ಸಂಡೂರು ಕುಮಾರಸ್ವಾಮಿ, ಮಾಜಿ ಸಚಿವೆ ಬಸವರಾಜೇಶ್ವರಿ ಅಂಚೆ ಲಕೋಟೆ ಬಿಡುಗಡೆ

KannadaprabhaNewsNetwork |  
Published : Jan 31, 2024, 02:19 AM IST
ಬಳ್ಳಾರಿಯ ಬಿಪಿಎಸ್‌ಸಿ ಶಾಲೆ ಸಭಾಂಗಣದಲ್ಲಿ ಅಂಚೆ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವೆ ಬಸವರಾಜೇಶ್ವರಿ ಹಾಗೂ ಸಂಡೂರು ಕುಮಾರಸ್ವಾಮಿ ದೇವಸ್ಥಾನದ ವಿಶೇಷ ಅಂಚೆ ಲಕೋಟೆಯನ್ನು ಲೋಕಾರ್ಪಣೆಗೊಳಿಸಲಾಯಿತು.  | Kannada Prabha

ಸಾರಾಂಶ

ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವಯೋಮಾನದವರು ಅಂಚೆ ಲಕೋಟೆ ಹಾಗೂ ಅಂಚೆ ಚೀಟಿಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು.

ಬಳ್ಳಾರಿ: ಹೈದ್ರಾಬಾದ್ ವಿಮೋಚನಾ ಚಳವಳಿಯಲ್ಲಿ ಪಾಲ್ಗೊಂಡು ದಿಟ್ಟ ಮಹಿಳಾ ಹೋರಾಟಗಾರ್ತಿ ಎಂಬ ಹೆಗ್ಗಳಿಕೆ ಗಳಿಸಿದ್ದ ಕೇಂದ್ರದ ಮಾಜಿ ಸಚಿವೆ ಬಸವರಾಜೇಶ್ವರಿ ಹಾಗೂ ದೇಶದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪೂಜ್ಯ ಸಂಕೇತವಾದ ಸಂಡೂರಿನ ಕುಮಾರಸ್ವಾಮಿ ದೇವಸ್ಥಾನದ ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭ ನಗರದ ಬಿಪಿಎಸ್‌ಸಿ ಶಾಲೆಯ ಶರಣ ಸಭಾಂಗಣದಲ್ಲಿ ಮಂಗಳವಾರ ಜರುಗಿತು.

ಸಮಾರಂಭಕ್ಕೆ ಚಾಲನೆ ನೀಡಿ ವಿಶೇಷ ಲಕೋಟೆಗಳನ್ನು ಲೋಕಾರ್ಪಣೆಗೊಳಿಸಿದ ಉತ್ತರ ಕರ್ನಾಟಕ ವಲಯದ ಅಂಚೆ ಇಲಾಖೆ ನಿರ್ದೇಶಕಿ ವಿ. ತಾರಾ ಅವರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವಯೋಮಾನದವರು ಅಂಚೆ ಲಕೋಟೆ ಹಾಗೂ ಅಂಚೆ ಚೀಟಿಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಈ ಹವ್ಯಾಸ ಜ್ಞಾನಾಭಿವೃದ್ಧಿಗೆ ಸಹಕಾರಿಯಾಗುತ್ತದೆ. ಲಕೋಟೆ ಹಾಗೂ ಅಂಚೆ ಚೀಟಿಯಲ್ಲಿರುವ ಮಹನೀಯರ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಬಸವರಾಜೇಶ್ವರಿ ಅವರು ಹೈದ್ರಾಬಾದ್‌ ವಿಮೋಚನಾ ಚಳವಳಿಯಲ್ಲಿ ಭಾಗವಹಿಸಿದ್ದ ಹೋರಾಟ ಮನೋಭಾವದ ವಿಶಿಷ್ಟ ಮಹಿಳೆಯಾಗಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ್ದ ಬಸವರಾಜೇಶ್ವರಿ ಅವರು 1991ರಿಂದ 1996ರವರೆಗೆ ಪಿ.ವಿ. ನರಸಿಂಹರಾವ್ ಅವರ ಸಚಿವ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.

ಸಂಡೂರಿನ ಕುಮಾರಸ್ವಾಮಿ ದೇವಸ್ಥಾನ ದೇಶದ ಪ್ರಾಚೀನ ದೇವಾಲಯಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಕ್ರಿಶ 8ರಿಂದ 10ನೇ ಶತಮಾನದಷ್ಟು ಹಿಂದಿನ ಸಂರಕ್ಷಿತ ಸ್ಮಾರಕವಾಗಿದೆ. ಆಧ್ಯಾತ್ಮಿಕತೆ ಮತ್ತು ಸಾಂಸ್ಕೃತಿಕ ಪರಂಪರೆಯ ಪೂಜ್ಯ ಸಂಕೇತವಾಗಿದೆ ಎಂದರು.

ಬಸವರಾಜೇಶ್ವರಿ ಅವರ ಪುತ್ರರಾದ ಡಾ. ಎಸ್.ಜೆ. ಮಹಿಪಾಲ್ ಹಾಗೂ ಡಾ. ಯಶ್ವಂತ್ ಭೂಪಾಲ್ ಅವರು ಬಸವರಾಜೇಶ್ವರಿ ಇಡೀ ಕುಟುಂಬಕ್ಕೆ ಉತ್ತಮ ಸಂಸ್ಕಾರ ನೀಡಿದರು. ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ಸ್ಥಾನಮಾನ ಗಳಿಸಿದ್ದರೂ ಸರಳ ಜೀವನ ನಡೆಸಿ, ಆದರ್ಶವಾಗಿದ್ದರು. ಸಮಾಜಮುಖಿ ಚಿಂತನೆಯಿಂದ ಅನೇಕ ಯೋಜನೆಗಳ ಜಾರಿಗೊಳಿಸಿ, ತಮ್ಮ ಅಧಿಕಾರ ಅವಧಿಯನ್ನು ಜನೋಪಯೋಗ ಕಾರ್ಯಕ್ಕೆ ಬಳಸಿದರು ಎಂದು ಸ್ಮರಿಸಿದರು.

ಸಂಡೂರು ಕುಮಾರಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ಕಾರ್ಯದರ್ಶಿ ಪ್ರಾಣೇಶ್ ಆಚಾರ್ಯ ಅವರು ಕುಮಾರಸ್ವಾಮಿ ದೇವಾಲಯದ ಐತಿಹ್ಯ ಹಾಗೂ ಸುತ್ತಮುತ್ತ ಇರುವ ವಿವಿಧ ದೇವಸ್ಥಾನಗಳ ಹಿನ್ನೆಲೆ ಕುರಿತು ತಿಳಿಸಿದರು. ಅಂಚೆ ಇಲಾಖೆಯ ಅಧೀಕ್ಷಕ ವಿ.ಎಲ್. ಚಿತಕೋಟೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ, ಅಂಚೆ ಇಲಾಖೆಯ ವಿವಿಧ ಸಮಾಜಮುಖಿ ಸೇವೆಗಳ ಕುರಿತು ವಿವರಿಸಿದರು. ಅಂಚೆ ಇಲಾಖೆಯ ಸಿಬ್ಬಂದಿಗಳಾದ ಅಲ್ಲಾಸಾಬ್, ಚಿದಾನಂದ ಹಾಗೂ ವಿ. ಷಣ್ಮುಗಂ ಅವರು ಕಾರ್ಯಕ್ರಮ ನಿರ್ವಹಿಸಿದರು. ಬಿಪಿಎಸ್‌ಸಿ, ಬಿಐಟಿಎಂ, ಸಂಜಯ್ ಗಾಂಧಿ ಪಾಲಿಟೆಕ್ನಿಕ್ ಸೇರಿದಂತೆ ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳು, ಕಿಷ್ಕಿಂದ ವಿಶ್ವವಿದ್ಯಾಲಯ ಸಿಬ್ಬಂದಿ, ಬಸವರಾಜೇಶ್ವರಿ ಅವರ ಕುಟುಂಬ ಸದಸ್ಯರು, ಅಭಿಮಾನಿಗಳು ಪಾಲ್ಗೊಂಡಿದ್ದರು. ಭಾರತೀಯ ಅಂಚೆ ಇಲಾಖೆ ಕಾರ್ಯಕ್ರಮ ಆಯೋಜಿಸಿತ್ತು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ