ಕನ್ನಡಪ್ರಭ ವಾರ್ತೆ ಇಳಕಲ್ಲ
ಚುನಾವಣೆಯಲ್ಲಿ ಇಳಕಲ್ಲ ನಗರ ಒಂದರಿಂದಲೇ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲಗೆ ಹತ್ತು ಸಾವಿರ ಮತಗಳ ಲೀಡ್ ಕೊಡುತ್ತೇವೆ. ಇದನ್ನು ಬರೆದಿಟ್ಟುಕೊಳ್ಳಿ ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ವಿಶ್ವಾಸ ವ್ಯಕ್ತಪಡಿಸಿದರು.ಇಳಕಲ್ಲ ನಗರದ ಕಂಠಿ ವೃತ್ತದಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಈ ಮತ ಕ್ಷೇತ್ರದ ಜನತೆ ಬಹಳಷ್ಟು ಎಚ್ಚರವಿದ್ದಾರೆ. ಇವರು ಬಿಜೆಪಿಯವರ ಸುಳ್ಳು ಆಶ್ವಾಸನೆಗಳನ್ನು ನಂಬುವುದಿಲ್ಲ. ಈ ಮತ ಕ್ಷೇತ್ರದ ಜನತೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರನ್ನು ಗೆಲ್ಲಿಸಿ ಕೊಡುತ್ತಾರೆ ಎಂದು ಭರವಸೆ ನೀಡಿದರು.
ಹಿಂದಿನ ಸಂಸದರು ಹುನಗುಂದ ಹಾಗೂ ಇಳಕಲ್ಲ ನಗರಕ್ಕೆ ಯಾವ ಯೋಜನೆಗಳನ್ನು ತಂದಿಲ್ಲ. ಈ ನಗರಕ್ಕೆ ಅತಿ ಅವಶ್ಯವಾಗಿರುವ ರೈಲ್ ಅನ್ನು ಇಪ್ಪತ್ತು ವರ್ಷವಾದರೂ ಮಾಡಲೇ ಇಲ್ಲ. ಇನ್ನು ಈ ಮತಕ್ಷೇತ್ರದ ನೇಕಾರ, ರೈತರಿಗೆ ಗದ್ದಿಗೌಡರಿಂದ ಯಾವುದೇ ಪ್ರಯೋಜನವಾಗಿಲ್ಲ. ಸಂಸದ ಗದ್ದಿಗೌಡರ ಸಾಧನೆ ಶೂನ್ಯ ಎಂದು ಆರೋಪಿಸಿದ ಅವರು, ಇನ್ನು ಈ ಮತಕ್ಷೇತ್ರದ ಮಾಜಿ ಶಾಸಕರು ಏನೇನೋ ಮಾತನಾಡುತ್ತಿದ್ದಾರೆ. ಅವರಿಂದ ಈ ಮತ್ರ ಕ್ಷೇತ್ರ ಏನು ಅಭಿವೃದ್ಧಿಯಾಗಿದೆ ಎಂದು ನೀವೆ ಹೇಳಿ ಎಂದು ಸಾರ್ವಜನಿಕರನ್ನೇ ಪ್ರಶ್ನಿಸಿದರು.ಮೋದಿಯವರಿಂದ ದೇಶದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ಅವರಿಂದ ದೇಶದ ಶ್ರೀಮಂತರಿಗೆ ಅನುಕೂಲವಾಗಿದೆ. ಕಾರಣ ಪ್ರತಿಯೊಬ್ಬ ಮತದಾರರು ಅರ್ಥ ಮಾಡಿಕೊಂಡು ಕಾಂಗ್ರೆಸ್ ಪಕ್ಷ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಅಭ್ಯರ್ಥಿ ಸಂಯುಕ್ತಾ ಪಾಟೀಲ ಮಾತನಾಡಿ, ನನ್ನ ಸಹೋದರ, ಶಾಸಕ ವಿಜಯಾನಂದ ಕಾಶಪ್ಪನವರ ಆಶೀರ್ವಾದವೇ ನನ್ನ ಗೆಲುವಿಗೆ ಶ್ರೀರಕ್ಷೆ. ಅವರ ಚಾಣಾಕ್ಷತನ ನನ್ನನ್ನು ಗೆಲ್ಲಿಸುತ್ತದೆ ಎಂದು ಬಣ್ಣಿಸಿದರು.ಅಲ್ಲದೇ, ಈ ದೇಶದ ಆರ್ಥಿಕ ಸ್ಥಿತಿ ಸಂದಿಗ್ದ ಪರಿಸ್ಥಿತಿಯಲ್ಲಿದೆ. ದೇಶದ ಅಭಿವೃದ್ಧಿಯ ನಾಲ್ಕು ಆಧಾರ ಸ್ತಂಭಗಳಿವೆ. ಅವುಗಳ ಅಭಿವೃದ್ದಿಯೆ ದೇಶದ ಅಭಿವೃದ್ಧಿ, ಅಂಥ ಅಭಿವೃದ್ದಿ ಕಾರ್ಯ ಮಾಡಲು ನಿಮ್ಮ ಆಶೀರ್ವಾದ ನನಗೆ ಬೇಕು. ಮೋದಿಯವರು ಕರ್ನಾಟಕದ ಜನತೆಗೆ ವಂಚಿಸುತ್ತಿದ್ದಾರೆ, ಆದರೆ, ನಮ್ಮ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಎಲ್ಲ ಗ್ಯಾರಂಟಿಗಳನ್ನು ಜನತೆಗೆ ಕೊಟ್ಟಿದೆ. ಈ ಚುನಾವಣೆ ಸಂಯುಕ್ತಾ ಪಾಟೀಲಳ ಚುನಾವಣೆ ಅಲ್ಲ, ಇದು ರಾಜ್ಯದ ಜನರ ಚುನಾವಣೆಯಾಗಿದೆ. ಹೀಗಾಗಿ, ಈ ನಿಮ್ಮ ಮಗಳು ಸಂಯುಕ್ತಾ ಪಾಟೀಲಳಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿಯನ್ನು ಮಾಡಿದರು.
ಮಹಾಂತೇಶ ಗದ್ದಿನಕೇರಿ, ವೆಂಕಟೇಶ ಸಾಕಾ, ಅಬ್ದುಲ್ ರಜಾಕ ತಟಗಾರ, ರವಿಂದ್ರ ಕಲಬುರ್ಗಿ, ಶರಣಪ್ಪ ಆಮದಿಹಾಳ ಹಾಗು ಇತರರು ಮಾತನಾಡಿದರು. ವೇದಿಕೆಯಲ್ಲಿ ಪಕ್ಷದ ಹಿರಿಯರು, ಪದಾಧಿಕಾರಿಗಳು, ಇಳಕಲ್ಲ ನಗರ ಸಭೆಯ ಸದಸ್ಯರು ಹಾಗು ಇತರರು ಇದ್ದರು.