ಸಾವಿರಾರು ಹನುಮ ಮಾಲಾಧಾರಿಗಳಿಂದ ಸಂಕೀರ್ತನ ಯಾತ್ರೆ ಸಂಭ್ರಮ

KannadaprabhaNewsNetwork |  
Published : Dec 16, 2024, 12:47 AM IST
15ಕೆಎಂಎನ್ ಡಿ11 | Kannada Prabha

ಸಾರಾಂಶ

ಹನುಮ ಸಂಕೀರ್ತನ ಯಾತ್ರೆ ಹಿನ್ನೆಲೆಯಲ್ಲಿ ಐತಿಹಾಸಿಕ ಕೋಟೆ ನಗರಿ ಕೇಸರಿಮಯವಾಗಿತ್ತು. ಎಲ್ಲಾ ಪ್ರಮುಖ ರಸ್ತೆಗಳು, ವೃತ್ತಗಳು ಕೇಸರಿ ಬಾವುಟ, ಬಂಟಿಂಗ್ಸ್ ಗಳಿಂದ ರಾರಾಜಿಸುತ್ತಿದ್ದವು. ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಹನುಮ ಮಾಲಾಧಾರಿಗಳು, ಹಿಂದೂ ಕಾರ್ಯಕರ್ತರು ಸುಮಾರು 4 ಕಿಮೀ ವರೆಗೆ ಮೆರವಣಿಗೆ ನಡೆಸಿದರು.

ಕಹಳೆ ಊದಿ ಸಂಕೀರ್ತನಾ ಯಾತ್ರೆಗೆ ಹಿಂದೂ ಮುಖಂಡ ಮನೋಹರ್ ಮಠದ್ ಚಾಲನೆ

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಸಾವಿರಾರು ಹನುಮ ಮಾಲಾಧಾರಿಗಳು ಹಿಂದೂ ಸಂಘಟನೆಗಳ ಕಾರ್ಯಕರ್ತರೊಂದಿಗೆ ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಕೀರ್ತನ ಯಾತ್ರೆ ಸಡಗರ ಸಂಭ್ರಮದಿಂದ ನಡೆಯಿತು.

ಪಟ್ಟಣದ ಹೊರವಲಯದ ಗಂಜಾಂನ ಕಾವೇರಿ ನದಿಯ ನಿಮಿಷಾಂಭ ದೇಗುಲದ ಬಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಹಿಂದೂ ಮುಖಂಡ ಮನೋಹರ್ ಮಠದ್ ವಿಶೇಷ ಪೂಜೆ ಸಲ್ಲಿಸಿ, ಆಂಜನೇಯಸ್ವಾಮಿಗೆ ಪುಷ್ಪಾರ್ಚನೆ ಮಾಡಿದರು. ನಂತರ ಕಹಳೆ ಊದುವ ಮೂಲಕ ಸಂಕೀರ್ತನಾ ಯಾತ್ರೆಗೆ ಚಾಲನೆ ನೀಡಿದರು.

ಹನುಮ ಸಂಕೀರ್ತನ ಯಾತ್ರೆ ಹಿನ್ನೆಲೆಯಲ್ಲಿ ಐತಿಹಾಸಿಕ ಕೋಟೆ ನಗರಿ ಕೇಸರಿಮಯವಾಗಿತ್ತು. ಎಲ್ಲಾ ಪ್ರಮುಖ ರಸ್ತೆಗಳು, ವೃತ್ತಗಳು ಕೇಸರಿ ಬಾವುಟ, ಬಂಟಿಂಗ್ಸ್ ಗಳಿಂದ ರಾರಾಜಿಸುತ್ತಿದ್ದವು. ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಹನುಮ ಮಾಲಾಧಾರಿಗಳು, ಹಿಂದೂ ಕಾರ್ಯಕರ್ತರು ಸುಮಾರು 4 ಕಿಮೀ ವರೆಗೆ ಮೆರವಣಿಗೆ ನಡೆಸಿದರು.

ಹನುಮ ಮಾಲಾಧಾರಿಗಳು ಪಟ್ಟಣದ ಗಂಜಾಂನ ಬೇಸಿಗೆ ಅರಮನೆ, ಆಸ್ಪತ್ರೆ, ಬೆಂಗಳೂರು - ಮೈಸೂರು ಹೆದ್ದಾರಿ ಹಾಗೂ ಪುರಾತನ ಕೋಟೆದ್ವಾರದಲ್ಲಿ ಯಾತ್ರೆ ಸಂಚರಿಸಿ ಮಧ್ಯಾಹ್ನನ ವೇಳೆಗೆ ಐತಿಹಾಸಿಕ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಾಲಯ ತಲುಪಿತು.

ಮೆರವಣಿಗೆಯ ಉದ್ದಕ್ಕೂ ಹಿಂದೂ ಹಾಗೂ ಹನುಮಾನ್ ಮಾಲಾಧಾರಿಗಳಿಂದ ಜೈ ಶ್ರೀರಾಮ್, ಜೈ ಭಜರಂಗಿ ಘೋಷಣೆಗಳು ಮೊಳಗಿದವು. ಮಾಲಾಧಾರಿಗಳು ಭಗವಾಧ್ವಜಗಳನ್ನು ಬೀಸಿದರು. ದಾರಿಯುದ್ದಕ್ಕೂ ಭಜನೆ, ಕೀರ್ತನೆಗಳನ್ನು ಮಾಡಿದರು. ಪುಟ್ಟ ಮಕ್ಕಳು ಹಾಗೂ ಕೆಲವರು ಶ್ರೀರಾಮ, ಲಕ್ಷ್ಮಣ, ಹನುಮನ್ನ ವೇಷ ತೊಟ್ಟು ಗಮನ ಸೆಳೆದರು.

ಮಂಡ್ಯ ಜಿಲ್ಲೆ ಮಾತ್ರವಲ್ಲದೆ ರಾಮನಗರ, ಮೈಸೂರು, ಮದ್ದೂರು, ಪಾಂಡವಪುರ, ನಾಗಮಂಗಲ, ಕೆ.ಆರ್.ಪೇಟೆ ಹಾಗೂ ಶ್ರೀರಂಗಪಟ್ಟಣ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಹನುಮ ಭಕ್ತರು ಯಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ನಂತರ ಧಾರ್ಮಿಕ ವಿಧಿ ವಿಧಾನಗಳಂತೆ ಮಾಲಾಧಾರಿಗಳು ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಾಲಯದಲ್ಲಿ ತಮ್ಮ ಮಾಲೆಗಳನ್ನು ವಿಸರ್ಜಿಸಿದರು. ಈ ವೇಳೆ ಹಿಂದೂ ಸಂಘಟನೆ ಮುಖಂಡರಾದ ಲೋಹಿತ್ ರಾಜೇ ಅರಸ್, ಚಂದನ್, ಮಾರ್ಕಂಡೇಯ, ಬಾಲರಾಜ್ ಸೇರಿದಂತೆ ಭಕ್ತಾದಿಗಳು, ಹನುಮಮಾಲಾ ಸಮಿತಿ ಮುಖ್ಯಸ್ಥರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

ಪೊಲೀಸ್ ಭದ್ರತೆ, ಸಿಸಿ ಟಿವಿ, ಡ್ರೋನ್ ಕ್ಯಾಮರಾಗಳ ಕಣ್ಗಾವಲು:

ಶ್ರೀರಂಗಪಟ್ಟಣ: ಜಿಲ್ಲೆ, ರಾಜ್ಯದ ಭಾಗಗಳಿಂದ ಪಟ್ಟಣಕ್ಕೆ ಹನುಮ ಮಾಲಾಧಾರಿಗಳು ಆಗಮಿಸಿ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪಟ್ಟಣ ಹಾಗೂ ಗಂಜಾಂನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪೊಲೀಸರ ಬಿಗಿಭದ್ರತೆ ಕೈಗೊಳ್ಳಲಾಗಿತ್ತು.

ಹನುಮ ಮಾಲಾಧಾರಿಗಳು ಯಾತ್ರೆ ತೆರಳಲಿರುವ ಪಟ್ಟಣ ಹಾಗೂ ಗಂಜಾಂನ ಪ್ರಮುಖ ಮಾರ್ಗ ಸೇರಿದಂತೆ ವಿವಿಧ ಸ್ಥಳಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ 1 ಐಜಿ, 3 ಎಸ್ಪಿ, 3 ಎಎಸ್‌ಪಿ, 20 ಡಿವೈಎಸ್ಪಿ ಸೇರಿದಂತೆ 1708 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಜೊತೆಗೆ 8 ಡಿಎಆರ್, 5 ಕ್ಯೂಆರ್‌ಟಿ, 9 ಕೆಎಸ್‌ಆರ್‌ಪಿ ತುಕಡಿ ಮತ್ತು 300 ಗೃಹ ರಕ್ಷಕ ದಳ ಸಿಬ್ಬಂದಿ ಜೊತೆಗೆ ಯಾತ್ರೆ ಸಾಗುವ ಮಾರ್ಗದಲ್ಲಿ 110 ಸಿಸಿಟಿವಿ ಅಳವಡಿಕೆ ಮಾಡಲಾಗಿತ್ತು. ಮೆರವಣಿಗೆ ಮೇಲೆ ಹೆಚ್ಚುವರಿಯಾಗಿ ನಿಗಾ ವಹಿಸಲು 20 ವಿಡಿಯೋ ಕ್ಯಾಮೆರಾ, 4 ಡ್ರೋಣ್ ಕ್ಯಾಮೆರಾಗಳ ಕಣ್ಗಾವಲು ಹಾಕಲಾಗಿತ್ತು.

ಅಲ್ಲದೇ ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳ 7 ಕಡೆ ಚೆಕ್ ಪೋಸ್ಟ್ ನಿರ್ಮಿಸಿ ವಾಹನಗಳ ತಪಾಸಣೆ ನಡೆಸಿ ಕಿಡಿಗೇಡಿಗಳಿಂದ ಯಾವುದೇ ಅಹಿತಕರ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು. ಜೊತೆಗೆ ಟಿಪ್ಪು ಮಸೀದಿ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ