ವೈಯಕ್ತಿಕ ದ್ವೇಷಕ್ಕೆ ಸಂಪತ್‌ ನಾಯರ್‌ ಕೊಲೆ: ಎಸ್ಪಿ

KannadaprabhaNewsNetwork |  
Published : May 18, 2025, 11:46 PM IST
ಕೊಲೆ  | Kannada Prabha

ಸಾರಾಂಶ

ಸೋಮವಾರಪೇಟೆ ಚೌಡ್ಲು ಗ್ರಾಮದ ನಿವಾಸಿ ಸಂಪತ್‌ ನಾಯರ್‌ ಕೊಲೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸೋಮವಾರಪೇಟೆ ಚೌಡ್ಲು ಗ್ರಾಮದ ನಿವಾಸಿ ಸಂಪತ್ ನಾಯರ್‌ ಕೊಲೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ಈ ಬಗ್ಗೆ ನಗರದ ತಮ್ಮ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆಯ ಹಾನಗಲ್ಲು ಗ್ರಾಮದ ಕಿರಣ್ ಬಿ.ಎಂ (44), ಕಿರಣ್ ಪತ್ನಿ ಸಂಗೀತಾ (35) ಹಾಗೂ ಚೌಡ್ಲು ಗ್ರಾಮದ ಪಿ.ಎಂ. ಗಣಪತಿ (43) ಬಂಧಿಸಲಾಗಿದೆ ಎಂದು ತಿಳಿಸಿದರು.

ವೈಯಕ್ತಿಕ ದ್ವೇಷದಿಂದ ಕೊಲೆ ಮಾಡುವ ಉದ್ದೇಶದಿಂದ ಸಂಚು ರೂಪಿಸಿ ಆರೋಪಿ ಸಂಗೀತಾ, ಸಂಪತ್ ನಾಯರ್‌ನನ್ನು ಸೋಮವಾರಪೇಟೆಯ ಹಾನಗಲ್‌ಗೆ ಮೇ 9ರಂದು ತಾನು ಪಡೆದ ಸಾಲವನ್ನು ವಾಪಸ್ ನೀಡುತ್ತೇನೆ ಎಂದು ಹೇಳಿ ಬರಮಾಡಿಕೊಂಡಿದ್ದಳು. ತನ್ನ ಗಂಡ ಕಿರಣ್ ಹಾಗೂ ಸ್ನೇಹಿತ ಗಣಪತಿ ಕೋವಿಯಿಂದ ಬೆದರಿಸಿ ದೊಣ್ಣೆಯಿಂದ ಹೊಡೆದು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ ಎಂದರು.

ಕೊಲೆಯನ್ನು ಮರೆಮಾಚಲು ಮೃತದೇಹವನ್ನು ಸಂಪತ್ ನಾಯರ್ ತಂದಿದ್ದ ಫಿಯೆಟ್ ಕಾರಿನಲ್ಲಿ ಹಾಕಿಕೊಂಡು ಸಕಲೇಶಪುರ ತಾಲೂಕು ಒಳಗೂರು ಅರಣ್ಯದಲ್ಲಿ ಸಂಪತ್ ಮೃತದೇಹವನ್ನು ಬಿಸಾಡಿ, ಕಾರನ್ನು ಕಲ್ಲಳ್ಳಿ ಬಳಿ ನಿಲ್ಲಿಸಿ ಬೆಂಗಳೂರಿನಿಂದ ಬೇರೊಂದು ಕಾರನ್ನು ತಂದು ಅದರಲ್ಲಿ ತೆರಳಿದ್ದರು ಎಂದು ವಿವರಿಸಿದರು.

ಮೇ 16ರಂದು ದೊರೆತ ಖಚಿತ ವರ್ತಮಾನದಲ್ಲಿ ಕಿರಣನನ್ನು ಬೆಂಗಳೂರಿನಲ್ಲಿ ಬಂಧಿಸಿ, ಆರೋಪಿ ಗಣಪತಿಯನ್ನು 17ರಂದು ಬಂಧಿಸಲಾಯಿತು. 18ರಂದು ಕಿರಣನ ಪತ್ನಿ ಸಂಗೀತಾಳನ್ನು ಸೋಮವಾರಪೇಟೆಯಲ್ಲಿ ದಸ್ತಗಿರಿ ಮಾಡಿ ವಿಚಾರಣೆ ನಡೆಸಿದಾಗ ತಾವು ಮಾಡಿದ ಕೃತ್ಯವನ್ನು ಒಪ್ಪಿಕೊಂಡು ಘಟನೆಯ ಬಗ್ಗೆ ವಿವರ ನೀಡಿದ್ದರು ಎಂದು ಎಸ್ಪಿ ತಿಳಿಸಿದರು.

ಈ ಸಂಬಂಧ ಕೃತ್ಯಕ್ಕೆ ಬಳಸಲಾದ ದೊಣ್ಣೆ, ಕತ್ತಿ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ತಲೆಮರೆಸಿಕೊಳ್ಳಲು ಸಹಕರಿಸಿದ ಇತರರನ್ನು ಕೂಡ ಸದ್ಯದಲ್ಲೇ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ