- ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಕೆ
ಸಂಸದ ಸಂಗಣ್ಣ ಕರಡಿ ಕಟ್ಟಾ ಬೆಂಬಲಿಗ ಹಾಗೂ ಕೊಪ್ಪಳ ನಗರಸಭೆ 11ನೇ ವಾರ್ಡಿನ ಬಿಜೆಪಿ ಸದಸ್ಯ ರಾಜಶೇಖರ ಆಡೂರು ಶನಿವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಕಾಂಗ್ರೆಸ್ ಪಕ್ಷದ ಶಾಲು ಹಾಕುವ ಮೂಲಕ ಸ್ವಾಗತಿಸಿದರು.ಬಳಿಕ ಮಾತನಾಡಿದ ರಾಜಶೇಖರ ಆಡೂರು ಅವರು, ನಾನು ಕಳೆದ ಆರು ತಿಂಗಳ ಹಿಂದೆಯೇ ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿದ್ದೆ. ಸಂಗಣ್ಣರಿಗೆ ಟಿಕೆಟ್ ತಪ್ಪಿದ್ದರಿಂದ ನಾನು ಬಿಜೆಪಿ ತೊರೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಕರಡಿ ಕಾಂಗ್ರೆಸ್‌ಗೆ ಬರುತ್ತಾರೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ, ಅವರು ನನ್ನ ಜೊತೆಗೆ ಈ ಕುರಿತು ಮಾತನಾಡಿಯೂ ಇಲ್ಲ. ನಾನು ಅವರ ಬೆಂಬಲಿಗ ಮತ್ತು ಬಿಜೆಪಿ ಸದಸ್ಯನೂ ಆಗಿದ್ದೆ. ಶಾಂತಿ ಮತ್ತು ಸೌಹಾರ್ದ ಬದುಕಿಗೆ, ಸರ್ವ ಜನಾಂಗದ ಶಾಂತಿಯ ತೋಟ ಕಾಂಗ್ರೆಸ್ ಪಕ್ಷವೇ ಸೂಕ್ತ ಎಂದು ನಾನು ಇಲ್ಲಿ ಸೇರಿದ್ದೇನೆ ಎಂದರು.
ಕರಡಿಗೂ ಆಹ್ವಾನ; ರಾಘವೇಂದ್ರ ಹಿಟ್ನಾಳ:
ನಗರದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರುವುದು, ಬಿಡುವುದು ಅವರಿಗೆ ಬಿಟ್ಟಿರುವ ವಿಚಾರ ಎಂದರು.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅಸಮಾಧಾನಗೊಂಡಿದ್ದಾರೆ ಎನ್ನುವುದು ಸರಿಯಲ್ಲ, ಗಂಗಾವತಿಯಲ್ಲಿ ಎರಡು-ಮೂರು ಗುಂಪುಗಳು ಇರುವುದರಿಂದ ಸಮಸ್ಯೆಯಾಗಿದೆ. ಅದೆಲ್ಲವನ್ನು ಪಕ್ಷದ ಹೈಕಮಾಂಡ್ ಶೀಘ್ರದಲ್ಲಿಯೇ ಸರಿಪಡಿಸಲಿದೆ ಎಂದರು.
ಇಕ್ಬಾಲ್ ಅನ್ಸಾರಿ ಈಗಾಗಲೇ ಸಿಎಂ ಅವರನ್ನು ಸಹ ಭೇಟಿಯಾಗಿದ್ದಾರೆ. ಅವರ ಜೊತೆಗೆ ಭಿನ್ನಾಭಿಪ್ರಾಯ ಇದ್ದ ನಾಯಕರು ಸಹ ಜೊತೆಯಾಗಿಯೇ ಭೇಟಿಯಾಗಿದ್ದಾರೆ, ಎಲ್ಲವೂ ಸುಖಾಂತ್ಯವಾಗಲಿದೆ ಎಂದರು.ಕುಷ್ಟಗಿಯ ಹಸನಸಾಬ ದೋಟಿಹಾಳರನ್ನು ಕಾಡಾ ಅಧ್ಯಕ್ಷರಾಗಿ ನೇಮಕ ಮಾಡಿರುವುದು ಮತ್ತು ಇಕ್ಬಾಲ್ ಅನ್ಸಾರಿ ಅಸಮಾಧಾನಗೊಂಡಿರುವುದಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.
ವನಬಳ್ಳಾರಿಯಲ್ಲಿ ಸಭೆ ಮಾಡಿದ್ದನ್ನು ಬೇರೆ ಪಕ್ಷದವರು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಇದೆಲ್ಲವೂ ಬಗೆಹರಿಯಲಿದೆ ಎಂದರು.ಸಿಎಂ ಸಿದ್ದರಾಮಯ್ಯ ಅವರ ಬಳಿ ನಾನು ಇರುವಾಗಲೇ ಗಂಗಾವತಿ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಆಗಮಿಸಿದ್ದರು. ರಾಯಚೂರಿನವರ ಜೊತೆಯಲ್ಲಿ ಬಂದಿದ್ದರು. ನಾನು ಅವರನ್ನು ಕರೆದುಕೊಂಡು ಹೋಗಿದ್ದೇನೆ ಎಂದು ತಪ್ಪಾಗಿ ಹೇಳಲಾಗುತ್ತದೆ ಎಂದರು.