ಶಾಸಕರಿಬ್ಬರ ವಿರುದ್ಧ ಕ್ರಮಕ್ಕೆ ಐವನ್‌ ಡಿಸೋಜಾ ನೇತೃತ್ವದಲ್ಲಿ ಸ್ಪೀಕರ್‌ಗೆ ದೂರು

KannadaprabhaNewsNetwork | Published : Feb 17, 2024 1:16 AM

ಸಾರಾಂಶ

ಶಾಸಕ ವೇದವ್ಯಾಸ ಕಾಮತ್ ಮತ್ತು ಶಾಸಕ ಡಾ.ಭರತ್ ಶೆಟ್ಟಿಯವರ ವರ್ತನೆಯ ಬಗ್ಗೆ ವಿಚಾರಣೆ ನಡೆಸಿ, ಸದಸ್ಯತ್ವದಿಂದ ವಜಾಗೊಳಿಸಲು ಪರಿಶೀಲಿಸಿ ತೀರ್ಮಾನಿಸುವುದಾಗಿ ಸಭಾಪತಿ ಯು.ಟಿ.ಖಾದರ್ ಭರವಸೆ ನೀಡಿದರು ಎಂದು ಐವನ್‌ ಡಿಸೋಜಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಸಂತ ಜೆರೊಸಾ ಶಾಲೆಯ ಗೇಟಿನ ಮುಂದೆ ಪ್ರತಿಭಟನೆ ನಡೆಸಿದ ಶಾಸಕರಿಬ್ಬರನ್ನು ಸದಸ್ಯತ್ವದಿಂದ ವಜಾಗೊಳಿಸುವಂತೆ ಆಗ್ರಹಿಸಿ ವಿಧಾನ ಪರಿಷತ್‌ ಮಾಜಿ ಸದಸ್ಯ ಐವನ್‌ ಡಿಸೋಜಾ ನೇತೃತ್ವದಲ್ಲಿ ಪಾಲಿಕೆ ಮಾಜಿ ಸದಸ್ಯ ಭಾಸ್ಕರ ರಾವ್‌ ಅವರು ಬೆಂಗಳೂರಲ್ಲಿ ಶುಕ್ರವಾರ ಸ್ಪೀಕರ್ ಯು.ಟಿ.ಖಾದರ್‌ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಶಾಸಕ ವೇದವ್ಯಾಸ ಕಾಮತ್ ಮತ್ತು ಶಾಸಕ ಡಾ.ಭರತ್ ಶೆಟ್ಟಿಯವರ ವರ್ತನೆಯ ಬಗ್ಗೆ ವಿಚಾರಣೆ ನಡೆಸಿ, ಸದಸ್ಯತ್ವದಿಂದ ವಜಾಗೊಳಿಸಲು ಪರಿಶೀಲಿಸಿ ತೀರ್ಮಾನಿಸುವುದಾಗಿ ಸಭಾಪತಿ ಯು.ಟಿ.ಖಾದರ್ ಭರವಸೆ ನೀಡಿದರು ಎಂದು ಐವನ್‌ ಡಿಸೋಜಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಫೆಬ್ರವರಿ ೧೨ರಂದು ಸಂತ ಜೆರೋಸಾ ಹೈಸ್ಕೂಲು ಬಳಿ ನಡೆದಿದ್ದ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾ.ಭರತ್ ಶೆಟ್ಟಿ ನೇತೃತ್ವದ ಪ್ರತಿಭಟನೆ ಮತ್ತು ಆ ಪ್ರತಿಭಟನೆಯಲ್ಲಿ ನಡೆದ ಘಟಾನಾವಳಿಗಳು, ಸುಶಿಕ್ಷಿತ ಸಮಾಜ ತಲೆತಗ್ಗಿಸುವಂತಾಗಿದೆ. ಶಾಸಕರ ಪ್ರಚೋದನಕಾರಿ ಹೇಳಿಕೆ ಮತ್ತು ಭಾಷಣಗಳು, ಶಿಕ್ಷಕರ ಮುಂದೆ ವಿದ್ಯಾರ್ಥಿಗಳನ್ನು ಕರೆದು ನಡೆಸಿದ ರೀತಿ, ಶಿಕ್ಷಕರನ್ನು ಬೀದಿಯಲ್ಲಿ ನಿಲ್ಲಿಸಿ, ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ.

ಅಧಿಕಾರಿಗಳ ಮೂಲಕ ಒತ್ತಡ ಹೇರಿ, ಶಿಕ್ಷಕಿಯನ್ನು ಅಮಾನತುಗೊಳಿಸಲು ಮತ್ತು ವರ್ಗಾಯಿಸಲು ಮಾಡಿದಂತಹ ವರ್ತನೆ ಮತ್ತು ವಿದ್ಯಾರ್ಥಿಗಳನ್ನು ಮತ್ತು ಸಾರ್ವಜನಿಕರನ್ನು ಧರ್ಮದ ಆಧಾರದಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಹಾಕಿ, ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಹೇಳಿಕೆಗಳನ್ನು ನೀಡಿ, ಶಿಕ್ಷಣದ ದೇಗುಲದ ಮುಂದೆ ಹೈಡ್ರಾಮ ನಡೆಸಿದ್ದಾರೆ. ಇದು ಪ್ರಜಾಪ್ರಭುತ್ವದಲ್ಲಿ ಒಂದು ಕಪ್ಪು ಚುಕ್ಕಿಯಾಗಿದ್ದು ಈ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ವಿಧಾನ ಮಂಡಲದ ಪ್ರಾಕ್ಟಿಸ್ ಮತ್ತು ಪ್ರೊಸಿಜರ್ ಅಸೆಂಬ್ಲಿ ಅಥವಾ ಪಾರ್ಲಿಮೆಂಟ್ ಪ್ರಕಾರ ಯಾವುದೇ ವ್ಯಕ್ತಿ ಶಾಸಕರ ನಡುವಳಿಕೆ ಬಗ್ಗೆ ಮತ್ತು ಆತನು ಸ್ವೀಕರಿಸಿದ ಪ್ರತಿಜ್ಞೆಗೆ ವಿರುದ್ಧವಾಗಿ ನಡೆದಾಗ, ಅಂತವರ ಮೇಲೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದು ಸ್ಪೀಕರ್‌ ಅಧಿಕಾರ ವ್ಯಾಪ್ತಿಯಲ್ಲಿ ಬರುತ್ತದೆ. ಸ್ಪೀಕರ್ ಅಥವಾ ಸಭಾನಾಯಕ ಹೇಳಿದರೆ ಮುಖ್ಯಮಂತ್ರಿಗಳಿಗೆ ದೂರು ನೀಡಲು ಅವಕಾಶ ಇದೆ. ಹಾಗಾಗಿ ಸಮಾಜದಲ್ಲಿ ಶಾಸಕತ್ವದ ಹುದ್ದೆಗೆ ಘನತೆ, ಗೌರವವನ್ನು ಕಡಿಮೆ ಮಾಡುವ ರೀತಿಯಲ್ಲಿ ವರ್ತಿಸಿದ್ದಾರೆ. ಈ ಕುರಿತ ಸಾಕ್ಷಾಧಾರ, ಕೇಸಿನ ವಿವರ ಪ್ರತಿಯನ್ನು ಸ್ಪೀಕರ್‌ಗೆ ಶಾಲಾ ಪೋಷಕರ ಪರವಾಗಿ ಭಾಸ್ಕರ್‌ ರಾವ್‌ ಸಲ್ಲಿಸಿದ್ದಾರೆ ಎಂದು ಐವನ್‌ ಡಿಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಾಸಕರ ಅಮಾನತಿಗೆ ಐವನ್ ಮನವಿಗೆ ಡಾ.ಭರತ್ ಶೆಟ್ಟಿ ತಿರುಗೇಟು

ಮಂಗಳೂರು: ಕೇಸು ದಾಖಲಾದವರನ್ನು ಅಮಾನತು ಮಾಡುತ್ತಾ ಹೋದರೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಬೆಂಚುಗಳು ಖಾಲಿಯಾಗಲಿವೆ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಟೀಕಿಸಿದ್ದಾರೆ.

ಕಾಂಗ್ರೆಸ್ ಉಪಾಧ್ಯಕ್ಷ ಐವನ್ ಡಿಸೋಜಾ ಹಾಗೂ ಕೆಲವರು ಸ್ಪೀಕರ್ ಯು.ಟಿ. ಖಾದರ್ ಅವರಿಗೆ ತನ್ನನ್ನು ಹಾಗೂ ಶಾಸಕ ವೇದವ್ಯಾಸ ಕಾಮತ್ ಅವರನ್ನು ಅಮಾನತು ಮಾಡುವಂತೆ ಮನವಿ ಮಾಡಿದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಕೋಮುವಾದ ಕೇವಲ ಬಿಜೆಪಿಗೆ, ಹಿಂದುಗಳಿಗೆ ಎಂದು ಲೇಬಲ್ ಅಂಟಿಸಿದಂತಿದೆ. ಶಾಲೆಯ ಶಿಕ್ಷಕಿಯ ತಪ್ಪು ತಿಳಿದೂ, ಸಮುದಾಯದ ಪರವಾಗಿ ಮಾತನಾಡುವ ಐವನ್ ಡಿಸೋಜ ಕೂಡ ಓರ್ವ ಕೋಮುವಾದಿಯಾಗಿದ್ದಾರೆ. ಹಲವಾರು ಪ್ರಕರಣದಲ್ಲಿ‌ ಇದು ಸಾಬೀತಾಗಿದೆ. ನಾವೂ ಕೂಡ ಅವರನ್ನು ಗಡಿಪಾರು ಮಾಡಿ ಎಂದು ಒತ್ತಾಯ್ಸಬಹುದು ಎಂದು ತಿರುಗೇಟು ನೀಡಿದರು.

ಡಿಡಿಪಿಐ ಕಚೇರಿಗೆ ಮನವಿ ಕೊಡಲು ಹೋಗಿದ್ದ ನನ್ನ ಹಾಗೂ ಶರಣ್ ಪಂಪ್‌ವೆಲ್ ಮೇಲೂ ಕೇಸು ಹಾಕಲಾಗಿದೆ. ಮನವಿ ನೀಡುವ ಹೇಳಿಕೆಯ ವೀಡಿಯೋ ತಿರುಚಿ ಫಾರ್ವರ್ಡ್ ಮಾಡಲಾಗುತ್ತಿದೆ. ಇದಕ್ಕೆಲ್ಲಾ ಹೆದರುವ ಪ್ರಶ್ನೆಯಿಲ್ಲ. ಕಾನೂನಾತ್ಮಕವಾಗಿಯೇ ಎದುರಿಸುತ್ತೇವೆ ಎಂದು ಅವರು ತಿರುಗೇಟು ನೀಡಿದ್ದಾರೆ.

Share this article