ದಾಬಸ್‍ಪೇಟೆ: ಹಿಂದಿನ ಕಠಿಣ ಕಾನೂನುಗಳಿಂದ ಕಂಗೆಟ್ಟಿದ್ದ ಶ್ರೀಗಂಧ ಬೆಳೆಗಾರರಿಗೆ ಇಂದು ಉತ್ತಮ ಅವಕಾಶಗಳಿದ್ದು, ಬೆಳೆಗಾರರು ಸಂಘಟಿತರಾಗಿ ಆರ್ಥಿಕ ಸಬಲತೆ ಸಾಧಿಸಬೇಕು ಎಂದು ಅಖಿಲ ಕರ್ನಾಟಕ ಶ್ರೀಗಂಧ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಅಮರ್ ನಾರಾಯಣ್ ಕರೆ ನೀಡಿದರು.
ಹಿಂದಿನ ದಿನಗಳಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಶ್ರೀಗಂಧದ ಮರದ ಮೇಲೆ ಹಕ್ಕು ಹೊಂದಲು ಸಾಧ್ಯವಿರಲಿಲ್ಲ. ಕಠಿಣ ಅರಣ್ಯ ಕಾಯ್ದೆಗಳು ಮತ್ತು ರಕ್ಷಣೆಯ ಸಮಸ್ಯೆಯಿಂದಾಗಿ ರೈತರು ಶ್ರೀಗಂಧ ಬೆಳೆಯಲು ಹಿಂದೇಟು ಹಾಕುತ್ತಿದ್ದರು. ಆದರೆ ನಿರಂತರ ಹೋರಾಟದ ಫಲವಾಗಿ ಇಂದು ನಿಯಮಗಳು ಸರಳವಾಗಿದ್ದು, ರೈತರು ತಮ್ಮ ಜಮೀನಿನ ಮರದ ಮೇಲೆ ಪೂರ್ಣ ಅಧಿಕಾರ ಹೊಂದುವಂತಾಗಿದೆ ಎಂದರು.
ಮಾರುಕಟ್ಟೆಯಲ್ಲಿ ಇಂದು ಶ್ರೀಗಂಧಕ್ಕೆ ಹೆಚ್ಚಿನ ಬೇಡಿಕೆ ಹಾಗೂ ಉತ್ತಮ ಬೆಲೆ ದೊರೆಯುತ್ತಿದ್ದು, ರೈತರು ಇದನ್ನು ಭವಿಷ್ಯದ ದೊಡ್ಡ ಹೂಡಿಕೆಯಾಗಿ ಕಾಣಬೇಕು. ಮರಗಳನ್ನು ಬೆಳೆಸುವುದು ಎಷ್ಟು ಮುಖ್ಯವೋ, ಅವುಗಳನ್ನು ರಕ್ಷಿಸುವುದು ಕೂಡ ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಮೈಕಾನ್ ಮುಳ್ಳುತಂತಿಯಂತಹ ಆಧುನಿಕ ರಕ್ಷಣಾ ತಂತ್ರಜ್ಞಾನಗಳ ನೆರವು ಪಡೆಯುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.ಶಿಕ್ಷಣ ತಜ್ಞ ಹಾಗೂ ಹಿರಿಯ ಬ್ಯಾಂಕರ್ ಇರಬಂತ್ ಸಿಂಗ್ ಮಾತನಾಡಿ, ಶ್ರೀಗಂಧ ಕೃಷಿಗೆ ಬ್ಯಾಂಕಿಂಗ್ ವಲಯದಿಂದ ದೊರೆಯುವ ಸಾಲ ಸೌಲಭ್ಯಗಳು ಹಾಗೂ ಹೂಡಿಕೆಯ ಮಹತ್ವದ ಬಗ್ಗೆ ರೈತರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.