ಶಿವಾನಂದ ಗೊಂಬಿ
ಪ್ರಯಾಗರಾಜ್:12 ವರ್ಷಕ್ಕೊಮ್ಮೆ ನಡೆಯುವ, ಅತಿ ಹೆಚ್ಚು ಸಾಧು ಸಂತರು, ಸನ್ಯಾಸಿಗಳು, ಅಘೋರಿಗಳು ಸೇರುವ "ಮಹಾಕುಂಭ ಮೇಳ- 2025 "ಕ್ಕೆ ಗಂಗಾ, ಯಮುನಾ ಮತ್ತು ಸರಸ್ವತಿ ತ್ರಿವೇಣಿ ಸಂಗಮ ಸ್ಥಳವಾದ ಪ್ರಯಾಗರಾಜ್ ಸಜ್ಜಾಗಿದೆ.
ಜನವರಿ 13ರಿಂದ ಪ್ರಾರಂಭವಾಗಿ ಫೆಬ್ರವರಿ 26ರ ವರೆಗೆ 45 ದಿನಗಳ ಕಾಲ ನಡೆಯಲಿರುವ ಮೇಳದ ತಯಾರಿಗೆ ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಉತ್ತರಪ್ರದೇಶ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ಆಗಮಿಸುವ ಅಪಾರ ಸಂಖ್ಯೆಯ ಭಕ್ತರಿಗೆ ಮೂಲಸೌಕರ್ಯ ಮತ್ತು ಸೇವೆ ನೀಡಲು ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಡಿ. 13ರಂದು ಚಾಲನೆ ನೀಡಲಿದ್ದಾರೆ.ಉತ್ತರ ಪ್ರದೇಶದ ಮುಖ್ಯಮಂತ್ರಿ, ಪ್ರಖರ ಹಿಂದುತ್ವವಾದಿ ಯೋಗಿ ಆದಿತ್ಯನಾಥ ನೇತೃತ್ವದಲ್ಲಿ ನಡೆಯಲಿರುವ ಈ ಮಹಾಕುಂಭ ಮೇಳ ಈ ಸಲ ಮಹತ್ವ ಪಡೆದಿದೆ. ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. 45 ದಿನಗಳ ಈ ಒಂದು ಮೇಳದಲ್ಲಿ ದೇಶದ ಮೂಲೆ ಮೂಲೆಗಳಿಂದ ಹಾಗೂ ವಿದೇಶದಿಂದಲೂ ಅಂದಾಜು 15 ಕೋಟಿಗೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ಅಂದಾಜಿದೆ.
13 ಸಾವಿರ ರೈಲು:ರೈಲ್ವೆ ಇಲಾಖೆ ಪ್ರಯಾಗರಾಜ್ ಕುಂಭಮೇಳಕ್ಕೆ ಬರುವವರ ಅನುಕೂಲಕ್ಕೆ ಎಲ್ಲೆಡೆಯಿಂದ ರೈಲು ಸಂಪರ್ಕದ ವ್ಯವಸ್ಥೆ ಮಾಡಿದೆ. ಉತ್ತರ ಮಧ್ಯ ರೈಲ್ವೆ ಈ 45ರಿಂದ 50 ದಿನ ಒಟ್ಟು 13 ಸಾವಿರ ರೈಲುಗಳನ್ನು ಓಡಿಸಲಿದೆ. ಇದರಲ್ಲಿ ದಿನನಿತ್ಯದ ಕಾರ್ಯಾಚರಣೆಯಂತೆ 10 ಸಾವಿರ ರೈಲುಗಳು ಓಡಲಿದ್ದರೆ, 3 ಸಾವಿರಕ್ಕೂ ಅಧಿಕ ರೈಲುಗಳು ಮಹಾಕುಂಭಕ್ಕಾಗಿ ವಿಶೇಷ ರೈಲುಗಳು ಓಡಿಸಲು ನಿರ್ಧರಿಸಿದೆ. 12 ವರ್ಷಕ್ಕೊಮ್ಮೆ ನಡೆಯುವ ಈ ಮಹಾಕುಂಭಮೇಳ ಇಲ್ಲಿ 2013ರಲ್ಲಿ ನಡೆದಿತ್ತು. ಈ ಬಾರಿ ನೆರೆಯ ವಾರಣಾಸಿ (ಕಾಶಿ) ಮತ್ತು ಅಯೋಧ್ಯೆ ದೃಷ್ಟಿಯಲ್ಲಿಟ್ಟುಕೊಂಡು ಉತ್ತರ ಪ್ರದೇಶ ಸರಕಾರ ಧಾರ್ಮಿಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಮುಂದಾಗಿದೆ. ಆ ಮೂಲಕ ಆರ್ಥಿಕತೆ ಸುಧಾರಣೆ ಉದ್ದೇಶ ಕೂಡ ಹೊಂದಿದೆ.
ಇವೆರೆಡು ಕ್ಷೇತ್ರಗಳು ಪ್ರಯಾಗರಾಜ್‌ನಿಂದ ಕ್ರಮವಾಗಿ 120 ಮತ್ತು 150 ಕಿಮೀ ದೂರದಲ್ಲಿವೆ. ಮೇಳಕ್ಕೆ ಬಂದವರು ಈ ಕ್ಷೇತ್ರಗಳಿಗೂ ತಪ್ಪದೇ ಭೇಟಿ ನೀಡುತ್ತಾರೆ ಎಂಬ ದೃಢವಿಶ್ವಾಸ ಹಾಗೂ ಭೇಟಿ ಕೊಡಿಸುವ ಉದ್ದೇಶ ಸರಕಾರದ್ದಾಗಿದೆ. ಜ. 13ರ ಮಕರ ಸಂಕ್ರಾಂತಿ ದಿದಂದು ಪವಿತ್ರ ಸಂಗಮದಲ್ಲಿ ಮುಳುಗಿ ಏಳುವ ಸಂಕಲ್ಪದೊಂದಿಗೆ ಬರುವ ಜನ ಮಹಾಶಿವರಾತ್ರಿ ವರೆಗೂ (ಫೆಬ್ರವರಿ- 26) ನಡೆಯುವ ಮೇಳ ಮುಗಿವವರೆಗೆ ಸುತ್ತಲಿನ ಕ್ಷೇತ್ರಗಳಿಗೂ ಭೇಟಿ ನೀಡುತ್ತಾರೆ.ಸ್ನಾನ ಪರ್ವ ಎಂಬ ಶೀರ್ಷಿಕೆಯಡಿ ಜನರನ್ನು ಆಹ್ವಾನಿಸುವ ಕೆಲಸವೂ ಭರದಿಂದ ಸಾಗಿದೆ. ಇದಕ್ಕೆ ನಗರದಾದ್ಯಂತ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಪ್ರಮುಖ ವೃತ್ತಗಳಲ್ಲಿ ಹಾಕಿರುವ ಡಿಜಿಟಲ್ ಸೈನೇಜ್‌ಗಳೇ ಸಾಕ್ಷಿಯಾಗಿವೆ. ಮಹಾಕುಂಭ ಮೇಳ ಇಲ್ಲಿ ಮುಂಚೆಯಿಂದಲೂ ಅದ್ಧೂರಿಯಾಗಿ ನಡೆಯುತ್ತ ಬಂದಿದೆಯಾದರೂ ಯೋಗಿ ಆದಿತ್ಯನಾಥರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದಕ್ಕೆ ಹೆಚ್ಚಿನ ಪ್ರಚಾರ ಮತ್ತು ಅನುದಾನದ ಬಲ ಸಿಕ್ಕಿದೆ ಎಂದು ಸ್ಥಳೀಯ ನಾಗರಿಕ ಅನೂಜ್ ತಿಳಿಸುತ್ತಾರೆ.
ಈ ಬಾರಿಯ ಮಹಾಕುಂಭಮೇಳವನ್ನು ಜಾಗತಿಕ ಇವೆಂಟ್ ಮಾದರಿ ಮಾಡಲು ಹೊರಟಿರುವ ಯೋಗಿ ಅವರು ಕಳೆದ 15 ದಿನದಲ್ಲಿ ಸ್ವತಃ ಮೂರು ಬಾರಿ ಭೇಟಿ ನೀಡಿ ಎಲ್ಲ ಸಿದ್ಧತೆ ಪರಿಶೀಲಿಸಿದ್ದಾರೆ. ಯಾವುದೇ ಲೋಪವಾಗದಂತೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಲು ಕಟ್ಟಪ್ಪಣೆ ಹೊರಡಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಚಳಿ ವಿಪರೀತವಾಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಕುಂಭಮೇಳದ ಸಿದ್ಧತೆ ಸಂಘಟಕರ ಬೆವರು ಸುರಿಯುತ್ತಿದೆ.ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಡಿ. 13ರಂದು ಪ್ರಯಾಗರಾಜದ ಸಂಗಮನಗರಿ ಸ್ಥಳಕ್ಕೆ ಭೇಟಿ ನೀಡುತ್ತಿರುವುದರಿಂದ ಈ ಬಾರಿ ಮೇಳದ ಮಹತ್ವ ಹೆಚ್ಚಿಸಿದೆ.
ಡ್ರೋಣ್ ನೆರವು:ಮೇಳದಲ್ಲಿ ಸ್ನಾನಕ್ಕೆ ಬರುವವರಿಗೆ ತೊಂದರೆಯಾದರೆ ಸ್ನಾನದ ಸುತ್ತ 300 ಮೀಟರ್‌ನಲ್ಲಿ ಡ್ರೋಣ್ ಕ್ಯಾಮೆರಾ ಹಾರಾಟ ನಡೆಸಲಿದೆ. ಇದರ ಸಹಾಯದಿಂದ ಯಾರಾದರೂ ಮುಳುಗಿದರೆ ಪತ್ತೆ ಹಚ್ಚಿ ಪಾರು ಮಾಡಲು ಅನುಕೂಲವಾಗುತ್ತದೆ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಪ್ಲಾಸ್ಟಿಕ್ ಮುಕ್ತ ಮಹಾಮೇಳ:ದೇಶದ ಅತಿ ದೊಡ್ಡ ಧಾರ್ಮಿಕ ಹಬ್ಬವೆನಿಸಿರುವ ಮಹಾಕುಂಭವನ್ನು ಪ್ಲಾಸ್ಟಿಕ್ ಮುಕ್ತ ಹಾಗೂ ಪರಿಸರ ಸ್ನೇಹಿ ಮಹಾಕುಂಭ ಮಾಡಬೇಕೆನ್ನುವುದು ಸರ್ಕಾರದ ಗುರಿ. ಇದಕ್ಕಾಗಿ ಪ್ಲಾಸ್ಟಿಕ್ ನಿಷೇಧ ಮಾಡಿದೆ. ಯಾವ ವ್ಯಾಪಾರಿಯೂ ಪ್ಲಾಸ್ಟಿಕ್ ಬಳಸಬಾರದೆಂದು ಕಟ್ಟುನಿಟ್ಟಿನ ಸೂಚನೆಯನ್ನು ಸರ್ಕಾರ ನೀಡಿದೆ. ಜತೆಗೆ ಸಾವಿರಾರು ಸಂಖ್ಯೆಯಲ್ಲಿ ಸ್ವಯಂ ಸೇವಕರು ಕೆಲಸ ಮಾಡಲಿದ್ದಾರೆ. ಪ್ರಯಾಗರಾಜದ ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಎಲ್ಲ ಮನೆಗಳಿಂದಲೂ ನಾಗರಿಕರು ಸ್ವಯಂ ಆಗಿ ಬಂದು ಮಹಾಕುಂಭಕ್ಕೆ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಇಡೀ ಪ್ರಯಾಗರಾಜ್ ದಲ್ಲಿ ಈಗಿನಿಂದಲೇ ಧಾರ್ಮಿಕ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.ಮಹಾಕುಂಭಮೇಳದಿಂದ ಸ್ಥಳೀಯರಿಗೆ ಆದಾಯ ಬರುತ್ತದೆ. ಸಂಗಮ ತಟದಲ್ಲಿ ಆಹಾರ ಸೇರಿದಂತೆ ನಾನಾ ಮಳಿಗೆಗಳನ್ನು ಹಾಕಲು ಅವಕಾಶ ನೀಡಿರುವುದರಿಂದ ಮಾರಾಟಕ್ಕೆ ಅನುಕೂಲವಾಗುತ್ತದೆ. ಮೇಳಕ್ಕೆ ಬರುವ ದೇಶ, ವಿದೇಶಗಳಿಂದ ಬರುವ ಜನರು ಖರೀದಿಯಿಂದ ಸ್ಥಳೀಯ ಉತ್ಪನ್ನಗಳಿಗೆ ಬೆಲೆ ಸಿಗುತ್ತದೆ ಎಂದು ವ್ಯಾಪಾರಿ ಮಹೇಂದ್ರ ಶರ್ಮಾ ಹೇಳಿದರು.ಪ್ರಯಾಗರಾಜನಲ್ಲಿಂದು ಪ್ರಧಾನಿ ಪುಣ್ಯಸ್ನಾನ
ಪ್ರಧಾನಿ ನರೇಂದ್ರ ಮೋದಿ ಡಿ. 13ರಂದು ಉತ್ತರ ಪ್ರದೇಶದ ಪ್ರಯಾಗರಾಜ್ ಗೆ ಭೇಟಿ ನೀಡಲಿದ್ದಾರೆ. ಸಂಗಮ ಸ್ಥಳದಲ್ಲಿ ಪುಣ್ಯಸ್ನಾನ ಮಾಡಿ ಪೂಜೆ ಸಲ್ಲಿಸಲಿದ್ದಾರೆ. ರೈಲ್ವೆ ಇಲಾಖೆಯ ₹ 1609 ಕೋಟಿ ಸೇರಿದಂತೆ ಒಟ್ಟು ₹ 5500 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಮಹಾಕುಂಭ 2025ರ ವಿವಿಧ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಇದು 10 ರೈಲ್ವೆ ಮೇಲ್ಸೇತುವೆ, ಶಾಶ್ವತ ಘಾಟ್‌ಗಳು ಮತ್ತು ನದಿಯ ಮುಂಭಾಗದ ರಸ್ತೆಗಳಂತಹ ವಿವಿಧ ರೈಲು ಮತ್ತು ರಸ್ತೆ ಯೋಜನೆಗಳನ್ನು ಲೋಕಾರ್ಪಣೆ ನೀಡಲಿದ್ದಾರೆ.ಗಂಗಾ ನದಿಗೆ ಹೋಗುವ ಸಣ್ಣ ಚರಂಡಿಗಳನ್ನು ನಿಲ್ಲಿಸಲು, ಸಂಸ್ಕರಿಸುವ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಇದರಿಂದ ಗಂಗಾ ನದಿಗೆ ಶುದ್ಧೀಕರಿಸದ ನೀರು ಹರಿದು ಹೋಗುವ ಸಂಪೂರ್ಣವಾಗಿ ನಿಲ್ಲುತ್ತದೆ. ಕುಡಿಯುವ ನೀರು ಮತ್ತು ವಿದ್ಯುತ್‌ಗೆ ಸಂಬಂಧಿಸಿದ ವಿವಿಧ ಮೂಲಸೌಕರ್ಯ ಯೋಜನೆಗಳನ್ನು ಅವರು ಉದ್ಘಾಟಿಸಲಿದ್ದಾರೆ. ದೇವಾಲಯದ ಪ್ರಮುಖ ಕಾರಿಡಾರ್‌ಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಇವುಗಳಲ್ಲಿ ಭಾರದ್ವಾಜ್ ಆಶ್ರಮ ಕಾರಿಡಾರ್, ಶೃಂಗವೇರಪುರ ಧಾಮ್ ಕಾರಿಡಾರ್, ಅಕ್ಷಯವತ್ ಕಾರಿಡಾರ್, ಹನುಮಾನ್ ಟೆಂಪಲ್ ಕಾರಿಡಾರ್ ಇತ್ಯಾದಿ ಸೇರಿವೆ. ಈ ಯೋಜನೆಗಳು ಭಕ್ತರ ಪ್ರವೇಶವನ್ನು ಸುಲಭಗೊಳಿಸುತ್ತದೆ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲಿವೆ.