ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶನಿವಾರದಿಂದ ಸಕ್ರೆಬೈಲು ಆನೆ ಬಿಡಾರದಲ್ಲಿ ಪ್ರವೇಶ ಪುನರಾರಂಭವಾಗಿದೆ. ಏಪ್ರಿಲ್ 18ರಂದು ದುಬಾರೆ ಆನೆ ಶಿಬಿರದಲ್ಲಿ ನಡೆದ ಆಕಸ್ಮಿಕ ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದರು. ಈ ಘಟನೆ ಬಳಿಕ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಎಲ್ಲ ಆನೆ ಶಿಬಿರಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ಅರಣ್ಯ ಸಚಿವರು ಸೂಚಿಸಿದ್ದರು.
ಸಕ್ರೆಬೈಲು ಆನೆ ಬಿಡಾರವು ಶಿವಮೊಗ್ಗದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಆನೆಗಳನ್ನು ಹತ್ತಿರದಿಂದ ವೀಕ್ಷಿಸುವ ಅವಕಾಶಕ್ಕಾಗಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇದೀಗ ಹಲವು ತಿಂಗಳ ಬಳಿಕ ಶಿಬಿರ ಮತ್ತೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗುತ್ತಿರುವುದರಿಂದ ಪ್ರವಾಸಿಗರಲ್ಲಿ ಉತ್ಸಾಹ ಮೂಡಿದೆ.ಇದೀಗ ಹಲವು ಸುರಕ್ಷತಾ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಮೂಲಕ ಸಕ್ರೆಬೈಲು ಆನೆ ಬಿಡಾರವನ್ನು ಪುನರಾರಂಭಿಸಲಾಗಿದೆ. ಶಿಬಿರಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಆನೆಗಳ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಎರಡೂ ಗುಂಪುಗಳಿಗೆ ಪ್ರತ್ಯೇಕ ಮಾರ್ಗಗಳನ್ನು ಗುರುತಿಸಲಾಗಿದೆ.
ಪ್ರವಾಸಿಗರಿಗೆ ಅಗತ್ಯ ಮಾಹಿತಿ ನೀಡಲು ಹಾಗೂ ಸುರಕ್ಷತಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಶಿಬಿರದ ವಿವಿಧೆಡೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಶಿಬಿರಕ್ಕೆ ಭೇಟಿ ನೀಡುವವರು ಅರಣ್ಯ ಇಲಾಖೆ ಸೂಚಿಸಿರುವ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.