ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ಕಮಲ ಮಹಲ್ ಆವರಣದಲ್ಲಿ ಬೆಳೆದು ನಿಂತಿದ್ದ ಶ್ರೀಗಂಧದ ಮರವನ್ನು ಕಳ್ಳರು ಶುಕ್ರವಾರ ತಡ ರಾತ್ರಿ ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಕೃತ್ಯ ನಡೆದ ಬಳಿಕ ಹಂಪಿಯ ಭದ್ರತೆ ಬಗ್ಗೆ ಪ್ರಶ್ನೆ ಎದ್ದಿದೆ.
ಕಮಲ್ ಮಹಲ್ ಆವರಣದಲ್ಲಿ ಶ್ರೀಗಂಧದ ಮರ ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂದ ಬಳಿಕ ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿ ನಿಹಿಲ್ ದಾಸ್, ಹಂಪಿ ಪೊಲೀಸ್ ಠಾಣೆ ಪಿಐ ಶಿವರಾಜ್ ಇಂಗಳೆ, ಅರಣ್ಯ ಇಲಾಖೆಯ ಪರಶುರಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಕೂಡ ಮೇಲಧಿಕಾರಿಗಳಿಗೆ ವರದಿ ನೀಡಲಿದ್ದಾರೆ.
ಸಿಸಿ ಕ್ಯಾಮೆರಾ ರಿಪೇರಿ: ಹಂಪಿಯ ಕೆಲವು ಸ್ಮಾರಕಗಳ ಬಳಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ. ಕಮಲ್ ಮಹಲ್ ಬಳಿ ಅಳವಡಿಸಿರುವ ಕ್ಯಾಮೆರಾ ನಿಷ್ಕ್ರಿಯವಾಗಿದ್ದರಿಂದ ಕಳ್ಳರ ಕರಾಮತ್ತು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿಲ್ಲ. ಇಂತಹದೊಂದು ಕೃತ್ಯ ನಡೆದ ಬಳಿಕ ಪೊಲೀಸರು ತನಿಖೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಹಂಪಿಯ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದರೂ ಕೆಲವು ಕಡೆ ಕಾರ್ಯನಿರ್ವಹಿಸುತ್ತಿಲ್ಲ. ಹಾಗಾಗಿ ಕಳ್ಳರನ್ನು ಪತ್ತೆ ಹಚ್ಚಲು ಪೊಲೀಸರಿಗೂ ತೊಡಕಾಗಿ ಪರಿಣಮಿಸಿದೆ.ಪುರಾತತ್ವ ಇಲಾಖೆ ವಿರುದ್ಧ ಆಕ್ರೋಶ: ಹಂಪಿಯ ಪ್ರಮುಖ ಸ್ಮಾರಕಗಳ ಬಳಿಯೇ ಶ್ರೀಗಂಧದ ಮರವನ್ನು ಯಂತ್ರದಿಂದ ಕಟಾವು ಮಾಡಿಕೊಂಡು ಹೋಗಿದ್ದರೂ ಕೇಂದ್ರ ಪುರಾತತ್ವ ಇಲಾಖೆ ಸೆಕ್ಯೂರಿಟಿ ಗಾರ್ಡ್‌ಗಳು ಕಳ್ಳರನ್ನು ಹಿಡಿದಿಲ್ಲ. ಹಂಪಿಯ ಸ್ಮಾರಕಗಳಿಗೆ ಸೂಕ್ತ ರಕ್ಷಣೆ ಇಲ್ಲದಾಗಿದೆ. ಪ್ರಮುಖ ಸ್ಮಾರಕ ಕಮಲ್ ಮಹಲ್‌ಗೆ ಸೂಕ್ತ ಭದ್ರತೆ ಇಲ್ಲ. ಇನ್ನು ಉಳಿದ ಸ್ಮಾರಕಗಳ ಸ್ಥಿತಿ ಹೇಳುವಂತಿಲ್ಲ. ಪುರಾತತ್ವ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹಂಪಿಗೆ ಸರಿಯಾಗಿ ಭದ್ರತೆ ಇಲ್ಲದಾಗಿದೆ. ಪುರಾತತ್ವ ಇಲಾಖೆಯ ಭದ್ರತಾ ಸಿಬ್ಬಂದಿ ಇದ್ದರೂ ಸ್ಮಾರಕಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸ್ಮಾರಕಪ್ರಿಯರಾದ ಡಾ. ವಿಶ್ವನಾಥ ಮಾಳಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಫ್‌ಐಆರ್ ದಾಖಲು: ಹಂಪಿಯ ಕಮಲ ಮಹಲ್ ಆವರಣದ ಶ್ರೀಗಂಧದ ಮರವನ್ನು ಕಳ್ಳರು ಶುಕ್ರವಾರ ರಾತ್ರಿ 2 ಗಂಟೆ ಬಳಿಕ ಕಳವು ಮಾಡಿಕೊಂಡು ಹೋಗಿದ್ದಾರೆ. ಸೆಕ್ಯೂರಿಟಿ ಮಲಗಿದ ಬಳಿಕ ಈ ಕೃತ್ಯ ಮಾಡಲಾಗಿದೆ ಎಂದು ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿಗಳು ಹಂಪಿ ಪೊಲೀಸರಿಗೆ ದೂರಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಹಂಪಿಯ ಕಮಲ ಮಹಲ್ ಆವರಣದಲ್ಲಿ ಬೆಳೆದು ನಿಂತಿದ್ದ ಶ್ರೀಗಂಧದ ಮರವನ್ನು ಕಳವು ಮಾಡಲಾಗಿದೆ. ಮೊದಲಿನಿಂದಲೂ ಈ ಸ್ಮಾರಕಕ್ಕೆ ಸೆಕ್ಯೂರಿಟಿ ಗಾರ್ಡ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಈ ಕೃತ್ಯದ ತನಿಖೆಗೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂದು ಕೇಂದ್ರ ಪುರಾತತ್ವ ಇಲಾಖೆ, ಹಂಪಿ ವಲಯ ಅಧೀಕ್ಷಕ ನಿಹಿಲ್ ದಾಸ್ ಹೇಳಿದ್ದಾರೆ.ಕಮಲ್ ಮಹಲ್ ಆವರಣದಲ್ಲಿ ಅಂದಾಜು 35 ವರ್ಷದ ಶ್ರೀಗಂಧದ ಮರವನ್ನು ಕಳ್ಳರು ಕಟಾವು ಮಾಡಿಕೊಂಡು ಪರಾರಿಯಾಗಿದ್ದಾರೆ. ಈಗ ಸ್ಥಳ ಪರಿಶೀಲನೆ ನಡೆಸಿದ್ದು, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಡಿಆರ್‌ಎಫ್‌ಒ ಪರಶುರಾಮ ಹೇಳಿದ್ದಾರೆ.