- ಗಾಬರಿಗೊಂಡ ಜನರು । ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ । ಮತ್ತೆ ಕಾಡಿಗೆ ಸೇರಿದ ಆನೆ
ಕೆಲವು ದಿನಗಳಿಂದ ಮರೆಯಾಗಿದ್ದ ಕಾಡಾನೆಗಳ ಕಾಟ ಮತ್ತೆ ಶುರುವಾಗಿದ್ದು ಶುಕ್ರವಾರ ಮುತ್ತಿನಕೊಪ್ಪ ಗ್ರಾಮದ ಚಬ್ಬೆ ನಾಡು, ಜಂಬಳ್ಳಿ, ಕುಶಾಲಪುರದಲ್ಲಿ ರೇಡಿಯೋ ಕಾಲರ್ ಅಳವಡಿಸಿದ್ದ ಒಂಟಿ ಆನೆಯೊಂದು ವಸತಿ ಪ್ರದೇಶದಲ್ಲೇ ಸುತ್ತಾಡಿ ಜನರಲ್ಲಿ ಆತಂಕ ಸೃಷ್ಠಿಸಿತು.
ಶುಕ್ರವಾರ ಲಕ್ಕವಳ್ಳಿ ಭದ್ರಾ ಹಿನ್ನೀರಿನ ಕಡೆಯಿಂದ ದೇವಗಲ್ ಎಸ್ಟೇಟ್, ಹೊಸಕೊಪ್ಪ ಮಾರ್ಗವಾಗಿ ಮಡಬೂರಿಗೆ ಬಂದು ಬೆಳಗಿನ ಜಾವ ಚಬ್ಬೆನಾಡಿನ ಸಿ.ಡಿ.ಶ್ರೀನಿವಾಸ ಎಂಬುವರ ತೋಟದಲ್ಲಿ ಈ ಒಂಟಿ ಸಲಗ ಕಾಣಿಸಿಕೊಂಡಿದೆ. ಈ ಸುದ್ದಿ ಯನ್ನು ಅರಣ್ಯ ಇಲಾಖೆ ಹಾಗೂ ಎಲಿಫೆಂಟ್ ಟಾಸ್ಕ್ ಪೋರ್ಸ್ ಗಳಿಗೆ ತಿಳಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಟಾಸ್ಕ್ ಪೋರ್ಸ್ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯವರು ಕಾಡಾನೆಯನ್ನು ಕಾಡಿಗೆ ಅಟ್ಟಲು ಕಾರ್ಯಾಚರಣೆ ಪ್ರಾರಂಭಿಸಿದರು.ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಕಾಡಾನೆ ಮುತ್ತಿನಕೊಪ್ಪ- ಶಂಕರಾಪುರ ಮಧ್ಯೆ ಬರುವ ಕುಶಾಲಪುರಕ್ಕೆ ಆಗಮಿಸಿ ಶಾಲೆ ಗೇಟು ಮುರಿದು ಅಂಗನವಾಡಿ ಸಮೀಪವೇ ಹಾದು ಹೋಗಿ ಮುಖ್ಯ ರಸ್ತೆ ದಾಟಿ ಹೋಗಿದೆ. ಈ ಸಂದರ್ಭದಲ್ಲಿ ನೂರಾರು ಜನರು ಕಾಡಾನೆ ಓಡಾಟ ವೀಕ್ಷಿಸಿದರು. ನಂತರ ಈ ಒಂಟಿ ಸಲಗ ಸಾತ್ಕೋಳಿ ಮೂಲಕ ಆರಂಬಳ್ಳಿ ಮೀಸಲು ಅರಣ್ಯಕ್ಕೆ ಸೇರಿಕೊಂಡಿದೆ.
ಶಾಶ್ವತ ಪರಿಹಾರಕ್ಕೆ ಆಗ್ರಹ: ಹಗಲು ಹೊತ್ತಿನಲ್ಲೇ ಯಾವುದೇ ಭಯ ಇಲ್ಲದೆ ಜನವಸತಿ ಪ್ರದೇಶದಲ್ಲಿ ಓಡಾಟ ಮಾಡಿದ ಒಂಟಿ ಸಲಗದಿಂದ ಗ್ರಾಮಸ್ಥರು ಆತಂಕ ಪಡುವಂತಾಗಿದೆ. ಸರ್ಕಾರ ಆದಷ್ಟು ಬೇಗ ಕಾಡಾನೆಗಳು ನಾಡಿಗೆ ಬಾರದಂತೆ ವೈಜ್ಞಾನಿಕವಾಗಿ ಶಾಶ್ವತ ಪರಿಹಾರ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.