ಕನ್ನಡಪ್ರಭ ವಾರ್ತೆ ರಾಮನಗರ
ಅರ್ಕಾವತಿ ಮತ್ತು ಕಾವೇರಿ ನದಿಗಳು ಸೇರುವ ಸಂಗಮ ಸ್ಥಳ ಎಷ್ಟು ಸುಂದರವೋ ಅಷ್ಟೇ ಅಪಾಯಕಾರಿ ಕೂಡ. ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿರುವ ಸಂಗಮ ಇತ್ತೀಚಿನ ದಿನಗಳಲ್ಲಿ ಸಾವಿನ ತಾಣವಾಗಿ ಮಾರ್ಪಟ್ಟಿದೆ.ಬೆಂಗಳೂರಿಗರು ಮಾತ್ರವಲ್ಲದೆ ಸುತ್ತಮುತ್ತಲ ಜಿಲ್ಲೆಗಳ ಜನರು ವಾರಾಂತ್ಯದಲ್ಲಿ ನದಿಯ ದಡದ ಬಳಿ ಸಮಯ ಕಳೆಯಲು ಬಯಸಿದಾಗ ಹಾಗೂ ಮೋಜು ಮಸ್ತಿಗಾಗಿ ಸಂಗಮ ಪ್ರವಾಸಿ ತಾಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಪ್ರವಾಸಿ ತಾಣದಲ್ಲಿ ಉಸಿರು ಚೆಲ್ಲಿದವರಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ಸಂಗಮದ ಬಳಿ ಕಾವೇರಿ ನದಿ ನೀರಿನಲ್ಲಿ ಮುಳುಗಿ ಸಾವಿಗೀಡಾಗುತ್ತಿರುವ ಪ್ರಕರಣಗಳು ದಿನೆ ದಿನೇ ಹೆಚ್ಚಾಗುತ್ತಿವೆ. ಪ್ರತಿ ವರ್ಷ ಸರಾಸರಿ 10ಕ್ಕೂ ಹೆಚ್ಚು ಮಂದಿ ಕಾವೇರಿ ನದಿಯಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಸೋಮವಾರ ಬೆಂಗಳೂರಿನ ಐವರು ವಿದ್ಯಾರ್ಥಿಗಳು ಹೀಗೆ ನದಿಯಲ್ಲಿ ಜೀವ ಕಳೆದುಕೊಂಡ ಅಸಂಖ್ಯಾತರ ಪಟ್ಟಿಗೆ ಸೇರಿದ್ದಾರೆ.ಕನಕಪುರ ತಾಲೂಕಿನ ಗಡಿಭಾಗದಲ್ಲಿರುವ ಕಾವೇರಿ ಮತ್ತು ಅರ್ಕಾವತಿ ನದಿಗಳು ಸೇರುವ ಸಂಗಮ ರಾಜಧಾನಿ ನಿವಾಸಿಗಳ ಹಾಟ್‌ಫೇವರಿಟ್ ಸ್ಥಳವಾಗಿದೆ. ಬೆಂಗಳೂರಿನಿಂದ 94 ಕಿ.ಮೀ. ದೂರದಲ್ಲಿರುವ ಈ ಸ್ಥಳ ವಾರಪೂರ್ತಿ ಕೆಲಸದ ಜಂಜಾಟದಲ್ಲಿ ಕಳೆಯುವ ಮಂದಿ, ವಾರಾಂತ್ಯದಲ್ಲಿ ಒಂದು ದಿನದಲ್ಲಿ ಹೋಗಿ ಬರಬಹುದಾದ ಪ್ರವಾಸಿತಾಣವಾಗಿದ್ದು, ಕಾವೇರಿ ನದಿಯಲ್ಲಿ ಆಟವಾಡಿ, ತೆಪ್ಪದ ಮೂಲಕ ನದಿಯ ಮತ್ತೊಂದು ದಡಕ್ಕೆ ಹೋಗಿ ಅಲ್ಲಿಂದ ಕಾವೇರಿ ನದಿ ಬಂಡೆಗಳ ನಡುವೆ ಕಿರಿದಾಗಿ ಹರಿಯುವ ಮೇಕೆದಾಟು ನೋಡಿ ಬರುವುದು ಪ್ರವಾಸಿಗರಿಗೆ ಅತ್ಯಂತ ಸಂತಸದ ಕ್ಷಣವಾಗಿದೆ, ಈ ಕಾರಣಕ್ಕಾಗಿ ಬೆಂಗಳೂರಿಗರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ವಾರದ ದಿನಗಳಲ್ಲಿ ಇಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇದ್ದರೂ, ಶನಿವಾರ ಮತ್ತು ಭಾನುವಾರದಂತಹ ವಾರಾಂತ್ಯದ ದಿನಗಳಲ್ಲಿ ಪ್ರವಾಸಿಗರ ದಂಡು ಸಾವಿರಾರು ಸಂಖ್ಯೆಯಲ್ಲಿರುತ್ತದೆ. ಸಂಗಮ-ಮೇಕೆದಾಟು ಜೊತೆಗೆ ಚುಂಚಿಪಾಲ್ಸ್, ಗಾಳಿಬೋರೆ, ಮೊದಲಾದ ಸ್ಥಳಗಳನ್ನು ನೋಡಬಹುದಾದ ಕಾರಣ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ.ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ತಣ್ಣಗೆ ಹರಿಯುವ ಕಾವೇರಿ ನದಿ ಸಂಗಮದ ಬಳಿ ವಿಶಾಲವಾಗಿ ಹರಿಯುತ್ತದೆ. ಬಂಡೆಗಳ ಮಧ್ಯೆ ಹರಿಯುವ ನದಿ. ಇದಕ್ಕೆ ಹೊಂದಿಕೊಂಡಂತೆ ಇರುವ ಬೆಟ್ಟಗುಡ್ಡ, ಅರಣ್ಯ ಪ್ರದೇಶ ನೋಡುಗರ ಕಣ್ಮನ ಸೆಳೆಯುತ್ತದೆ. ನೋಡಲು ಎಷ್ಟು ಸೊಗಸಾಗಿ ಕಾಣುತ್ತದೋ ಅಷ್ಟೇ ಅಪಾಯಕಾರಿಯೂ ಆಗಿದೆ.
ಈ ನದಿ ಸುಮಾರು 500 ಮೀಟರ್‌ಗೂ ಹೆಚ್ಚು ವಿಸ್ತಾರವಾಗಿ ಸಂಗಮದ ಬಳಿ ಹರಿಯುತ್ತದೆ. ಈ ಜಾಗದಲ್ಲಿ ತಣ್ಣಗೆ ಹರಿಯುವ ನದಿ ಎಚ್ಚರ ತಪ್ಪಿದರೆ ಪ್ರವಾಸಿಗರ ಪ್ರಾಣವನ್ನು ಸದ್ದಿಲ್ಲದೆ ಕಸಿದು ಹೋಗುವಷ್ಟು ಅಪಾಯಕಾರಿ ಎನಿಸಿದೆ. ಸಂಗಮ ಪ್ರದೇಶದಲ್ಲಿ ಕಾವೇರಿ ನದಿಯಲ್ಲಿ ಅಲ್ಲಲ್ಲಿ, ಬಂಡೆಗಳ ಜೊತೆಗೆ ಆಳವಾದ ಸುಳಿ, ಗುಂಡಿ, ಹಳ್ಳಗಳು, ಕಾಲಿಟ್ಟರೆ ಜಾರುವ ನುಣುಪಾದ ಕಲ್ಲುಗಳಿದ್ದು, ಆಕಸ್ಮಾತ್ ಎಚ್ಚರ ತಪ್ಪಿದರೆ ನದಿಯ ಪಾಲಾಗ ಬೇಕಾಗುತ್ತದೆ.ಸಂಗಮದಲ್ಲಿ ನದಿಯ ಅಪಾಯಕಾರಿ ಸ್ಥಳವನ್ನು ಗುರುತಿಸಿರುವ ಅರಣ್ಯ ಇಲಾಖೆ ಅಲ್ಲಿಗೆ ಪ್ರವಾಸಿಗರು ಹೋಗಬಾರದು ಎಂದು ಹಗ್ಗಕಟ್ಟಿ ಗಡಿಯನ್ನು ಗುರುತಿಸಿದ್ದಾರೆ. ಇದರೊಂದಿಗೆ ಅರಣ್ಯ ಇಲಾಖೆ ವತಿಯಿಂದ ಸೂಚನಾ ಫಲಕವನ್ನು ಅಳವಡಿಸಲಾಗಿದೆ. ಆದರೂ, ನದಿಗಿಳಿಯುವ ಪ್ರವಾಸಿಗರು ಇವರ‍್ಯಾರ ಮಾತನ್ನು ಕೇಳದೆ ಮನಸೋಇಚ್ಛೆ ನದಿಯಲ್ಲಿ ಈಜಾಡಲು ಹೋಗಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ.
8 ವರ್ಷಗಳ ಹಿಂದೆ ವಿದೇಶಿ ಪ್ರವಾಸಿಗರು ಕಾವೇರಿ ನದಿಯಲ್ಲಿ ಸಿಲುಕಿ ಸಾವನ್ನಪ್ಪಿದಾಗ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಈ ಸ್ಥಳದಲ್ಲಿ ಹಲವಾರು ಸುರಕ್ಷತಾ ಕ್ರಮಗಳನ್ನು ಕೈಗೊಂಡಿತ್ತು. ಸಂಗಮ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸುವ ಜೊತೆಗೆ ಪ್ರವಾಸಿಗರು ಮದ್ಯವನ್ನು ತರುವುದಕ್ಕೂ ನಿಷೇಧಿಸಲಾಗಿತ್ತು. ಆದರೆ, ಸ್ಥಳೀಯರು ಇಲ್ಲಿ ಕಳ್ಳಮಾರ್ಗದಲ್ಲಿ ಮದ್ಯವನ್ನು ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರೊಂದಿಗೆ ಭಾನುವಾರ ಹಾಗೂ ರಜಾದಿನಗಳನ್ನು ಹೊರತು ಪಡಿಸಿದರೆ ಪ್ರವಾಸಿಗರ ಸುರಕ್ಷತೆಗೆ ಯಾವುದೇ ಕ್ರಮಗಳು ಇಲ್ಲವಾಗಿದೆ. ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡದಿರುವ ಕಾರಣ, ಪ್ರವಾಸಿಗರು ಎಲ್ಲಿ ಬೇಕಾದರಲ್ಲಿಗೆ ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಿದ್ದಾರೆ.ಪ್ರವಾಸಿಗರ ಜೀವದ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಒಂದಾಗಿ ಸಂಗಮದಲ್ಲಿ ಸಂಭವಿಸುತ್ತಿರುವ ಸಾವಿನ ಸಂಖ್ಯೆಯನ್ನು ತಡೆಯಬೇಕಿದೆ. ಕೇವಲ ವಾರಾಂತ್ಯ ಮಾತ್ರವಲ್ಲದೆ ವಾರದ ದಿನಗಳಲ್ಲಿ ಸಹ ಇಲ್ಲಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಅಪಾಯಕಾರಿ ಸ್ಥಳದಲ್ಲಿ ಜನತೆ ಇಳಿಯದಂತೆ ಕ್ರಮ ಕೈಗೊಳ್ಳಬೇಕಿದೆ.
ನದಿಯ ಸುಳಿಗಳಿಗೆ ಸಿಲುಕಿದರೆ ಮೇಲೇಳುವುದೇ ಅಸಾಧ್ಯಸಂಗಮದಲ್ಲಿ ಪ್ರವಾಸಿಗರು ಸಾಯುವುದಕ್ಕೆ ಮುಖ್ಯ ಕಾರಣ ನದಿಯಲ್ಲಿ ಯಾರಿಗೂ ತಿಳಿಯದಂತೆ ಇರುವ ಸುಳಿಗಳು. ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದಾಗ ಮರಳು ಹಾಗೂ ಬಂಡೆಗಳು ಕೊಚ್ಚಿ ಹೋಗಿ ಅಲ್ಲಲ್ಲಿ ಹಳ್ಳ, ಗುಂಡಿಗಳು ನಿರ್ಮಾಣಗೊಂಡಿರುತ್ತವೆ. ಈ ಜಾಗದಲ್ಲಿ ಸುಳಿಗಳು ನಿರ್ಮಾಣಗೊಂಡಿದ್ದು, ಕೆಲವೆಡೆ 10 ಅಡಿಗಳಿಗಿಂತ ಆಳವಾದ ಸುಳಿಗಳಿವೆ. ನದಿಯ ಒಳಗೆ ಇರುವ ಈ ಸುಳಿಗಳನ್ನು ಸ್ಥಳೀಯರು ಹೊರತು ಪಡಿಸಿದರೆ ಹೊರಗಿನವರು ಗುರುತಿಸುವುದು ಕಷ್ಟಸಾಧ್ಯ. ನದಿಗೆ ಇಳಿಯುವ ಪ್ರವಾಸಿಗರು ಆಕಸ್ಮಾತ್ ಸುಳಿಗೆ ಕಾಲಿರಿಸಿದರೆ ಮೇಲೆದ್ದು ಬರುವುದು ಅಸಾಧ್ಯ. ಒಂದು ವೇಳೆ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರೆ ಶವವನ್ನು ಹುಡುಕುವುದು ಕಷ್ಟ ಸಾಧ್ಯ. ಸೋಮವಾರ ಐವರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದಕ್ಕೆ ಸುಳಿಗೆ ಸಿಲುಕಿದ್ದೇ ಕಾರಣ.
ವಾರಾಂತ್ಯದಲ್ಲಿ ಹೆಚ್ಚು ಪ್ರವಾಸಿಗರು ಬರುವ ಕಾರಣ ಪೊಲೀಸ್ ಸಿಬ್ಬಂದಿ ನಿಯೋಜಿಸುತ್ತೇವೆ. ಈ ಸ್ಥಳದ ಸಂಪೂರ್ಣ ಜವಾಬ್ದಾರಿ ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆಗೆ ಸೇರಿದ್ದರೂ ನಾವು ಪ್ರಯಾಣಿಕರ ಸುರಕ್ಷತೆಗಾಗಿ ರಜಾದಿನಗಳಲ್ಲಿ ಸಿಬ್ಬಂದಿ ನಿಯೋಜಿಸುತ್ತೇವೆ. ವಾರದ ದಿನಗಳಲ್ಲಿ ನಿಯೋಜಿಸಲು ಸಿಬ್ಬಂದಿ ಕೊರತೆ ಇದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗಳ ಜೊತೆ ಚರ್ಚಿಸಿ ಪ್ರವಾಸಿಗರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು. ಸೂಚನಾ ಫಲಕಗಳನ್ನು, ನದಿ ದಾಟದಂತೆ ಹಗ್ಗವನ್ನು ಕಟ್ಟಲಾಗಿದೆ.- ಕೃಷ್ಣ ಲಮಾಣಿ, ಪೊಲೀಸ್ ವೃತ್ತ ನಿರೀಕ್ಷಕ, ಕನಕಪುರ ವೃತ್ತ
ಪೊಲೀಸರ ಕಟ್ಟುನಿಟ್ಟಿನ ಕ್ರಮ ಅಗತ್ಯ:ಸಂಗಮದಲ್ಲಿ ಅಪಾಯದ ಸ್ಥಳಗಳು ಎಂದು ನಾಮ ಫಲಕ ಅಳವಡಿಸಿ ಹಗ್ಗ ಕಟ್ಟಿದ್ದರೂ ಕೇಳದೇ ಹೋಗಿ ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ. ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಅಂತಹ ಸ್ಥಳಗಳನ್ನು ದೂರದಿಂದಲೇ ನೋಡಿ ಹೋಗುವ ವ್ಯವಸ್ಥೆ ಮಾಡಬೇಕಿದೆ. ಪ್ರವಾಸಿಗರು ಹುಚ್ಚಾಟ ಆಡದೇ ನೀರಿಗೆ ಇಳಿಯದೇ ಸ್ಥಳಗಳನ್ನು ನೋಡಿ ಹೋದರೆ ಯಾವುದೇ ಸಮಸ್ಯೆ ಇರಲ್ಲ. ಸಂಗಮದ ಬಳಿ ಸಿಬ್ಬಂದಿ ನಿಯೋಜನೆ ಮಾಡಿ, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈ ಗೊಂಡರೆ ಮಾತ್ರ ಅಪಾಯಗಳನ್ನು ತಡೆಯಬಹುದಾಗಿದೆ ಎನ್ನುತ್ತಾರೆ ಸ್ಥಳೀಯರು.