ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ತಾಲೂಕು ಆಡಳಿತಸೌಧದ ಒಳಾಂಗಣದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ವಿಶ್ವಮಾನವ ಕುವೆಂಪು ದಿನ ಮತ್ತು ಸರ್ಕಾರಿ ನೌಕರರ ಸಂಘ ಹೊರತಂದಿರುವ ಪ್ರಸಕ್ತ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
೧೦೫ ವರ್ಷಗಳ ಇತಿಹಾಸ ಹೊಂದಿರುವ ಸರ್ಕಾರಿ ನೌಕರರ ಸಂಘವು ದೇಶಾದ್ಯಂತ ಮಾದರಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ನೌಕರರ ಹಿತಕಾಯುವ ಕೆಲಸ ಮಾಡುತ್ತಿದೆ. ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರ ನೇತೃತ್ವದಲ್ಲಿ ಬಲಾಢ್ಯವಾಗಿರುವ ನಮ್ಮ ಸಂಘ ಮಾದರಿಯಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಒಂದು ವರ್ಷದ ಅವಧಿಯಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಹತ್ತಾರು ಬಗೆಯ ಕ್ರಿಯಾಶೀಲ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲ ಸರ್ಕಾರಿ ನೌಕರರು ಒತ್ತಡ ರಹಿತವಾಗಿ ಕೆಲಸ ಮಾಡಬೇಕೆಂಬುದೇ ಸಂಘದ ಮುಖ್ಯ ಉದ್ದೇಶವಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮಾತನಾಡಿ, ಕುವೆಂಪು ಅವರ ಸಾಹಿತ್ಯ ಮತ್ತು ಆದರ್ಶ ಜೀವನವನ್ನು ಪ್ರತಿಯೊಬ್ಬರೂ ಅರ್ಥೈಸಿಕೊಂಡರೆ ದ್ವೇಷ, ಅಸೂಯೆ ಬಿಟ್ಟು ಸುಂದರವಾದ ಬದುಕು ನಡೆಸಬಹುದು. ಮನುಷ್ಯ ಹುಟ್ಟಿದ ನಂತರ ದೇಶ, ರಾಜ್ಯ,ಜಾತಿ ಧರ್ಮ ಎಲ್ಲವನ್ನೂ ತಂದಿಟ್ಟು ಸಂಕುಚಿತಗೊಳಿಸಲಾಗುತ್ತಿದೆ. ಕುವೆಂಪು ಅವರ ಆದರ್ಶ, ತತ್ವಗಳನ್ನು ಪಾಲನೆ ಮಾಡಿದರೆ ಭವ್ಯ ಭಾರತ ಮತ್ತು ರಾಮರಾಜ್ಯ ನಿರ್ಮಾಣ ಮಾಡಬಹುದು ಎಂದರು.
ತಹಸೀಲ್ದಾರ್ ಜಿ.ಆದರ್ಶ ಮಾತನಾಡಿ, ಸರ್ಕಾರಿ ನೌಕರರು ಕೆಲಸದ ಒತ್ತಡದಲ್ಲಿ ತಮ್ಮ ಆರೋಗ್ಯ ಮತ್ತು ಕುಟುಂಬದ ಕಡೆಗೂ ಗಮನಹರಿಸಬೇಕು. ಕೆಲಸದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಸರ್ಕಾರಿ ನೌಕರರಿಗೂ ಕೂಡ ಅನೇಕ ಸಮಸ್ಯೆ, ಕುಂದು- ಕೊರತೆಗಳು ಎದುರಾಗುತ್ತವೆ. ತಾಲೂಕು ಸರ್ಕಾರಿ ನೌಕರರ ಸಂಘವು ನೌಕರರ ಹಿತಕಾಯುವ ಜೊತೆಗೆ ಹಲವು ಬಗೆಯ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.