ವಿ.ಎಂ. ನಾಗಭೂಷಣ
ಎನ್‌ಎಂಡಿಸಿ (ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್) ವತಿಯಿಂದ ಸಿಎಸ್‌ಆರ್ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ಅಡಿಯಲ್ಲಿ ₹೨ ಕೋಟಿ ವೆಚ್ಚದಲ್ಲಿ ಈ ಕ್ರೀಡಾಂಗಣ ನಿರ್ಮಿಸಲಾಗಿದೆ.
ವರ್ಷದ ಹಿಂದೆ ಬೀಸಿದ ಗಾಳಿ, ಮಳೆಗೆ ಕ್ರೀಡಾಂಗಣದ ಒಂದು ಬದಿಯಲ್ಲಿ ಪಂದ್ಯಗಳ ವೀಕ್ಷಣೆಗೆ ನಿರ್ಮಿಸಿರುವ ಮೆಟ್ಟಿಲುಗಳ ಮೇಲಿನ ಚಾವಣಿ ಕಿತ್ತು ಹೋಗಿದೆ. ಕೇವಲ ಕಬ್ಬಿಣದ ಕಂಬಿಗಳು ಎಲುಬಿನ ಹಂದರದ ತರಹ ಗೋಚರಿಸುತ್ತಿವೆ. ಇದರಿಂದಾಗಿ ಮಳೆ ಸುರಿದರೆ, ಇಲ್ಲಿ ಕುಳಿತುಕೊಳ್ಳಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ.ಅನೈತಿಕ ಚಟುವಟಿಕೆ: ಕ್ರೀಡಾಂಗಣಕ್ಕೆ ಸೂಕ್ತ ರಕ್ಷಣೆ ಇಲ್ಲದ ಕಾರಣ, ಕ್ರೀಡಾಂಗಣದ ಪ್ರದೇಶ ಒಂದು ರೀತಿಯಲ್ಲಿ ಅನೈತಿಕ ಚಟುವಟಿಕೆ ತಾಣವಾಗುತ್ತಿದೆ. ವೀಕ್ಷಣಾ ಗ್ಯಾಲರಿಯ ಕೆಳಗಿನ ಕೊಠಡಿಗಳಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು, ಬೀಡಿ, ಸಿಗರೇಟಿನ ತುಂಡುಗಳು ಇಲ್ಲಿನ ಅನೈತಿಕ ಚಟುವಟಿಕೆಗೆ ಕನ್ನಡಿ ಹಿಡಿಯುತ್ತಿವೆ. ಕ್ರೀಡಾಂಗಣ ಪ್ರವೇಶ ದ್ವಾರದಲ್ಲಿ ಮುಳ್ಳು ಮತ್ತಿತರ ಗಿಡ-ಗಂಟಿಗಳು ಬೆಳೆದಿವೆ. ಮಳೆ ಬಂದರೆ ಕ್ರೀಡಾಂಗಣದಲ್ಲಿ ನೀರು ನಿಲ್ಲುತ್ತದೆ.
ಮೂಲ ಸೌಕರ್ಯಗಳ ಕೊರತೆಯಿಂದಾಗಿ ಕ್ರೀಡಾಂಗಣ ನಿರ್ಮಾಣವಾಗಿ ೭-೮ ವರ್ಷಗಳು ಕಳೆದರೂ ಇಲ್ಲಿ ಶಾಲಾ ಹಾಗೂ ಕಾಲೇಜು ಹಂತದ ವಲಯ ಹಾಗೂ ತಾಲೂಕು ಮಟ್ಟದ ಕ್ರೀಡಾಕೂಟ ಆಯೋಜಿಸಲು ಸಾಧ್ಯವಾಗಿಲ್ಲ. ತಾಲೂಕು ಕ್ರೀಡಾಂಗಣವಿದ್ದರೂ, ಮೂಲ ಸೌಕರ್ಯಗಳ ಕೊರತೆ ಮತ್ತು ಕ್ರೀಡಾಂಗಣ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಕಾಣದ ಕಾರಣ, ಶಾಲಾ-ಕಾಲೇಜುಗಳ ವಲಯ ಹಾಗೂ ತಾಲೂಕು ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲು ಸೂಕ್ತ ಸ್ಥಳಕ್ಕಾಗಿ ಪರದಾಡುವಂತಾಗಿದೆ. ಖಾಸಗಿಯವರ ಕ್ರೀಡಾಂಗಣಗಳನ್ನು ಅವಲಂಬಿಸುವಂತಾಗಿರುವುದು ವಿಪರ್ಯಾಸವಾಗಿದೆ.ತಾಲೂಕು ಕ್ರೀಡಾಂಗಣವನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿ, ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿ ಇಲ್ಲಿ ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳಲು ಅವಕಾಶ ಕಲ್ಪಿಸಬೇಕಿದೆ. ಇಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಬೇಕಿದೆ. ಕ್ರೀಡಾ ಚಟುವಟಿಕೆಗೆ ಖಾಸಗಿಯವರ ಕ್ರೀಡಾಂಗಣಗಳ ಮೇಲೆ ಅವಲಂಬಿತರಾಗುವುದನ್ನು ತಪ್ಪಿಸಬೇಕಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸುವರೆ ಎಂಬುದನ್ನು ಕಾದು ನೋಡಬೇಕಿದೆ.
ಸೌಕರ್ಯ ಒದಗಿಸಿ: ಸಂಡೂರಿನ ಕ್ರೀಡಾಂಗಣವನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿ, ಮೂಲ ಸೌಕರ್ಯಗಳನ್ನು ಒದಗಿಸಿದರೆ, ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳಲು ಅನುಕೂಲವಾಗುತ್ತದೆ. ಕ್ರೀಡಾಂಗಣದಲ್ಲಿ ಸೆಕ್ಯುರಿಟಿಯನ್ನು ನೇಮಿಸಿ, ಡಿಎಂಎಫ್ ಅನುದಾನದಲ್ಲಿ ಸಂಬಳ ನೀಡಿ, ಕ್ರೀಡಾಂಗಣ ಬಳಿ ನಡೆಯುವ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಬೇಕಿದೆ. ಅಲ್ಲಿ ಸ್ವಚ್ಛತೆ ಕಾಪಾಡುವುದು ಅಗತ್ಯವಿದೆ ಎಂದು ಸಂಡೂರಿನ ಶ್ರೀಶೈಲ ಆಲ್ದಳ್ಳಿ ಹೇಳಿದರು.ಸಂಡೂರಿನಲ್ಲಿರುವ ತಾಲೂಕು ಕ್ರೀಡಾಂಗಣ ಒಂದು ರೀತಿಯಲ್ಲಿ ನಿರ್ಗತಿಕವಾಗಿದೆ. ಇದು ಅನೈತಿಕ ಚಟುವಟಿಕೆ ತಾಣವಾಗುತ್ತಿದೆ. ಇದು ಇದ್ದೂ ಇಲ್ಲದಂತಾಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಕ್ರಮಕೈಗೊಂಡು ಕ್ರೀಡಾಂಗಣದ ಅಭಿವೃದ್ಧಿಗೆ ಹಾಗೂ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು. ಇದರಿಂದ ಕ್ರೀಡಾ ಚಟುವಟಿಕೆ ಅಯೋಜನೆಗೆ ಮತ್ತು ಕ್ರೀಡಾಪಟುಗಳಿಗೆ ಕ್ರೀಡಾಭ್ಯಾಸ ನಡೆಸಲು ಅನುಕೂಲವಾಗಲಿದೆ ಎಂದು ಸಂಡೂರಿನ ಎಂ.ಎಲ್.ಕೆ. ನಾಯ್ಡು ಹೇಳಿದರು.