ಜಾನಪದ ಸಂಶೋಧನಾ ಸಂಸ್ಥೆಯಿಂದ ಸಂಕ್ರಾಂತಿ ಸಂಪ್ರದಾಯ

KannadaprabhaNewsNetwork |  
Published : Jan 14, 2026, 03:15 AM IST
ಜಾನಪದ ಸಂಶೋಧನಾ ಸಂಸ್ಥೆಯಿಂದ ಸಂಕ್ರಾಂತಿ ಸಂಪ್ರದಾಯ | Kannada Prabha

ಸಾರಾಂಶ

ಹೊಸ ವರ್ಷದ ಮೊದಲ ಹಬ್ಬ ಸಂಕ್ರಮಣ. ಸೂರ್ಯನು ಕರ್ಕರಾಶಿಯಿಂದ ಮಕರರಾಶಿಗೆ ಪ್ರವೇಶ ದಿನವೇ ಮಕರ ಸಂಕ್ರಾಂತಿ. ಈ ಹಿನ್ನೆಲೆಯಲ್ಲಿ ಬಾರೋ ಸಾಧನಕೇರಿ ಉದ್ಯಾನವನದಲ್ಲಿ ಸಂಸ್ಥೆಯ ಸದಸ್ಯರು ಸಾಂಪ್ರದಾಯಿಕವಾಗಿ ಸಂಕ್ರಮಣ ಆಚರಿಸುವ ಮೂಲಕ ಹಬ್ಬದ ಮಹತ್ವ ತಿಳಿಸಿದರು.

ಧಾರವಾಡ:

ಯುವ ಪೀಳಿಗೆ ದೇಸಿ ಸಂಸ್ಕೃತಿ, ಸಂಪ್ರದಾಯ ಹಾಗೂ ಹಬ್ಬಗಳನ್ನು ಕಾಟಾಚಾರಕ್ಕೆ ಆಚರಿಸುತ್ತಿದೆ. ಆದ್ದರಿಂದ ಯುವ ಜನಾಂಗಕ್ಕೆ ನಮ್ಮ ಹಬ್ಬಗಳ ಮಹತ್ವ, ಆಚರಣೆ, ಸಂಪ್ರದಾಯ ತಿಳಿಸಿಕೊಡಲು ಇಲ್ಲಿಯ ಜಾನಪದ ಸಂಶೋಧನಾ ಸಂಸ್ಥೆಯು ಹಲವು ವರ್ಷಗಳಿಂದ ಕಾರ್ಯ ಮಾಡುತ್ತಿದೆ.

ಇದೀಗ ಹೊಸ ವರ್ಷದ ಮೊದಲ ಹಬ್ಬ ಸಂಕ್ರಮಣ. ಸೂರ್ಯನು ಕರ್ಕರಾಶಿಯಿಂದ ಮಕರರಾಶಿಗೆ ಪ್ರವೇಶ ದಿನವೇ ಮಕರ ಸಂಕ್ರಾಂತಿ. ಈ ಹಿನ್ನೆಲೆಯಲ್ಲಿ ಬಾರೋ ಸಾಧನಕೇರಿ ಉದ್ಯಾನವನದಲ್ಲಿ ಸಂಸ್ಥೆಯ ಸದಸ್ಯರು ಸಾಂಪ್ರದಾಯಿಕವಾಗಿ ಸಂಕ್ರಮಣ ಆಚರಿಸುವ ಮೂಲಕ ಹಬ್ಬದ ಮಹತ್ವ ತಿಳಿಸಿದರು. ಖ್ಯಾತ ಜಾನಪದ ಕಲಾವಿದರಾಗಿದ್ದ ಬಸವಲಿಂಗಯ್ಯ ಹಿರೇಮಠ ಹುಟ್ಟು ಹಾಕಿದ ಸಂಸ್ಥೆ ಇದಾಗಿದ್ದು, ಕಳೆದ 12 ವರ್ಷಗಳಿಂದ ಸಂಕ್ರಾಂತಿ, ನಾಗರ ಪಂಚಮಿ ಅಂತಹ ಮಹತ್ವದ ಹಬ್ಬಗಳಂದೂ ವಿಶೇಷ ಆಚರಣೆ ಮಾಡಲಾಗುತ್ತದೆ. ಇದೀಗ ಬಸವಲಿಂಗಯ್ಯ ಹಿರೇಮಠ ಪತ್ನಿ ವಿಶ್ವೇಶ್ವರಿ ಹಾಗೂ ಪುತ್ರ ಭೂಷಣ್‌ ಈ ಸಂಪ್ರದಾಯ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.ವಿಶೇಷ ಭಕ್ಷ್ಯಗಳು:

ಸಂಕ್ರಾಂತಿ ಹಬ್ಬದ ಮುನ್ನಾದಿನ ಮಂಗಳವಾರ ಸಂಸ್ಥೆಯ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು, ಸಂಕ್ರಾಂತಿ ಹಬ್ಬದ ವಿಶೇಷ ಅಡುಗೆಗಳನ್ನು ಸಿದ್ಧಪಡಿಸಿಕೊಂಡು ಸಂಕ್ರಾಂತಿ ಹಾಡು ಹೇಳುತ್ತಾ ಹಬ್ಬದ ಮಹತ್ವ ತಿಳಿಸಿದರು. ಹಬ್ಬ ಅರಿಯಲು ಬಂದಿದ್ದ ಎಲ್ಲರಿಗೂ ಸಂಕ್ರಮಣದ ಎಳ್ಳು-ಬೆಲ್ಲ, ಸಜ್ಜೆ, ಜೋಳದ ರೊಟ್ಟಿ, ಬದನೆಕಾಯಿ ಬರ್ತಾ, ಮಡಕಿಕಾಳು, ಬದನೆಕಾಯಿ ಎಣಗಾಯಿ, ಪುಂಡಿಪಲ್ಲೆ, ಶೇಂಗಾ, ಗುರೆಳ್ಳ ಚೆಟ್ನಿ, ಮೊಸರು, ಮಾದರಿ-ಹಾಲು, ಶೇಂಗಾ ಹೋಳಿಗೆ, ಚಿತ್ರನ್ನ, ಮೊಸರನ್ನದ ಬುತ್ತಿ ಹಾಗೂ ತರಕಾರಿಯೊಂದಿಗಿನ ವಿಶೇಷ ಭೋಜನದ ವ್ಯವಸ್ಥೆ ಇತ್ತು.12 ವರ್ಷಗಳಿಂದ ಕಾರ್ಯಕ್ರಮ:

ಪ್ರಸ್ತುತ ನಿಜವಾದ ಸ್ನೇಹ-ಪ್ರೀತಿಯ ಕೊರತೆ ಸಮಾಜದಲ್ಲಿ ಎದ್ದು ಕಾಣುತ್ತಿದೆ. ಸಂಬಂಧಗಳಲ್ಲಿ ಆತ್ಮೀಯತೆ ದೂರವಾಗಿದೆ. ಮೊಬೈಲ್‍ಗಳಲ್ಲಿ ಮಾತನಾಡುವವರು ಪಕ್ಕದಲ್ಲಿ ಕುಳಿತವರ ಜತೆಗೆ ಮಾತನಾಡುವುದು ಕಡಿಮೆಯಾಗಿದೆ. ಫೇಸ್‍ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ತಲ್ಲೀನರಾಗಿದ್ದಾರೆ. ಸಂಬಂಧಗಳಿಗೆ ಸಮಯ ನೀಡದಾಗಿದೆ. ಆದ್ದರಿಂದ ಹಬ್ಬಗಳ ಸಮಯದಲ್ಲಿ ಕುಟುಂಬದ ಜತೆಗೆ ಹೋಗಿ ಊಟದ ಜತೆಗೆ ಹಬ್ಬ ಆಚರಿಸಲು ಪ್ರೇರೇಪಿಸಲು 12 ವರ್ಷಗಳಿಂದ ಇಂತಹ ಕಾರ್ಯಕ್ರಮ ಮಾಡುತ್ತಿದ್ದೇವೆ. ಮಾದರಿ ಹಬ್ಬ ಬಂದೈತಿ, ಸಂಕ್ರಾಂತಿ ತಂದೈತಿ ಅಂತಹ ಹಬ್ಬದ ಹಾಡು ಹೇಳುತ್ತೇವೆ. ಜತೆಗೆ ಗಂಗೆ ಪೂಜೆ ಮಾಡಿ ನಂತರ ಎಲ್ಲರೂ ಸೇರಿ ಭೋಜನ ಮಾಡುತ್ತೇವೆ. ಸಾಂಪ್ರದಾಯಿಕ ಉಡುಗೆ-ತೊಡೆಗೆಯೂ ಹಬ್ಬದ ವಿಶೇಷ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥರಾದ ವಿಶ್ವೇಶ್ವರಿ ಹಿರೇಮಠ.ಕಳೆದ ಹಲವು ವರ್ಷಗಳಿಂದ ಈ ಸಂಸ್ಥೆಯ ಎಲ್ಲ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಮನೆ ಕೆಲಸ, ನಿತ್ಯದ ಜೀವನದ ಒತ್ತಡದಿಂದ ಹೊರ ಬಂದಿದ್ದೇನೆ. ಜತೆಗೆ ಹಬ್ಬದ ಮಹತ್ವ ತಿಳಿಯುತ್ತಿದ್ದು, ಮುಂದಿನ ಪೀಳಿಗೆ ಇಂತಹ ಕಾರ್ಯಕ್ರಮಗಳು ತುಂಬ ಅವಶ್ಯ ಎಂದು ಸುಜಾತಾ ಹಡಗಲಿ ಪ್ರತಿಕ್ರಿಯಿಸಿದರು. ಜಾನಪದ ಸಂಶೋಧನಾ ಸಂಸ್ಥೆಯ ವೀಣಾ ಹಿರೇಮಠ, ಪಾರ್ವತಿ ಹಲಭಾವಿ, ಆಶಾ ಸಯ್ಯದ್, ಇಂದಿರಾ, ಜಯಶ್ರೀ, ವಿದ್ಯಾ , ಮಹಾದೇವಿ ಕೊಪ್ಪದ, ಸರಸ್ವತಿ ಪೂಜಾರ, ನಂದಾ, ಗಂಗಮ್ಮ, ವಿಜಯಾ , ಭಾರತಿ ಕಲ್ಮಠ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋವಿನಜೋಳ ಖರೀದಿಯಲ್ಲಿ ಪಾರದರ್ಶಕತೆ ಇರಲಿ: ಡಿಸಿ
ಶ್ರೀಬಸವೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸ್ನೇಹಸಂಗಮ