ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ಕೊಳಚೆ ಪ್ರದೇಶದ ನಿವಾಸಿಗಳಿಗೆ ತಿಂಗಳೊಳಗಾಗಿ ಹಕ್ಕುಪತ್ರಗಳನ್ನು ವಿತರಿಸಲು ಕ್ರಮ ಜರುಗಿಸಲಾಗುವುದು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.ಸೋಮವಾರ ಮನವಿ ಸಲ್ಲಿಸಲು ಆಗಮಿಸಿದ್ದ ಕೊಳಚೆಪ್ರದೇಶ ನಿವಾಸಿಗಳೊಂದಿಗೆ ಚರ್ಚೆ ನಡೆಸಿದ ಅವರು, ಚೌಡಯ್ಯ ನಗರ ಹಾಗೂ ಮಹಾಲಿಂಗೇಶ್ವರ ಕಾಲೋನಿಗಳಲ್ಲಿ ವಾಸಿಸುವ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.ಬಹುದಿನಗಳ ಬೇಡಿಕೆಯಾಗಿರುವ ಹಕ್ಕುಪತ್ರ ವಿತರಣೆಯಾಗಿಲ್ಲ. ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಸ್ಲಂ ಬೋಲ್ಡ್‌ನ ಅಧಿಕಾರಿಗಳೊಂದಿಗೆ ಚರ್ಚಿಸಿ ತಿಂಗಳೊಳಗೆ ಹಕ್ಕು ಪತ್ರಗಳನ್ನು ವಿತರಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.ಸಮಾಜ ಸೇವಕ ರಾಜು ಮೊಸಳಿ ಮಾತನಾಡಿ, ನಗರದ ಸರ್ವೇ ನಂ.48 ರಲ್ಲಿ ಬರುವ ಚೌಡಯ್ಯ ನಗರ ಮಹಲಿಂಗೇಶ್ವರ ಕಾಲೋನಿಗಳಲ್ಲಿ ವಾಸಿಸುವ ಜನರು ಸ್ಲಂ ಬೋರ್ಡ್‌ಗೆ ಹಣ ಸಂದಾಯ ಮಾಡಿದ್ದಾರೆ. ಸರ್ಕಾರದ ಆದೇಶದಂತೆ ನಗರಸಭೆಯಿಂದ ಸರ್ವೇ ಕಾರ್ಯವು ನಡೆದಿದೆ. ವಿಜಯಪುರದ ಸ್ಲಂಬೊರ್ಡ್ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದು, ಕಂದಾಯ ಇಲಾಖೆಗೆ ವರದಿ ಸಲ್ಲಿದ್ದಾರೆ. ಸರ್ಕಾರದಿಂದ ಹಕ್ಕುಪತ್ರಗಳು ಮಂಜೂರಾಗಿವೆ ಎಂಬ ಮಾಹಿತಿ ಇದ್ದರೂ ಇದುವರೆಗೆ ಹಕ್ಕುಪತ್ರಗಳ ವಿತರಣೆ ನಡೆದಿಲ್ಲ ಎಂದು ತಿಳಿಸಿದರು. ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಹಕ್ಕುಪತ್ರಗಳನ್ನು ವಿತರಿಸಲು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.
ಸಲೀಮ ಶೆಕ್, ಹಾಜಿಲಾಲ್ ಶಿಂದಗಿ, ಮೊಹಮ್ಮದ್ ಕೊಪ್ಪದ, ಆರಿಫ್ ಅತ್ತಾರ, ಬುರಾನ್‌ಸಾಬ್ ಹೊಸಕೋಟಿ, ಅಬ್ದುಲ್‌ಸಾಬ್ ಹೊಸಕೋಟಿ, ಅಸದ ಸೈಯದ್, ನಿಂಗವ್ವ ಯ.ಕಲೂತಿ, ಮಾದೇವಿ ಹಾದಿಮನಿ, ಬಾನು ಸೈಯದ್, ಸುಸಲವ್ವ ಭೂತಾಳಿ ಮುಂತಾದವರು ಇದ್ದರು. ಮಾಜಿ ಶಾಸಕ ಆನಂದ ನ್ಯಾಮಗೌಡ ಹಾಗೂ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.