ರಾಜಕಾರಣ ಉದ್ಯೋಗ ಮಾಡಿಕೊಳ್ಳುವ ಪರಿಪಾಠವು ಅಪಾಯಕಾರಿ

KannadaprabhaNewsNetwork | Published : Aug 7, 2024 1:03 AM

ಸಾರಾಂಶ

ರಾಜಕಾರಣಿಗಳು ಜೀವನೋಪಾಯಕ್ಕೆ ಒಂದು ಉದ್ಯೋಗವನ್ನು ಆಶ್ರಯಿಸಿ, ಇದರಿಂದ ಪ್ರತ್ಯೇಕವಾಗಿ ರಾಜಕಾರಣ ಮಾಡುವುದನ್ನು ಒಂದು ಸೇವೆಯನ್ನಾಗಿ ರೂಢಿ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ರಾಜಕಾರಣವನ್ನು ಉದ್ಯೋಗ ಮಾಡಿಕೊಳ್ಳುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಇದು ಆರೋಗ್ಯಕರ ಸಮಾಜದ ನಿರ್ಮಾಣದ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಆತಂಕ ವ್ಯಕ್ತಪಡಿಸಿದರು.

ನಗರದ ರುಚಿ ದಿ ಪ್ರಿನ್ಸ್ ಹೋಟೆಲ್ ನಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಸೋಮವಾರ ಆಯೋಜಿಸಿದ್ದ ನೇಗಿಲಯೋಗಿ ಉದ್ಯಮಿ ಹಾಗೂ ವೃತ್ತಿಪರರ ಸಮ್ಮಿಲನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉದ್ಯೋಗ ಮತ್ತು ರಾಜಕಾರಣವನ್ನು ಪ್ರತ್ಯೇಕವಾಗಿ ನಿರ್ವಹಣೆ ಮಾಡಬೇಕಾದ ಅವಶ್ಯಕತೆ ಇದೆ ಎಂದರು.

ರಾಜಕಾರಣಿಗಳು ಜೀವನೋಪಾಯಕ್ಕೆ ಒಂದು ಉದ್ಯೋಗವನ್ನು ಆಶ್ರಯಿಸಿ, ಇದರಿಂದ ಪ್ರತ್ಯೇಕವಾಗಿ ರಾಜಕಾರಣ ಮಾಡುವುದನ್ನು ಒಂದು ಸೇವೆಯನ್ನಾಗಿ ರೂಢಿ ಮಾಡಿಕೊಳ್ಳಬೇಕು. ಆದರೆ, ಬಹಳಷ್ಟು ಜನರು ರಾಜಕಾರಣವನ್ನೇ ತಮ್ಮ ಉದ್ಯೋಗವನ್ನಾಗಿ ಮಾಡಿಕೊಂಡು, ಅದನ್ನೇ ತಮ್ಮ ಸಂಪಾದನೆಯ ಮಾರ್ಗವನ್ನಾಗಿಸಿಕೊಂಡು ಅಮಾಯಕರನ್ನು ಶೋಷಿಸುತ್ತಾ ಸಮಾಜಕ್ಕೆ ಕಂಟಕರಾಗುತ್ತಿದ್ದಾರೆ. ಇದರಿಂದಾಗಿ ಸಾಮಾನ್ಯ ಜನರಲ್ಲಿ ರಾಜಕಾರಣಿಗಳ ಬಗ್ಗೆ ಅಸಹನೆಯ ಭಾವನೆ ಹೆಚ್ಚಾಗುತ್ತಿದೆ ಎಂದು ಅವರು ವಿಷಾಧಿಸಿದರು.

ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಮಾತನಾಡಿ, ನಮ್ಮ ಸಮುದಾಯದ ಯುವಕರು ಸರ್ಕಾರದ ನೌಕರಿಗಾಗಿ ಕಾಯ್ದು ಕುಳಿತುಕೊಳ್ಳದೆ ತಮ್ಮನ್ನು ವೈವಿಧ್ಯಮಯ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಬೇಕು. ಉದ್ಯೋಗ ಪಡೆಯಲು ಹಪಹಪಿಸುವ ಬದಲಿಗೆ ಹತ್ತಾರು ಜನರಿಗೆ ಉದ್ಯೋಗದಾತರಾಗಿ ಸಮಾಜದ ಪ್ರಗತಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಮೈಸೂರು ಕೈಗಾರಿಕಾ ಸಂಘದ ಅಧ್ಯಕ್ಷ ಪಿ. ವಿಶ್ವನಾಥ್, ಎಂಡಿಎ ಮಾಜಿ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಕೆಎಎಸ್ಎಸ್ಎಫ್ಐ ಜಂಟಿ ನಿರ್ದೇಶಕ ಸತೀಶ್, ನೇಗಿಲಯೋಗಿ ಅಧ್ಯಕ್ಷ ಡಿ. ರವಿಕುಮಾರ್, ಟ್ರಷ್ಟಿ ಇಂದ್ರೇಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಮಂಜೇಗೌಡ, ಗಂಗಾಧರ ಗೌಡ,. ಮೀನಾಕುಮಾರಿ, ಎಸ್. ಯಶಸ್ವಿನಿ, ಮಂಜುನಾಥ್, ನಿಂಗರಾಜು, ಶಿವಶಂಕರ್ ಮೊದಲಾದವರು ಇದ್ದರು. ಸಾಹಿತಿ ಬಲ್ಲೇನಹಳ್ಳಿ ವಿಜಯಕುಮಾರ್ ನಿರೂಪಿಸಿದರು. ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಶೋಭಾ ರಮೇಶ್ ವಂದಿಸಿದರು.

Share this article