ಕನ್ನಡಪ್ರಭ ವಾರ್ತೆ ಮಂಡ್ಯ
ಇಲ್ಲಿನ ಕಾವೇರಿನಗರ ಬಡಾವಣೆ ಎರಡನೇ ಹಂತದ ಬಸ್ ನಿಲ್ದಾಣ ಬಳಿ ಗೋ ರಕ್ಷಣಾ ಸಮಿತಿ ಹಾಗೂ ಕಾವೇರಿನಗರ, ದ್ವಾರಕನಗರ, ಶ್ರೀರಾಮನಗರ ನಿವಾಸಿಗಳು ಸಂಕ್ರಾಂತಿ ಹಬ್ಬದ ಪ್ರಯುಕ್ತ ನಾಲ್ಕನೇ ವರ್ಷದ ಗೋ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲೋ ಒಂದು ಕಡೆ ನಾವೆಲ್ಲರೂ ಚಿಕ್ಕಂದಿನಲ್ಲಿ ನೋಡಿದ ವಿಜೃಂಭಣೆಯ ಸಂಕ್ರಾಂತಿ ವೈಭವವನ್ನು ಇಂದಿನ ಮಕ್ಕಳು ನೋಡಲು ಸಾಧ್ಯವಾಗುತ್ತಿಲ್ಲ, ರಾಸುಗಳ ಸಂಖ್ಯೆ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಕಂಡುಬರುತ್ತಿದ್ದ ಸಂಕ್ರಾಂತಿ ಸಂಭ್ರಮ ದಿನೇ ದಿನೇ ಮರೆಯಾಗುತ್ತಿದೆ ಎಂದರು.ನಗರ ಪ್ರದೇಶಕ್ಕೆ ಸೇರಿದ ಕಾವೇರಿ ನಗರ, ದ್ವಾರಕನಗರ, ಶ್ರೀರಾಮನಗರ ನಿವಾಸಿಗಳು ಒಗ್ಗೂಡಿ ಗೋ ಪೂಜೆ ಆಯೋಜಿಸಿರುವುದು ಶ್ಲಾಘನೀಯ. ಯುವಕರು ಕೃಷಿಯತ್ತ ಆಕರ್ಷಿತರಾದರೆ ಕಳೆದುಹೋಗುತ್ತಿರುವ ಸಂಕ್ರಾಂತಿ ಹಬ್ಬದ ಗತ ವೈಭವವನ್ನು ಮರುಕಳಿಸುವಂತೆ ಮಾಡಬಹುದು ಎಂದು ನುಡಿದರು.
ಜೆಡಿಎಸ್ ಮುಖಂಡ ಬಿ.ರಾಮಚಂದ್ರ ಮಾತನಾಡಿ, ಸ್ಥಳೀಯ ನಿವಾಸಿಗಳು ಒಗ್ಗೂಡಿ ಗೋ ಪೂಜೆ ಮಾಡುತ್ತಿರುವುದು ಖುಷಿ ತಂದಿದೆ. ನಾವು ಚಿಕ್ಕವರಿದ್ದಾಗ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸುತ್ತಿರುವುದನ್ನು ನೋಡಿ ಬೆಳೆದಿದ್ದೇವೆ ಎಂದರು.
ಇದೇ ವೇಳೆ ನಿವಾಸಿಗಳು ಗೋ ಪೂಜೆ ನೆರವೇರಿಸಿ, ಭತ್ತ-ರಾಗಿ ರಾಶಿಗೂ ಪೂಜೆ ಸಲ್ಲಿಸಿದರು. ಪೊಂಗಲ್ ಮತ್ತು ಸಿಹಿ ವಿತರಣೆ ನಡೆಯಿತು. ಮಕ್ಕಳು ಮತ್ತು ಯುವಕರು ತಮಟೆ-ನಗಾರಿ ನಾದಕ್ಕೆ ಕುಣಿದು ಕುಪ್ಪಳಿಸಿದರು. ಪ್ರಮುಖ ಬೀದಿಗಳಲ್ಲಿ ಗೋವುಗಳನ್ನು ಮೆರವಣಿಗೆ ಮಾಡಲಾಯಿತು.