ಕನ್ನಡಪ್ರಭ ವಾರ್ತೆ ಮದ್ದೂರುಡಿಎಂಕೆ ಜೊತೆಗಿನ ಮೈತ್ರಿಗಾಗಿ ಕಾವೇರಿ ನೀರನ್ನೇ ನೀವು ಮಾರಾಟ ಮಾಡಿದ್ದೀರಿ ಎಂದು ಎಂದು ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರವನ್ನು ಕಠಿಣವಾಗಿ ಟೀಕಿಸಿದರು.
ಕಾವೇರಿ ನೀರಿನ ವಿಷಯವಾಗಿ ದೇವೇಗೌಡರನ್ನು ಪ್ರಶ್ನಿಸುವ ನೈತಿಕತೆ ಸಿಎಂ ಸಿದ್ದರಾಮಯ್ಯನವರಿಗಿಲ್ಲ. ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ನ್ಯಾಯ ದೊರಕಿದ್ದರೆ ಅದು ದೇವೇಗೌಡರಿಂದ ಮಾತ್ರ. ಅವರ ಹೋರಾಟದ ಫಲವಾಗಿ 14.75 ಟಿಎಂಸಿ ಅಡಿ ನೀರು ಉಳಿಸಿಕೊಟ್ಟರು. ಈಗಲೂ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕಾಗಿರುವ ಅನ್ಯಾಯ ಖಂಡಿಸಿ ದೇವೇಗೌಡರು ಬೆಂಗಳೂರಿನಲ್ಲಿ ಆಮರಣಾಂತ ಉಪವಾಸ ಕೈಗೊಂಡಿದ್ದರು. ಈ ವಿಷಯ ತಿಳಿದ ಮೋದಿ ಅವರು ಕೇಂದ್ರದ ಮಂತ್ರಿಗಳನ್ನು ಕಳುಹಿಸಿ ಅಂತಹ ಕಠಿಣ ನಿರ್ಧಾರ ಮಾಡದಂತೆ ತಡೆದಿದ್ದರು. ದೇವೇಗೌಡರು ಇಳಿ ವಯಸ್ಸಿನಲ್ಲೂ ವ್ಹೀಲ್‌ಚೇರ್‌ನಲ್ಲಿ ಲೋಕಸಭೆಗೆ ಹೋಗಿ ಮೇಕೆದಾಟು ಯೋಜನೆಯ ಸ್ಥಿತಿ-ಗತಿಗಳ ವಿವರವನ್ನು ಪಡೆದುಕೊಂಡಿದ್ದಾರೆ. ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಕುರಿತು ಮಾತುಕತೆ ನಡೆಸುತ್ತಿದ್ದಾರೆ ಎಂದರು.ಕೆಲವು ದಿನಗಳ ಹಿಂದೆ ನನ್ನನ್ನು ಕರೆದ ದೇವೇಗೌಡರು, ನಾನು ಈಗಲೇ ಸಾಯುವುದಿಲ್ಲ. ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ಕಾವೇರಿ ಕಣಿವೆ ರೈತರಿಗೆ ಆಗಿರುವ ಅನ್ಯಾಯವನ್ನು ನಿನ್ನಿಂದಲೇ ಪರಿಹಾರ ದೊರಕುವಂತೆ ಮಾಡುತ್ತೇನೆ. ನನಗಿನ್ನೂ ಆ ಶಕ್ತಿ ಇದೆ ಎಂದು ಹೇಳಿದ್ದಾರೆ. ದೇವೇಗೌಡರ ಮಾತಿಗೆ ಕೇಂದ್ರದಲ್ಲಿ ಅಷ್ಟೇ ಗೌರವವಿದೆ. ಮೋದಿ ಬಾಗಿಲ ಬಳಿ ಬಂದು ಗೌಡರನ್ನು ಒಳಗೆ ಕರೆದುಕೊಂಡು ಹೋಗುತ್ತಾರೆ. ಇದರಿಂದ ಕಾವೇರಿ ಸಮಸ್ಯೆಗೆ ಪರಿಹಾರ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಬರಗಾಲವನ್ನು ಜೊತೆಯಲ್ಲೇ ಕರೆತರುತ್ತಾರೆ. ರೈತರಿಗೆ ಬರಗಾಲವಾದರೆ ಕಾಂಗ್ರೆಸ್ ನಾಯಕರಿಗೆ ಅದು ಸುವರ್ಣಕಾಲ. ಬರಗಾಲವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗದೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.
ನೀರಾವರಿ ಯೋಜನೆಗಳು, ರಸ್ತೆ -ಸೇತುವೆ ಸಂಪರ್ಕ ಜಾಲ, ಕೆರೆಗಳಿಗೆ ನೀರು ತುಂಬಿಸುವುದು, ಕೊನೆಯ ಭಾಗಕ್ಕೆ ನೀರು ತಲುಪಿಸುವುದು, ಶಾಲಾ-ಕಾಲೇಜುಗಳ ನಿರ್ಮಾಣ ಸೇರಿದಂತೆ ಹಲವು ಕಾರ್ಯಕ್ರಮಗಳು ಅಭಿವೃದ್ಧಿಯ ಸಂಕೇತ. ಈ ವಿಷಯವಾಗಿ ಈಗಿನ ಶಾಸಕರು ನೀಡಿರುವ ಕೊಡುಗೆ ಏನು ಎಂದು ಪ್ರಶ್ನಿಸಿದರು.