ಗಜೇಂದ್ರಗಡ:೧೯೯೫ ರಿಂದ ೨೦೦೫ ರವರೆಗೆ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ಎಲ್ಲಾ ಭಾಗ್ಯಗಳ ಜೊತೆ ವೇತನಾನುದಾನ ಭಾಗ್ಯವನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅನುದಾನ ರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟ ಗಜೇಂದ್ರಗಡ ತಾಲೂಕು ಘಟಕದ ವತಿಯಿಂದ ಸೋಮವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಹುಟ್ಟಿದ ಪ್ರತಿಯೊಂದು ಮಗುವಿಗೂ ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಬೇಕಾದದ್ದು ಸರ್ಕಾರದ ಜವಾಬ್ದಾರಿ. ಆದರೆ ಸರ್ಕಾರವೇ ರಾಜ್ಯದ ಎಲ್ಲಾ ಭಾಗಗಳಲ್ಲಿ ಶಾಲಾ ಕಾಲೇಜುಗಳನ್ನು ತೆರೆದು ಶಿಕ್ಷಣ ನೀಡಲು ಸಾಧ್ಯವಾಗದ ಕಾರಣ ಖಾಸಗಿಯವರು ಮತ್ತು ಮಠ ಮಾನ್ಯದವರು ಶಾಲಾ ಕಾಲೇಜುಗಳನ್ನು ತೆರೆದು ಶಿಕ್ಷಣ ನೀಡುತ್ತಾ ಸರ್ಕಾರದ ಜವಾಬ್ದಾರಿಯನ್ನು ಕಡಿಮೆ ಮಾಡಿವೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಶಿಕ್ಷಣ ನೀಡುವ ಎಲ್ಲಾ ವಿದ್ಯಾಸಂಸ್ಥೆಗಳಿಗೆ ಅನುದಾನ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ, ಈ ವಿಚಾರದಲ್ಲಿ ಮಲತಾಯಿ ಧೋರಣೆ ತಳೆದಿರುವುದು ಕನ್ನಡಿಗರ ದುರ್ದೈವ.ಕರ್ನಾಟಕದಲ್ಲಿ ಸ್ವಾತಂತ್ರ‍್ಯ ಪೂರ್ವ ಮತ್ತು ನಂತರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದ ವತಿಯಿಂದ ವೇತಾನನುದಾನವನ್ನು ನೀಡಲಾಗುತ್ತಿತ್ತು. ನಂತರ ಈ ಪ್ರಕ್ರಿಯೆ ೧೯೮೬ಕ್ಕೆ ಸ್ಥಗಿತಗೊಂಡಿತು. ೧೯೯೯ರಲ್ಲಿ ಕಾಂಗ್ರೆಸ್ ಸರ್ಕಾರವು ೧೯೮೭ರಿಂದ ೧೯೯೨ರವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾಸಂಸ್ಥೆಗಳಿಗೆ ವೇತಾನನುದಾನವನ್ನು ನೀಡಿತು. ಆನಂತರ ೨೦೦೬ ರಲ್ಲಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರಗಳು ೧೯೮೭ ರಿಂದ ೧೯೯೫ ರವರೆಗೆ ಎಲ್ಲಾ ವರ್ಗದ ಶಿಕ್ಷಣ ಸಂಸ್ಥೆಗಳಿಗೆ ವೇತನಾನುದಾನವನ್ನು ನೀಡಿತು. ಅಲ್ಲಿಂದ ಇಲ್ಲಿಯವರೆಗೆ ಒಂದೇ ಒಂದು ವರ್ಷವೂ ವಿಸ್ತರಣೆಯಾಗಲಿಲ್ಲ. ೨೦೧೦ ರಿಂದ ನಿರಂತರವಾಗಿ ಹೋರಾಟ ಮಾಡಿದರೂ ಪ್ರಯೋಜನವಾಗದೇ ಕನ್ನಡ ಶಾಲೆಗಳು ಅವನತಿಯತ್ತ ಸಾಗುತ್ತದೆ.
ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸಂಘಟನೆಗಳ ನಿರ್ವಹಣೆಯಲ್ಲಿರುವ ೨೦೧೨ ಕ್ಕಿಂತ ಮೊದಲು ಆರಂಭಿಸಿದ ಪಿ.ಯು. ತನಕದ ಶಿಕ್ಷಣ ಸಂಸ್ಥೆಯನ್ನು ಅನುದಾನ ವ್ಯಾಪ್ತಿಗೆ ತರುವುದು. ಜೊತೆಗೆ ಸಾಮಾನ್ಯ ವರ್ಗದ ಶಾಲಾ ಕಾಲೇಜುಗಳನ್ನು ವೇತಾನಾನುದಾನಕ್ಕೆ ಒಳಪಡಿಸುವುದು ಹಾಗೂ ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಭಾಗ್ಯಗಳನ್ನು ನೀಡಿರುವ ಕಾಂಗ್ರೆಸ್ ಸರ್ಕಾರ ನಮಗೆ ಅನುದಾನ ಭಾಗ್ಯವನ್ನು ನೀಡಿ, ರಾಜ್ಯಾದಾದ್ಯಂತ ೨೮ ವರ್ಷಗಳ ನ್ಯಾಯಯುತ ಬೇಡಿಕೆಯಾದ ೧೯೯೫ ರಿಂದ ೨೦೦೫ ರವರೆಗೆ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ವೇತನಾನುದಾನವನ್ನು ದೊರಕಿಸಿ ಕನ್ನಡ ಭಾಷೆಯ ಉಳಿವಿಗೆ ಒತ್ತು ನೀಡಿ, ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುವ ಸಾವಿರಾರು ಶಿಕ್ಷಕರ ಬದುಕಿಗೆ ಹಾಗೂ ವ್ಯಾಸಂಗ ಮಾಡುತ್ತಿರುವ ಲಕ್ಷಾಂತರ ಬಡ ಮಕ್ಕಳಿಗೆ ಆಸರೆಯಾಗಬೇಕು ಎಂದು ಮನವಿ ನೀಡಿದರು.