ಸಾಲಗಾಂವ ಬಾಣಂತಿದೇವಿ ಜಾತ್ರಾ ಮಹೋತ್ಸವ ಇಂದಿನಿಂದ

KannadaprabhaNewsNetwork |  
Published : Jan 14, 2026, 03:45 AM IST
ತಾಲೂಕಿನ ಸಾಲಗಾಂವ ಬಾಣಂತಿದೇವಿ ದೇವಾಲಯ. | Kannada Prabha

ಸಾರಾಂಶ

ಸಂತಾನ ಪ್ರಾಪ್ತಿ ಹಾಗೂ ಭಕ್ತರ ಇಷ್ಟಾರ್ಥ ಈಡೇರಿಸುವ ತಾಯಿ ಎಂದೇ ಪ್ರಸಿದ್ದಿಯಾಗಿ ನೂರಾರು ವರ್ಷಗಳ ಇತಿಹಾಸವುಳ್ಳ ತಾಲೂಕಿನ ಸಾಲಗಾಂವ ಬಾಣಂತಿದೇವಿ ಜಾತ್ರಾ ಮಹೋತ್ಸವ ಜ.೧೪ ಹಾಗೂ ೧೫ ರಂದು ವಿಜೃಂಭಣೆಯಿಂದ ಜರುಗಲಿದೆ.

ಸಂತಾನ ಪ್ರಾಪ್ತಿ, ಭಕ್ತರ ಇಷ್ಟಾರ್ಥ ಈಡೇರಿಸುವ ತಾಯಿಸಂತೋಷ ದೈವಜ್ಞ

ಕನ್ನಡಪ್ರಭ ವಾರ್ತೆ ಮುಂಡಗೋಡ

ಸಂತಾನ ಪ್ರಾಪ್ತಿ ಹಾಗೂ ಭಕ್ತರ ಇಷ್ಟಾರ್ಥ ಈಡೇರಿಸುವ ತಾಯಿ ಎಂದೇ ಪ್ರಸಿದ್ದಿಯಾಗಿ ನೂರಾರು ವರ್ಷಗಳ ಇತಿಹಾಸವುಳ್ಳ ತಾಲೂಕಿನ ಸಾಲಗಾಂವ ಬಾಣಂತಿದೇವಿ ಜಾತ್ರಾ ಮಹೋತ್ಸವ ಜ.೧೪ ಹಾಗೂ ೧೫ ರಂದು ವಿಜೃಂಭಣೆಯಿಂದ ಜರುಗಲಿದೆ.

ಹೊಸ ವರ್ಷದ ಪ್ರಾರಂಭದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ನಡೆಯುವ ಈ ಜಾತ್ರಾ ಮಹೋತ್ಸವ ಪಲ್ಲಕ್ಕಿ ಉತ್ಸವ, ಡೊಳ್ಳು ಭಜನೆ ಮುಂತಾದ ವಾದ್ಯ ಮೇಳಗಳಿಂದ ಕೂಡಿರುತ್ತದೆ. ಸಾಲಗಾಂವ. ಚಿಗಳ್ಳಿ, ಅಜ್ಜಳ್ಳಿ, ಕಾವಲಕೊಪ್ಪ, ಮುಡಸಾಲಿ, ಹಿರೇಹಳ್ಳಿ, ಹೊಸಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಅತಿ ಉತ್ಸುಕತೆಯಿಂದ ಭಾಗಿಯಾಗಿ ಜಾತ್ರೆಯನ್ನು ಯಶಸ್ವಿಗೊಳಿಸುತ್ತಾರೆ.

ಜ.೧೪ ರಂದು ದೇವಿಯ ಸನ್ನಿಧಿಯಲ್ಲಿ ಹೋಮ, ಹವನ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳು ಜರುಗುತ್ತವೆ. ಜ. ೧೫ ರಂದು ದೇವಿಗೆ ಹಣ್ಣುಕಾಯಿ ಉಡಿ ಸೇವೆ, ಹರಕೆ ತೀರಿಸುವ ಕಾರ್ಯಕ್ರಮ ಜರುಗಲಿದ್ದು, ಸಂಜೆ ೪ ಘಂಟೆಗೆ ಪಲ್ಲಕ್ಕಿ ಉತ್ಸವ ಬಳಿಕ ಬಾಣಂತಿ ದೇವಿಯ ತೆಪ್ಪದ ತೇರನ್ನು ಕೆರೆಯಲ್ಲಿ ತೇಲಿ ಬಿಡಲಾಗುತ್ತದೆ. ಸುತ್ತಮುತ್ತಲಿನ ಹತ್ತಾರು ಗ್ರಾಮ ಸೇರಿದಂತೆ ತಾಲೂಕಿನ ಮೂಲೆ ಮೂಲೆಯಿಂದ ಬರುವ ಸಹಸ್ರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆಯುತ್ತಾರೆ.

ಹರಕೆ ವಿಶೇಷ:

ಭಕ್ತರು ಇಲ್ಲಿಯ ದೇವಾಲಯಕ್ಕೆ ಬಂದು ತಮ್ಮ ಇಷ್ಠಾರ್ಥ ಬೇಡಿಕೊಳ್ಳುತ್ತಾರೆ. ಮುಖ್ಯವಾಗಿ ಮಕ್ಕಳಿಲ್ಲದವರು ಸಂತಾನ ಪ್ರಾಪ್ತಿಯನ್ನೇ ಬೇಡುವುದು ಇಲ್ಲಿಯ ಪ್ರಾಮುಖ್ಯತೆ. ಇಷ್ಟಾರ್ಥ ಸಾಕಾರಗೊಂಡರೆ ಜನಿಸುವ ಮಗುವನ್ನು ಬಾಳೆ ದಿಂಡಿನಿಂದ ತಯಾರಿಸಲಾದ ತೆಪ್ಪದಲ್ಲಿ ಬಿಡುವ ಸಂಪ್ರದಾಯವಿದ್ದು, ಪ್ರತಿ ವರ್ಷ ದೇವಿಯ ಕೃಪಾಕಟಾಕ್ಷದಿಂದ ಜನಿಸುವ ನೂರಾರು ಮಕ್ಕಳನ್ನು ಜಾತ್ರಾ ಮಹೋತ್ಸವದಂದು ತೆಪ್ಪದಲ್ಲಿ ಬಿಡುವುದು ಇಂದಿಗೂ ಕೂಡ ಜಾತ್ರೆಯಲ್ಲಿ ನಾವು ಕಾಣಬಹುದು.

ದೇವಾಲಯದ ಇತಿಹಾಸ:

ಮುಂಡಗೋಡದಿಂದ ಶಿರಸಿಗೆ ಹೋಗುವ ಮಾರ್ಗವಾಗಿ ೬ ಕಿಮೀ ಕ್ರಮಿಸಿದರೆ ಮಾರ್ಗ ಮಧ್ಯದಲ್ಲಿಯೇ ಸಿಗುವ ಈ ದೇವಾಲಯ ಐತಿಹಾಸಿಕವಾದದ್ದು, ಹುಬ್ಬಳ್ಳಿ-ಶಿರಸಿ ಹೆದ್ದಾರಿ ಕೆರೆಯ ಮೇಲೆ ಬಾಣಂತಿದೇವಿ ದೇವಸ್ಥಾನವಿದೆ. ಹಲವು ವರ್ಷಗಳ ಹಿಂದೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ತೀವ್ರ ನೀರಿನ ಅಭಾವ ತಲೆದೋರಿದ ವೇಳೆಯಲ್ಲಿ ಗ್ರಾಮಸ್ಥರೆಲ್ಲ ಒಟ್ಟಾಗಿ ಕೆರೆ ನಿರ್ಮಾಣ ಕಾರ್ಯ ಕೈಗೊಂಡರು. ಆದರೆ ಎಷ್ಟೇ ಆಳ ಅಗೆದರೂ ನೀರು ಸಿಗಲಿಲ್ಲ. ನೀರು ಏಕೆ ಬರುತ್ತಿಲ್ಲ ಎಂದು ಗ್ರಾಮಸ್ಥರು ತೀವ್ರ ಚರ್ಚೆಯಲ್ಲಿರುವ ಸಂದರ್ಭದಲ್ಲಿ ತವರು ಮನೆಗೆ ಬಾಣಂತನಕ್ಕೆ ಬಂದಿದ್ದ ಮಹಿಳೆಯೋರ್ವಳು ಕೌತುಕದಿಂದ ತನ್ನ ತಂದೆ ಪಾಲ್ಗೊಂಡ ಕೆರೆ ನಿರ್ಮಾಣ ಕಾರ್ಯ ವೀಕ್ಷಿಸಲು ಕೆರೆಯ ದಡದ ಮೇಲೆ ಬರುತ್ತಿದ್ದಂತೆ ಒಮ್ಮಿಂದೊಮ್ಮೆಲೆ ಕೆರೆಯಲ್ಲಿ ನೀರು ಉಕ್ಕಿ ಬಾಣಂತಿ ಮಗಳನ್ನು ಬಲಿ ತೆಗೆದುಕೊಂಡಿತು ಎಂಬ ಇತಿಹಾಸವಿದೆ. ಈ ಹಿನ್ನೆಲೆ ಅಂದಿನಿಂದ ಈ ಕೆರೆ ಬಾಣಂತಿದೇವಿ ಕೆರೆ ಎಂದು ಪ್ರಸಿದ್ದಿ ಪಡೆಯಿತು ಎಂಬ ಪ್ರತೀತಿ ಇದೆ. ಮಕ್ಕಳಿಲ್ಲದವರು ಬಾಣಂತಿ ದೇವಿಗೆ ಹರಕೆ ಹೊತ್ತರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಭಕ್ತ ಸಮುದಾಯದಲ್ಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಮಹತ್ವ ತಿಳಿದುಕೊಳ್ಳಲಿ: ಅಪರ ಜಿಲ್ಲಾಧಿಕಾರಿ
ಸ್ಮಶಾನದ ಅಭಿವೃದ್ಧಿ ಕಾಮಗಾರಿ ತ್ವರಿತಗೊಳಿಸಲು ಆಗ್ರಹ