ಸಲೀಂ ಅಹಮ್ಮದ, ಸಂಕನೂರು ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಅರ್ಜಿ ತಿರಸ್ಕೃತ

KannadaprabhaNewsNetwork |  
Published : Sep 03, 2024, 01:39 AM IST
ಅರ್ಜಿ ತಿರಸ್ಕೃತ | Kannada Prabha

ಸಾರಾಂಶ

ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಹೊಸ್ತಿಲಲ್ಲಿಯೇ ಇಬ್ಬರೂ ವಿಪ ಸದಸ್ಯರ ಅರ್ಜಿಗಳು ತಿರಸ್ಕೃತವಾಗಿರುವುದು ಜಿಲ್ಲೆಯಾದ್ಯಂತ ಹಲವಾರು ರೀತಿಯ ಚರ್ಚೆಗಳಿಗೆ ನಾಂದಿ ಹಾಡಲಿದೆ

ಗದಗ: ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಆಸೆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರು ವಿಪ ಸದಸ್ಯರು ಗದಗ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಗದಗ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ತಿರಸ್ಕರಿಸಿ ಸೋಮವಾರ ಆದೇಶ ಹೊರಡಿಸಿದೆ.

ಗದಗ ನಗರದ ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವಂತೆ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹಮ್ಮದ್ ಮತ್ತು ಎಸ್.ವಿ. ಸಂಕನೂರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.

ಸಲೀಂ ಅಹಮ್ಮದ ಮತ್ತು ಎಸ್.ವಿ. ಸಂಕನೂರು ಸ್ಥಳೀಯ ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವಂತೆ ಹಲವು ಸಾಕ್ಷ್ಯಾಧಾರಗಳೊಂದಿಗೆ ಅರ್ಜಿ ಸಲ್ಲಿಸಿದ್ದರು. ಇಬ್ಬರ ಅರ್ಜಿಗೆ ಕಾಂಗ್ರೆಸ್ ಸದಸ್ಯರು ತಕರಾರು ಸಲ್ಲಿಸಿದ್ದಲ್ಲದೇ ಅವರನ್ನು ಗದಗ ನಗರದ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಬಾರದು ಎನ್ನುವುದಕ್ಕಾಗಿ ಹಲವಾರು ದಾಖಲೆ ಸಲ್ಲಿಸಿದ್ದರು. ಈ ಕುರಿತು ಗದಗ ಉಪವಿಗಾಧಿಕಾರಿ ಎಂ. ಗಂಗಪ್ಪ ಅರ್ಜಿದಾರರ ಪರ ವಾದ ಮಂಡಿಸಿದ ನ್ಯಾಯವಾದಿಗಳು ಸಲ್ಲಿಸಿರುವ ದಾಖಲೆ ಪರಿಶೀಲಿಸಿ ಸುಧೀರ್ಘ ವಿಚಾರಣೆ ನಡೆಸಿದ್ದರು.

ವಿಚಾರಣೆ ವೇಳೆ ಹಲವು ಅಂಶ ಗಮನಿಸಿದ ಉಪವಿಭಾಗಾಧಿಕಾರಿಗಳು ಅರ್ಜಿದಾರರು ಸಲ್ಲಿಸಿದ ಪ್ರಸ್ತಾವನೆ ಸಮಂಜಸವಲ್ಲ ಎಂದು ಗಮನಿಸಿ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ. ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಹೊಸ್ತಿಲಲ್ಲಿಯೇ ಇಬ್ಬರೂ ವಿಪ ಸದಸ್ಯರ ಅರ್ಜಿಗಳು ತಿರಸ್ಕೃತವಾಗಿರುವುದು ಜಿಲ್ಲೆಯಾದ್ಯಂತ ಹಲವಾರು ರೀತಿಯ ಚರ್ಚೆಗಳಿಗೆ ನಾಂದಿ ಹಾಡಲಿದೆ.

ಆದರೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯ, ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆ ಸಂದರ್ಭದಲ್ಲಿ ಐವರು ವಿಧಾನ ಪರಿಷತ್ ಸದಸ್ಯರ ಹೆಸರನ್ನು ಸ್ಥಳೀಯ ಮತದಾರ ಪಟ್ಟಿಗೆ ಸೇರ್ಪಡೆಗೊಳಿಸಿ ಅಲ್ಲಿನ ಪ್ರಾದೇಶಿಕ ಆಯುಕ್ತರು ಹೊರಡಿಸಿದ್ದ ಆದೇಶವನ್ನು ಕಲಬುರಗಿ ಹೈಕೋರ್ಟ್ ಪೀಠ ರದ್ದುಗೊಳಿಸಿದ್ದನ್ನು ಉಲ್ಲೇಖಿಸಿ ಆದೇಶ ನೀಡಿದೆ.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ