ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಐಕನಹಳ್ಳಿ ಗ್ರಾಪಂ ಕಚೇರಿ ಆವರಣದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದ ಮೇಲ್ಭಾಗದಲ್ಲಿ ನಿರ್ಮಿಸಿರುವ ಸಭಾಂಗಣ ಕಟ್ಟಡಗಳನ್ನು ಶಾಸಕ ಎಚ್.ಟಿ.ಮಂಜು ಲೋಕಾರ್ಪಣೆ ಮಾಡಿದರು.ನಂತರ ಮಾತನಾಡಿದ ಅವರು, ಜನರ ಸಹಭಾಗಿತ್ವವಿಲ್ಲದೆ ಅಭಿವೃದ್ಧಿ ಅಸಾಧ್ಯ. ಕೇಂದ್ರ ಸರ್ಕಾರ ಮ- ನರೇಗಾ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಾಕಷ್ಟು ಹಣ ನೀಡುತ್ತಿದೆ. ಗ್ರಾಮೀಣ ಭಾಗದ ಜನರು ಇದರ ಲಾಭ ಪಡೆದುಕೊಳ್ಳಬೇಕು ಎಂದರು.
ಐಕನಹಳ್ಳಿ ಗ್ರಾಪಂ ವ್ಯಾಪ್ತಿಯ ಅಂಕನಹಳ್ಳಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಎನ್.ಆರ್.ಎಂ.ಎಲ್ ಯೋಜನೆಯಡಿ ಸಂಜೀವಿನಿ ಶೆಡ್ ನಿರ್ಮಿಸಲಾಗಿದೆ. ಜಿಲ್ಲೆಯಲ್ಲಿ ಕೇವಲ ನಾಲ್ಕು ಗ್ರಾಪಂ ವ್ಯಾಪ್ತಿಯಲ್ಲಿ ಮಾತ್ರ ಸಂಜೀವಿನಿ ಶೆಡ್ ನಿರ್ಮಿಸಲಾಗಿದೆ. ಶೆಡ್ ನಿರ್ಮಿಸಲು ಸೂಕ್ತ ಜಾಗವನ್ನು ಕೃಷ್ಣೇಗೌಡ ಮತ್ತು ಅಣ್ಣೇಗೌಡ ಕುಟುಂಬಸ್ಥರು ದಾನವಾಗಿ ನೀಡಿ ಗ್ರಾಮಾಭಿವೃದ್ಧಿಗೆ ಕೈಜೋಡಿಸಿದ್ದಾರೆ ಎಂದರು.ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುವ ಉತ್ಸಾಹ ನನಗಿದೆ. ಆದರೆ, ಸರ್ಕಾರ ನನ್ನ ನಿರೀಕ್ಷೆಗೆ ಪೂರಕವಾಗಿ ಅನುದಾನ ನೀಡುತ್ತಿಲ್ಲ. ಇದೀಗ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ10 ಕೋಟಿ ರು. ಅನುದಾನ ನೀಡುತ್ತಿದೆ. ಇದು ಸ್ವಾಗಾತಾರ್ಹ ಎಂದು ಹೇಳಿದರು.
ಈ ಅನುದಾನವನ್ನು ಅಗತ್ಯವಿರುವ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ತಲಾ 10 ಲಕ್ಷ ರು. ಗಳಂತೆ ಬಳಕೆ ಮಾಡಲು ನಿರ್ಧರಿಸಿದ್ದೇನೆ. ಅನುದಾನ ಬರುತ್ತಿಲ್ಲ ಎಂದು ಸುಮ್ಮನೆ ಕೂರುವ ವ್ಯಕ್ತಿ ನಾನಲ್ಲ. ಅಧಿಕಾರಿಗಳ ಜೊತೆಗೂಡಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುತ್ತಿರುವುದಾಗಿ ತಿಳಿಸಿದರು.ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಚೋಳೇನಹಳ್ಳಿ ಪುಟ್ಟಸ್ವಾಮೀಗೌಡ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಹೊಡೆತದಿಂದ ಅಭಿವೃದ್ಧಿ ಕೆಲಸಗಳು ಸೊರಗುತ್ತಿವೆ. ಮ- ನರೇಗಾ ಯೋಜನೆಯಡಿ ಸುಮಾರು 40ಕ್ಕೂ ಅಧಿಕ ಕಾಮಗಾರಿಗಳನ್ನು ಕೈಗೊಳ್ಳಬಹುದು. ಗ್ರಾಪಂಗಳು ಸ್ಥಳೀಯ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಒತ್ತು ನೀಡಬೇಕೆಂದರು.
ಇದೇ ವೇಳೆ ಗ್ರಾಪಂ ವತಿಯಿಂದ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳ ಆಸ್ತಿಯನ್ನು ಇ- ಸ್ವತ್ತು ಮಾಡಿ ನೋಂದಣಿ ದಾಖಲೆಗಳನ್ನು ನೀಡಲಾಯಿತು.ಗ್ರಾಪಂ ಅಧ್ಯಕ್ಷೆ ಸುಧಾ ದೇವರಾಜೇಗೌಡ, ಉಪಾಧ್ಯಕ್ಷ ಪ್ರಸನ್ನ, ತಾಪಂ ಇಒ ಕೆ.ಸುಷ್ಮ, ಜೆಡಿಎಸ್ ಯುವ ಮುಖಂಡ ಬಿ.ಎಂ.ಕಿರಣ್, ಗ್ರಾಪಂ ಸದಸ್ಯರಾದ ಭಾಗ್ಯಮ್ಮ, ಈ. ರಾಜು, ಎನ್.ಕುಮಾರ್, ದೇವರಾಜು, ಪಲ್ಲವಿ, ಅಂಬುಜ, ಶಂಕರ್, ನಾಗಮಣಿ, ಸುಮಿತ್ರ, ಭಾರತಿ, ತಾಪಂ ಮಾಜಿ ಅಧ್ಯಕ್ಷ ರಾಮೇಗೌಡ, ಮಾಜಿ ಸದಸ್ಯ ಕೃಷ್ಣೇಗೌಡ, ಗ್ರಾಪಂ ಮಾಜಿ ಅಧ್ಯಕ್ಷರಾದ ಎ.ಎಸ್.ಮಂಜೇಗೌಡ, ಎ.ಎಸ್.ನಂಜುಂಡೇಗೌಡ, ಮುಖಂಡರಾದ ಐ.ಡಿ.ಉದಯಶಂಕರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಜಯ್, ಸಿಡಿಪಿಒ ಅರುಣ್ ಕುಮಾರ್, ಆರ್.ಐ.ನರೇಂದ್ರ ಸೇರಿ ಹಲವರು ಉಪಸ್ಥಿತರಿದ್ದರು.