ಭಾರತಿ ವಿದ್ಯಾಸಂಸ್ಥೆಯಲ್ಲಿ ಇಂದು ಸಂಕ್ರಾಂತಿ ಸಂಭ್ರಮ..!

KannadaprabhaNewsNetwork | Published : Jan 13, 2025 12:48 AM

ಸಾರಾಂಶ

ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಹಳ್ಳಿಗಾಡಿನ ಸಂಸ್ಕೃತಿ ಉಳಿಸಲು, ವಿದ್ಯಾರ್ಥಿಗಳ ಮೂಲಕ ಗ್ರಾಮೀಣ ಸೊಗಡನ್ನು ಬಿಂಬಿಸಲು ಭಾರತಿ ವಿದ್ಯಾ ಸಂಸ್ಥೆಯಲ್ಲಿಂದು ಸಂಕ್ರಾಂತಿ ಸಂಭ್ರಮವನ್ನು ಆಯೋಜಿಸಲಾಗಿದೆ. ರೈತರ ಹಬ್ಬ ಸಂಕ್ರಾಂತಿ ಸಂಭ್ರಮಕ್ಕಾಗಿ ಸಂಸ್ಥೆಯಲ್ಲಿ ಅದ್ಧೂರಿಯಾಗಿ ಆಚರಿಸಲು ಎಲ್ಲಾ ಹಂತದಲ್ಲೂ ಸಿದ್ಧತೆ ಮಾಡಲಾಗಿದೆ.

ಬಿ.ಎಸ್.ಸುನೀಲ್

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಹಳ್ಳಿಗಾಡಿನ ಸಂಸ್ಕೃತಿ ಉಳಿಸಲು, ವಿದ್ಯಾರ್ಥಿಗಳ ಮೂಲಕ ಗ್ರಾಮೀಣ ಸೊಗಡನ್ನು ಬಿಂಬಿಸಲು ಭಾರತಿ ವಿದ್ಯಾ ಸಂಸ್ಥೆಯಲ್ಲಿಂದು ಸಂಕ್ರಾಂತಿ ಸಂಭ್ರಮವನ್ನು ಆಯೋಜಿಸಲಾಗಿದೆ.

ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಲು ಮುಂದಾಗಿರುವ ಭಾರತಿ ವಿದ್ಯಾ ಸಂಸ್ಥೆ ಕಳೆದ ಕೆಲ ವರ್ಷಗಳಿಂದ ರೈತರ ಸುಗ್ಗಿ ಹಬ್ಬ ಸಂಕ್ರಾಂತಿ ಹಬ್ಬದ ಮುನ್ನಾ ದಿನ ಕಾಲೇಜಿನಲ್ಲಿ ಸಂಕ್ರಾಂತಿ ಸಂಭ್ರಮ ಹಮ್ಮಿಕೊಂಡು ಬರುತ್ತಿದ್ದು, ಸೋಮವಾರವೂ ಅದ್ಧೂರಿಯಾಗಿ ಆಚರಿಸಲು ಸಜ್ಜುಗೊಂಡಿದೆ.

ಮಾಜಿ ಸಂಸದ ದಿ.ಜಿ.ಮಾದೇಗೌಡ ಶ್ರಮದಿಂದ ಕಟ್ಟಿ ಬೆಳೆಸಿದ ಭಾರತೀ ವಿದ್ಯಾ ಸಂಸ್ಥೆ ಗುಣ ಮಟ್ಟದ ಶಿಕ್ಷಣ ನೀಡುತ್ತಾ ತನ್ನದೆ ಚಾಪು ಮೂಡಿಸಿ ರಾಜ್ಯದಲ್ಲೆ ದೊಡ್ಡ ಮಟ್ಟದ ಶೈಕ್ಷಣಿಕ ಕೇಂದ್ರವಾಗಿ ಬೆಳವಣಿಗೆ ಕಾಣುತ್ತಿದೆ. ಸಂಸ್ಥೆ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರು ಸಂಸ್ಥೆ ಮತ್ತಷ್ಟು ಪ್ರಗತಿ ಸಾಧಿಸಲು ಹಲವು ಯೋಜನೆ ರೂಪಿಸುತ್ತಿದ್ದಾರೆ. ಅದಕ್ಕೆ ಸಂಕ್ರಾಂತಿ ಸಂಭ್ರಮ ಸಾಕ್ಷಿಯಾಗಿದೆ. ಪುತ್ರ ಆಶಯ್ ಮಧು ಕೂಡ ಸಂಸ್ಥೆ ಏಳ್ಗೆಗೆ ಶ್ರಮಿಸುತಿದ್ದಾರೆ.

ರೈತರ ಹಬ್ಬ ಸಂಕ್ರಾಂತಿ ಸಂಭ್ರಮಕ್ಕಾಗಿ ಸಂಸ್ಥೆಯಲ್ಲಿ ಅದ್ಧೂರಿಯಾಗಿ ಆಚರಿಸಲು ಎಲ್ಲಾ ಹಂತದಲ್ಲೂ ಸಿದ್ಧತೆ ಮಾಡಲಾಗಿದೆ. ಈಗಾಗಲೇ ಮುಖ್ಯ ದ್ವಾರದಲ್ಲಿ ಬ್ಯಾನರ್ ಮತ್ತು ವಿದ್ಯುತ್ ದೀಪಗಳು ರಾರಾಜಿಸುತ್ತಿವೆ.

ಎತ್ತಿನ ಗಾಡಿಗಳಲ್ಲಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಕೆ.ಎಂ.ದೊಡ್ಡಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲು ತಯಾರಿ ನಡೆಸುತ್ತಿದ್ದಾರೆ. ಮೆರವಣಿಗೆಯಲ್ಲಿ ವೀರಗಾಸೆ, ಕೋಲಾಟ, ಬೊಂಬೆ ಕುಣಿತ, ಡೊಳ್ಳು ಕುಣಿತ, ಪಟ ಕುಣಿತ ಸೇರಿದಂತೆ 40ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿ ಪ್ರದರ್ಶನ ನೀಡಲಿವೆ.

ರಾಶಿ ಪೂಜೆ, ರೈತ ಸಂತೆ:

ಕಾಲೇಜಿನ ಕುವೆಂಪು ಸಭಾಂಗಣದ ಆವರಣದಲ್ಲಿ ಕಬ್ಬು ಸೇರಿದಂತೆ ಭತ್ತ, ರಾಗಿ ಮೊದಲಾದ ಧಾನ್ಯಗಳನ್ನು ರಾಶಿ ಮಾಡಿ ರೈತ ದಿನ ನಿತ್ಯ ಬಳಸುವ ವಸ್ತುಗಳನ್ನಿಟ್ಟು ಪೂಜೆ ಸಲ್ಲಿಕೆ, ಕಾಲೇಜಿನ 12 ಸಾವಿರ ವಿದ್ಯಾರ್ಥಿಗಳು, ಎಲ್ಲಾ ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬ್ಬಂದಿ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ಭಾಗವಹಿಸುವುದು, ವಿದ್ಯಾರ್ಥಿಗಳೇ ತಯಾರಿಸಿದ ತಿಂಡಿ, ತಿನಿಸುಗಳ ಮಾರಾಟ ಮತ್ತು ಪ್ರದರ್ಶನ ಹಾಗೂ ರೈತ ಸಂತೆಯು ಸಂಕ್ರಾಂತಿ ಸಂಭ್ರಮಕ್ಕೆ ಮೆರಗು ನೀಡಲಿವೆ.

ವಿಶೇಷವಾಗಿ ಮಡೆ ಅನ್ನ ಮಾಡುವುದು, ಕಜ್ಜಾಯ ಬುತ್ತಿಯನ್ನು ಅದೃಷ್ಟವಂತರಿಗೆ ನೀಡುವುದು, ಸಂಸ್ಥೆ ಆವರಣದಲ್ಲಿ ಚಿನ್ನಿದಾಂಡು, ಬುಗುರಿ, ಲಗೋರಿ, ಹಳ್ಳುಮನೆ ಗುಳಿ, ಕುಂಟೆ ಬಿಲ್ಲೆ ಮೊದಲಾದ ಗ್ರಾಮೀಣ ಕ್ರೀಡೆಗಳ ಸ್ಪರ್ಧೆ ಆಯೋಜನೆಗೆ ಸಿದ್ದತೆಗಳು ಪೂರ್ಣಗೊಂಡಿವೆ. ಇದರ ಜೊತೆಗೆ ಆಶಾಭಟ್ ಮತ್ತು ತಂಡದಿಂದ ರಸಮಂಜರಿ ಮತ್ತು ಬೆಂಗಳೂರಿನ ಮಹೇಶ್ ನೃತ್ಯ ತಂಡದಿಂದ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ಜರುಗಲಿದೆ.ವಿದೇಶಿ ಸಂಸ್ಕೃತಿ ಹಾವಳಿಯಿಂದ ಮರೆಯಾಗುತ್ತಿರುವ ಗ್ರಾಮೀಣ ಸಂಸ್ಕೃತಿ ಉಳಿಸಲು, ವಿದ್ಯಾರ್ಥಿಗಳಿಗೆ ತಿಳಿಸಲು, ರೈತ ಮಕ್ಕಳು ದೇಶಿ ಸಂಸ್ಕೃತಿಯನ್ನು ಪೂಜಿಸಬೇಕು ಎಂಬ ಆಶಯದೊಂದಿಗೆ ಕಾಲೇಜಿನಲ್ಲಿ ಸಂಕ್ರಾಂತಿ ಸಂಭ್ರಮವನ್ನು ಆಯೋಜಿಸಲಾಗುತ್ತಿದೆ.

- ಮಧು ಜಿ.ಮಾದೇಗೌಡ, ವಿಧಾನ ಪರಿಷತ್ ಸದಸ್ಯರು, ಸಂಸ್ಥೆ ಅಧ್ಯಕ್ಷರು

ಭಾರತೀ ವಿದ್ಯಾ ಸಂಸ್ಥೆ ಶಿಕ್ಷಣಕ್ಕೆ ಒತ್ತು ಕೊಡುವ ಜೊತೆಗೆ ನಮ್ಮ ಸಂಸ್ಕೃತಿ ಉಳಿವಿಗೂ ಆದ್ಯತೆ ನೀಡುತ್ತಿದೆ. ಗ್ರಾಮೀಣ ಸಂಸ್ಕೃತಿ, ಆಚಾರ, ವಿಚಾರಗಳನ್ನು ವಿದ್ಯಾರ್ಥಿಗಳಿಗೆ ನೀಡಲು ಸುಗ್ಗಿಹಬ್ಬ ಸಂಕ್ರಾಂತಿ ಸಂಭ್ರಮವನ್ನು ನಡೆಸುತ್ತಾ ಬರಲಾಗುತ್ತಿದೆ.

- ಪ್ರೊ.ಎಸ್.ನಾಗರಾಜು, ನಿರ್ದೇಶಕ, ಭಾರತೀ ಸ್ನಾತಕೋತ್ತರ ವಿಭಾಗ

ಪ್ರತಿ ವರ್ಷದಂತೆ ಈ ವರ್ಷವನ್ನು ಸಂಕ್ರಾಂತಿ ಸಂಭ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಗ್ರಾಮೀಣ ಸೊಗಡನ್ನು ಇತ್ತೀಚಿನ ತಲೆ ಮಾರಿನ ಯುವ ಜನತೆಗೆ ತಿಳಿಸುವುವುದು ಇದ ಉದ್ದೇಶವಾಗಿದೆ. ಇದೇ ವೇಳೆ ಭಾರತೀ ಸಂಸ್ಥೆ ವತಿಯಿಂದ ಹೊರ ತರುತ್ತಿರುವ ಭಾರತಿ ವಾಣಿ ಮಾಸ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜರುಗಲಿದೆ.

- ಡಾ.ಮರಯ್ಯ, ಉಪನ್ಯಾಸಕ ಭಾರತೀ ಕಾಲೇಜು

Share this article