕು ಎಂಬ ಹಪಾಹಪಿಗೆ ಬಿದ್ದಿದ್ದ ಸಾಕಷ್ಟು ಜನರು, ಪುರಸಭೆ ತಿರ್ಮಾನಿಸಿದ್ದ ಮೂಲ ತಿಂಗಳ ಬಾಡಿಗೆಯ ೧೦ ಪಟ್ಟು ಹೆಚ್ಚಿನ ಬಾಡಿಗೆಗೆ ಮಳಿಗೆಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಆದರೆ, ಅಪಾರ ಪ್ರಮಾಣದದ ಬಾಡಿಗೆ ಪಡೆದಿರುವ ಮಳಿಗೆಗಳಲ್ಲಿ ಏನು ಮಾಡುವುದು ಎಂಬ ಜಿಜ್ಞಾಸೆ ಸಾಕಷ್ಟು ಹೊಸ ಟೆಂಡರ್‌ದಾರರಲ್ಲಿ ಉದಯಿಸಿದ್ದು ಮಳಿಗೆ ಬಾಡಿಗೆ ಪಡೆದಿರುವ ಸಾಕಷ್ಟು ಜನರು ಪುರಸಭೆ ನಿಗದಿಪಡಿಸಿರುವ ಮುಂದಿನ ಆರು ತಿಂಗಳ ಬಾಡಿಗೆಯನ್ನು ಕಟ್ಟದಿರಲು ತಿರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ.ಸಿಂಗಲ್ ಟೆಂಡರ್ ಕಥೆ:ಹರಾಜು ನಡೆಸಲಾಗಿರುವ ೫೨ ಮಳಿಗೆಗಳ ಪೈಕಿ ೬ ಮಳಿಗೆಗಳು ಸಿಂಗಲ್ ಟೆಂಡರ್ ಆಗಿದೆ. ಸಿಂಗಲ್ ಟೆಂಡರ್ ನಡೆದಿರುವ ಮಳಿಗೆಗಳ ಮರು ಹರಾಜಿಗೆ ಏಪ್ರಿಲ್ ೨ರಂದು ನಡೆದ ಪುರಸಭೆ ವಿಶೇಷ ಸಭೆಯಲ್ಲಿ ನಿರ್ಣಯಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆಯಲು ಸಭೆಯಲ್ಲಿ ತಿರ್ಮಾನಿಸಲಾಗಿತ್ತು. ಆದರೆ, ಇದುವರೆಗೆ ಜಿಲ್ಲಾಧಿಕಾರಿಗೆ ಪತ್ರವನ್ನೆ ಬರೆಯದೆ ಇರುವುದು ಪುರಸಭೆ ಆಡಳಿತದ ನಡೆಯನ್ನು ಸಂಶಯದಿಂದ ನೋಡುವಂತೆ ಮಾಡಿದೆ. ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂಬುದಕ್ಕೆ ಸಾರ್ವಜನಿಕರು ಹಲವು ಪುರಾವೆಗಳನ್ನು ಮುಂದಿಡುತ್ತಿದ್ದು ವಿಜಯಬ್ಯಾಂಕ್ ವಾಣಿಜ್ಯ ಸಂಕೀರ್ಣದಲ್ಲಿರುವ ೨೬೦ ಚದರ ಅಡಿ ವಿಸ್ತೀರ್ಣದ ಮಳಿಗೆಯನ್ನು ಟೆಂಡರ್‌ದಾರರು ೫೦ರಿಂದ ೫೯ ಸಾವಿರ ರು.ಗಳ ಬಾಡಿಗೆಗೆ ಪಡೆದಿದ್ದರೆ, ಇದೆ ವಾಣಿಜ್ಯ ಸಂಕೀರ್ಣದಲ್ಲಿನ ಸಿಂಗಲ್ ಟೆಂಡರ್‌ ನಡೆದಿರುವ ೨೮೦೦ ಚದರ ಅಡಿ ವಿಸ್ತೀರ್ಣದ ಮಳಿಗೆಗಳು ಸಹ ೫೮ ಸಾವಿರಕ್ಕೆ ಹರಾಜಾಗಿರುವುದು ಅಕ್ರಮ ನಡೆದಿರುವುದಕ್ಕೆ ಸಾಕ್ಷಿಯಾಗಿದೆ ಎಂಬ ವಾದ ಮುಂದಿಡುತ್ತಿದ್ದಾರೆ.ಪುರಸಭೆ ವಿರುದ್ಧ ಹಲವು ಆರೋಪ:

ನಿತ್ಯ ಲಕ್ಷಾಂತರ ರು. ವ್ಯವಹಾರ ನಡೆಸುವ ಮಳಿಗೆ ಮಾಲೀಕರದಿಂದ ಕಳೆದೊಂದು ವರ್ಷದಿಂದ ಬಾಡಿಗೆ ಪಡೆಯದೆ ಇರುವುದು ಹಾಗೂ ಮಳಿಗೆಗಳನ್ನು ಖಾಲಿ ಮಾಡದೆ ಟೆಂಡರ್‌ ನಡೆಸಿರುವುದು ತಪ್ಪು ಎಂಬ ಆರೋಪ ಕೇಳಿ ಬರುತ್ತಿದ್ದರೆ ಇತ್ತ ಬಸವೇಶ್ವರ ರಸ್ತೆಯಲ್ಲಿ ಚರಂಡಿ ಮೇಲೆ ನಿರ್ಮಾಣ ಮಾಡಿರುವ ಮಳಿಗೆಗಳ ಟೆಂಡರ್‌ ನಡೆಸಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.ಹೇಮಾವತಿ ವಾಣಿಜ್ಯ ಸಂಕೀರ್ಣದ ಹರಾಜು ಎಂದು:

ಏಕಕಾಲಕ್ಕೆ ಪುರಸಭೆಯ ೧೬೯ ಮಳಿಗೆಗಳ ಹರಾಜಿಗೆ ಪುರಸಭೆ ತೀರ್ಮಾನಿಸಲಾಗಿತ್ತಾದರೂ ಹೇಮಾವತಿ ವಾಣಿಜ್ಯ ಸಂಕಿರ್ಣ ದುಸ್ಥಿತಿಗೆ ಈಡಾಗಿದ್ದು ಮಳಿಗೆಗಳ ಮೂಲ ಸ್ವರೂಪ ಬದಲಾಗಿದೆ ಅಲ್ಲದೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿಲ್ಲ ಎಂದು ವಾಣಿಜ್ಯ ಸಂಕೀರ್ಣದ ಮಾಲೀಕರು ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ಸಂಕೀರ್ಣವನ್ನು ದುರಸ್ತಿಗೊಳಿಸಿ ಮುಂದಿನ ಮೂರು ತಿಂಗಳ ಒಳಗಾಗಿ ಹರಾಜು ನಡೆಸಿ ಎಂದು ನ್ಯಾಯಾಲಯ ಹೇಳಿದೆ. ಆದರೆ, ಈಗಾಗಲೇ ನ್ಯಾಯಾಲಯ ಗಡುವು ವಿಧಿಸಿ ತಿಂಗಳು ಕಳೆದರು ಕಟ್ಟಡದ ದುರಸ್ತಿಗೆ ಪುರಸಭೆ ಮುಂದಾಗದೆ ಇರುವುದರಿಂದ ಹರಾಜು ಪ್ರಕ್ರಿಯೆ ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಎದ್ದಿದೆ.

---------------------------------------------------------------*ಹೇಳಿಕೆ1 ನ್ಯಾಯಾಲಯ ಹಳೆ ಮಳಿಗೆ ಮಾಲೀಕರ ಮನವಿಯನ್ನು ತಿರಸ್ಕರಿಸಿದ್ದು ಟೆಂಡರ್‌ ಪ್ರಕ್ರಿಯೆನ್ನು ಎತ್ತಿ ಹಿಡಿದಿರುವುದರಿಂದ ಪುರಸಭೆ ಮುಂದಿನ ಕ್ರಮ ಕೈಗೊಳ್ಳಲಿದೆ. ಮಹೇಶ್ವರಪ್ಪ, ಮುಖ್ಯಾಧಿಕಾರಿ ಪುರಸಭೆ, ಸಕಲೇಶಪುರ *ಹೇಳಿಕೆ2

- ಪುರಸಭೆ ಮಳಿಗೆಗಳ ಹರಾಜು ಪ್ರಕ್ರೀಯೆ ಕಾನೂನು ಪ್ರಕಾರ ನಡೆದಿದ್ದು ಸದ್ಯ ಮಳಿಗೆ ತೆರವಿಗೆ ನೋಟಿಸ್ ನೀಡಲಾಗುತ್ತಿದ್ದು ಅವಧಿ ಮುಗಿದರೂ ತೆರವುಗೊಳಿಸಿದ ಮಳಿಗೆಗಳಿಗೆ ಪುರಸಭೆಯಿಂದ ಬೀಗ ಹಾಕಲಿದೆ. - ಜ್ಯೋತಿ ರಾಜ್‌ಕುಮಾರ್ ಸಕಲೇಶಪುರ ಅಧ್ಯಕ್ಷೆ ಪುರಸಭೆ

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ