ಪದವಿ, ಹುದ್ದೆಗಿಂತ ಸಂಸ್ಕಾರ ಮುಖ್ಯ: ಡಾ.ಬಸವಲಿಂಗ ಅವಧೂತರು

ಭಾಲ್ಕಿ ತಾಲೂಕಿನ ತಳವಾಡ (ಕೆ) ಗ್ರಾಮದಲ್ಲಿ ನಡೆದ ಮಹಾದೇವ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ಜಹೀರಾಬಾದ್ ತಾಲೂಕಿನ ಮಲ್ಲಯ್ಯಗಿರಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಭವ್ಯ ಮೆರವಣಿಗೆ ನಡೆಯಿತು.

KannadaprabhaNewsNetwork | Published : Apr 25, 2024 7:15 PM IST

ಕನ್ನಡಪ್ರಭ ವಾರ್ತೆ ಭಾಲ್ಕಿ

ಯಾರೊಬ್ಬರು ನಾನು ಚೆನ್ನಾಗಿ ಓದಿಕೊಂಡಿದ್ದೇನೆ, ದೊಡ್ಡ ಹುದ್ದೆಯಲ್ಲಿ ಇದ್ದೇನೆ ಎಂದು ಅಹಂ ಪಡಬಾರದು. ಇತರರೊಂದಿಗೆ ಹೇಗೆ ಇರಬೇಕು ಎಂಬ ಸಂಸ್ಕಾರ ಕಲಿಯಬೇಕೆಂದು ಜಹೀರಾಬಾದ್ ತಾಲೂಕಿನ ಮಲ್ಲಯ್ಯಗಿರಿ, ದೇಗಲಮಡಿ ಮತ್ತು ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಡಾ.ಬಸವಲಿಂಗ ಅವಧೂತರು ನುಡಿದರು.

ಭಾಲ್ಕಿ ತಾಲೂಕಿನ ತಳವಾಡ (ಕೆ) ಗ್ರಾಮದಲ್ಲಿ ಬುಧವಾರ ನಡೆದ ಮಹಾದೇವ ದೇವಾಲಯದ 23ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಬದುಕಿನ ಅಂಧಕಾರ ಕಳೆಯುವವನೇ ನಿಜವಾದ ಗುರು ಅವರ ಮಾರ್ಗದರ್ಶನದಿಂದ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು. ಈ ಗ್ರಾಮದಲ್ಲಿ ತಾವೆಲ್ಲ ಸೌಹಾರ್ದದಿಂದ ಬಾಳಬೇಕು. ಪರಸ್ಪರ ಕಷ್ಟ-ಸುಖದಲ್ಲಿ ಭಾಗಿ, ತಂದೆ ತಾಯಿ ವೃದ್ಧಾಪ್ಯದಲ್ಲಿ ಇದ್ದಾಗ ಅವರ ಸೇವೆ ಮಾಡುತ್ತಾ, ಯಾವ ಕಾರಣಕ್ಕೂ ಅವರ ಮನಸ್ಸು ನೋಯಿಸಬಾರದು ಎಂದರು.ಇಂದಿನ ಹುಡುಗರು ಮಾದಕ ವಸ್ತುಗಳ ಚಟಕ್ಕೆ ಬಿದ್ದು ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಚಟಗಳಿಂದ ಆರೋಗ್ಯ ಹಾಳಾಗುತ್ತದೆ ತಂದೆ ತಾಯಿ ಮಕ್ಕಳನ್ನೂ ಪೊಷಿಸಿಕೊಳ್ಳಬೇಕು. ಬಸವಣ್ಣ, ಅಕ್ಕಮಹಾದೇವಿ, ವಿವೇಕಾನಂದ ಸೇರಿ ಮಹಾತ್ಮರ ಜೀನವ ಸಾಧನೆ ಪುಸ್ತಕ ಓದಿ ಪ್ರೇರಣೆ ಪಡೆದು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು. ಈ ಊರಿನ ಆರಾಧ್ಯ ದೈವ ಮಹಾದೇವ ಭಕ್ತರ ಸಂಕಷ್ಟ ಪರಿಹರಿಸುತ್ತಾನೆ ಎಂದು ಹೇಳಿದರು.

ಇದಕ್ಕೂ ಮುನ್ನ ಗ್ರಾಮದ ಮುಖ್ಯ ರಸ್ತೆಯಿಂದ ಮಹಾದೇವ ಮಂದಿರದವರೆಗೆ ಡಾ.ಬಸವಲಿಂಗ ಅವಧೂತರನ್ನು ಬೆಳ್ಳಿ ರಥದಲ್ಲಿ ಭವ್ಯ ಮೆರವಣಿಗೆಯಲ್ಲಿ ಕರೆ ತರಲಾಯಿತು. ಕಳಸ ಹೊತ್ತ ಮಹಿಳೆಯರು, ಕೋಲಾಟ, ಡೋಳು ಕುಣಿತ, ಯುವಕರ ನರ್ತನ ಮೆರವಣಿಗೆಗೆ ಕಳೆ ತಂದುಕೊಟ್ಟವು.

ಪ್ರಮುಖರಾದ ಗುಂಡಪ್ಪ ರಾಜಪೂರೆ, ಓಂಕಾರ ಬೋರಗೆ, ಬಾಬಶೆಟ್ಟಿ ರಾಜಪೂರೆ, ಜಗನ್ನಾಥ ಕನಶೆಟ್ಟೆ, ಶಿವಕುಮಾರ ಪಾಟೀಲ್, ಸೋಮನಾಥ ಕನಶೆಟ್ಟೆ, ಯುವರಾಜ ರಾಜಪೂರೆ, ರವಿ ಪಾಟೀಲ, ಕಾಮಶೆಟ್ಟಿ ರಾಜಪೂರೆ, ಸಿದ್ರಾಮ ಪಾಟೀಲ್, ಜಗನ್ನಾಥ ಪಾಟೀಲ್, ಶಿವಾಜಿ ಲೋಹಾರ, ವಿಶ್ವನಾಥ ಹೂಗಾರ ಮತ್ತಿತರರು ಪಾಲ್ಗೊಂಡಿದ್ದರು.

Share this article