- ಹಳ್ಳಿಯ ವಾತಾವರಣ ಸೃಷ್ಠಿಸಿದ ಶಾಲಾ ಆವರಣ, ಹಳ್ಳಿ ದಿರಿಸಿನಲ್ಲಿ ಶಿಕ್ಷಕರು, ಮಕ್ಕಳು - - -
ನಗರದ ಬನಶಂಕರಿ ಶಾಮನೂರು ಬಡಾವಣೆಯ ಮಯೂರ್ ಗ್ಲೋಬಲ್ ಶಾಲೆಯಲ್ಲಿ ಮಂಗಳವಾರ ಹಳ್ಳಿಯ ವಾತಾವರಣ ಸೃಷ್ಠಿಸಿ, ಸಂಕ್ರಾಂತಿ ಸಂಭ್ರಮ ಆಚರಿಸಲಾಯಿತು. ಶಾಲೆ ಆವರಣದಲ್ಲಿ ರಂಗೋಲಿಗಳನ್ನು ಹಾಕಿ ಎಳ್ಳು-ಬೆಲ್ಲ, ಕಬ್ಬಿನ ಜಲ್ಲೆ ಗೊನೆಗಳಿಂದ ಸಿಂಗಾರ ಮಾಡಲಾಗಿತ್ತು. ಜೊತೆಗೆ ಒಲೆ ಹಚ್ಚಿ ಹಾಲುಕ್ಕಿಸಿ ಸಂಭ್ರಮಿಸಲಾಯಿತು.
ಶಾಲಾ ಪ್ರವೇಶ ದ್ವಾರದ ಬಳಿ ಸಾಂಪ್ರದಾಯಿಕ ಗೋ ಪೂಜೆಯೊಂದಿಗೆ ಮಕರ ಸಂಕ್ರಾಂತಿ ಸಡಗರ ಆರಂಭಗೊಂಡಿತು. ಗೋ ಪೂಜೆ ಮಾಡಿದ ಶಿಕ್ಷಕಿಯರು ಮಲೆನಾಡು ಗಿಡ್ಡ ಹಸುಗಳಿಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು ತಿನ್ನಿಸಿದರು.ಶಾಲೆ ಆಡಳಿತಾಧಿಕಾರಿ ಬಿ.ಎನ್.ಮಲ್ಲೇಶ್ ಮಾತನಾಡಿ, ಆಧುನಿಕತೆ ಭರಾಟೆಯಲ್ಲಿ ಗ್ರಾಮೀಣ ಭಾಗದಲ್ಲೂ ಸಂಸ್ಕೃತಿ, ಆಚರಣೆಗಳು ಕಣ್ಮರೆಯಾಗುತ್ತಿವೆ. ನಮ್ಮ ಹಬ್ಬದ ಆಚರಣೆಗಳನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಅಗತ್ಯವಿದೆ. ಇದಕ್ಕಾಗಿ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕಿಯರು ಮತ್ತು ಮಕ್ಕಳು ಕಳೆದ ಮೂರ್ನಾಲ್ಕು ದಿನಗಳಿಂದ ಹಬ್ಬ ಆಚರಣೆಗೆ ತಯಾರಿ ಮಾಡಿಕೊಂಡಿದ್ದರು ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಶಾಲೆಯಂಗಳ ಪ್ರವೇಶದ ಬಳಿ ತೆಂಗು, ಬಾಳೆ ಕಂಬಗಳ ಸ್ವಾಗತ. ತೆಂಗಿನ ಗರಿಯೊಂದಿಗೆ ಗುಲಾಬಿ ಹಿಡಿದು ಮಕ್ಕಳು ಅತಿಥಿಗಳಿಗೆ ಸ್ವಾಗತ ಕೋರಿದರು. ಒಂದೆಡೆ ಪೂಜೆಗೆ ಸಿದ್ಧಪಡಿಸಿದ ರಾಗಿ, ಭತ್ತದ ರಾಶಿ. ಮತ್ತೊಂದೆಡೆ ಅಲಂಕರಿಸಿದ ಮಡಿಕೆಗಳಲ್ಲಿ ಅಡುಗೆ ತಯಾರಿಸುತ್ತಿರುವ ಚಿಣ್ಣರು. ಶಾಲಾ ಅಂಗಳದ ತುಂಬಾ ಗ್ರಾಮೀಣ ಸಾಂಪ್ರದಾಯಿಕ ಸೀರೆ, ರವಿಕೆ, ಪಂಚೆ, ಜುಬ್ಬಾ, ಟವೆಲ್ ಹಾಕಿಕೊಂಡಿದ್ದ ಚಿಣ್ಣರ ಕಲರವ ಮೇಳೈಸಿತ್ತು.ಮಕರ ಸಂಕ್ರಾಂತಿ ಆಚರಣೆ ಹಿಂದಿರುವ ವೈಜ್ಞಾನಿಕ ಹಾಗೂ ಧಾರ್ಮಿಕ ಉದ್ದೇಶವನ್ನು ಮಕ್ಕಳಿಗೆ ತಿಳಿಸಿಕೊಡುವ ಶಿಕ್ಷಣದ ಭಾಗವಾಗಿ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕಿಯರ ಪ್ರಯತ್ನ ಸಾರ್ಥಕತೆ ಕಂಡಿತು.
ಸೀರೆ ಉಟ್ಟಿದ್ದ ಪುಟಾಣಿಗಳು ರಾಗಿ ಬೀಸಿದರು, ಮೊಸರು ಕಡೆದು ಬೆಣ್ಣೆ ತೆಗೆದರು, ರೊಟ್ಟಿ ಬೇಯಿಸಿದರು. ಒನಕೆಯಿಂದ ಭತ್ತ ಕುಟ್ಟಿದರು, ಬಿಳಿ ಲುಂಗಿ, ಬಿಳಿ ಅಂಗಿ ಉಟ್ಟ ಚಿಣ್ಣರು ಸೌದೆ ಒಡೆದರು, ನೊಗಕ್ಕೆ ಎತ್ತು ಹೂಡಿ ಬೇಸಾಯ ಮಾಡಿದರು.ಶಾಲಾ ಆವರಣದಲ್ಲಿ ಹಳ್ಳಿ ಸೊಗಡಿನ ಗುಡಿಸಲು ಮನೆ, ಎತ್ತಿನಗಾಡಿ, ಭತ್ತದ ಕಣಜ, ಎತ್ತುಗಳು ಹೀಗೆ ಹಲವಾರು ವಸ್ತುಗಳಿಂದ ಆಕರ್ಷಣೀಯ ಪರಿಸರ ನಿರ್ಮಾಣ ಮಾಡಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ದೇಶಿಯ ಉಡುಗೆ, ತೊಡುಗೆ ತೊಟ್ಟು ಸಂಕ್ರಾಂತಿಗೆ ಮತ್ತಷ್ಟು ಮೆರಗು ತಂದರು. ಪಂಚಾಯಿತಿ ಕಟ್ಟೆಯ ಮೇಲೆ ಕುಳಿತಿದ್ದ ಊರ ಹಿರೀಕರು, ಬಳೆಗಾರ ಚನ್ನಯ್ಯ, ನೇಗಿಲಯೋಗಿಯ ವೇಷಧಾರಿ ಮಕ್ಕಳು ಗಮನ ಸೆಳೆದರು.
ಇಳಕಲ್ ಸೀರೆ ಧರಿಸಿದ್ದ ಶಿಕ್ಷಕಿಯರು ಸಾಮೂಹಿಕವಾಗಿ ಧಾನ್ಯದ ರಾಶಿಗೆ ಪೂಜೆ ಸಲ್ಲಿಸಿ ಆರತಿ ಬೆಳಗಿದರು. ರಾಗಿ, ಹೈಬ್ರೀಡ್ ಜೋಳ, ಮೆಕ್ಕೆಜೋಳ, ಭತ್ತ, ಕಡೆಲೆಕಾಳು, ಹೆಸರು ಕಾಳು, ಗೋಧಿ, ಬೆಲ್ಲ, ಅಡಕೆ, ಸಜ್ಜೆರೊಟ್ಟಿ, ಸಬ್ಬಕ್ಕಿ, ಸಿರಿಧಾನ್ಯಗಳು, ಕೆಂಪಕ್ಕಿ ಹೀಗೆ ತರಹೇವಾರಿ ಧಾನ್ಯಗಳ ರಾಶಿಗೆ ಪೂಜೆ ಸಲ್ಲಿಸಿ, ಸಂಕ್ರಾಂತಿಯ ಸುಗ್ಗಿ ಸಂಭ್ರಮ ಅನುಭವಿಸಿದರು.ಗೋ ಪೂಜೆ ಬಳಿಕ ನಂತರ ಮಕ್ಕಳು ತಾವೇ ತಯಾರಿಸಿದ ಗಾಳಿಪಟ ಹಾರಿಸಿದರು. ಎಳ್ಳು, ಬೆಲ್ಲ, ಕಬ್ಬು ವಿತರಿಸಿ ಶುಭಾಶಯ ಹಂಚಿಕೊಂಡರು. ಶಿಕ್ಷಕರು, ಪೋಷಕರು ಖುಷಿಯಿಂದ ಮಕ್ಕಳೊಂದಿಗೆ ಸಂಭ್ರಮಿಸಿದರು.
- - --13ಕೆಡಿವಿಜಿ44: ದಾವಣಗೆರೆಯ ಮಯೂರ್ ಗ್ಲೋಬಲ್ ಶಾಲೆಯಲ್ಲಿ ಸಂಕ್ರಾಂತಿ ಆಚರಣೆಯಲ್ಲಿ ಶಾಲೆ ಆಡಳಿತಾಧಿಕಾರಿ ಬಿ.ಎನ್.ಮಲ್ಲೇಶ ಇತರರು ಪೂಜೆ ಸಲ್ಲಿಸಿದರು.
-13ಕೆಡಿವಿಜಿ45: ಮಯೂರ್ ಗ್ಲೋಬಲ್ ಶಾಲೆಯಲ್ಲಿ ಗೋವಿಗೆ ಪೂಜೆ ಸಲ್ಲಿಸಲಾಯಿತು.-13ಕೆಡಿವಿಜಿ46, 47: ದಾವಣಗೆರೆಯ ಮಯೂರ್ ಗ್ಲೋಬಲ್ ಶಾಲೆಯಲ್ಲಿ ಸಂಕ್ರಾಂತಿ ಆಚರಣೆಯಲ್ಲಿ ಶಿಕ್ಷಕಿಯರು ಧಾನ್ಯದ ರಾಶಿಗೆ ಪೂಜೆ ಸಲ್ಲಿಸಿದರು.
-13ಕೆಡಿವಿಜಿ48, 49: ದಾವಣಗೆರೆಯ ಮಯೂರ್ ಗ್ಲೋಬಲ್ ಶಾಲೆಯಲ್ಲಿ ಸಂಕಾಂತಿ ಆಚರಣೆಯಲ್ಲಿ ಚಿಣ್ಣರು ಕಂಡಿದ್ದು ಹೀಗೆ.