ಬಹುಮುಖ ಪ್ರತಿಭೆಯ ದಿವ್ಯಾಂಗ ನೌಕರ ಕಾರವಾರದ ಸಂತೋಷ ಕುಡಾಳ್ಕರ್

KannadaprabhaNewsNetwork |  
Published : Jan 14, 2025, 01:00 AM IST
ಸಂತೋಷ ಕುಡಾಳ್ಕರ್ | Kannada Prabha

ಸಾರಾಂಶ

ಸಂತೋಷ ಕುಡಾಳ್ಕರ್ ಅವರು ಕರ್ತವ್ಯದಲ್ಲಿ ಕಟ್ಟುನಿಟ್ಟು. ಯಾರ ಮುಲಾಜಿಗೂ ಒಳಗಾಗದ ಸ್ವಭಾವ. ಜತೆಗೆ ಸೈಕ್ಲಿಂಗ್‌ನಲ್ಲಿ ಪದಕಗಳನ್ನು ಬಾಚಿರುವ ಇವರು ಪ್ಯಾರಾ ಒಲಿಂಪಿಕ್‌ನಲ್ಲೂ ಭಾಗವಹಿಸಿ ವಿಶ್ವಮಟ್ಟದಲ್ಲಿ 8ನೇ ಸ್ಥಾನ ಗಳಿಸಿ ಗಮನ ಸೆಳೆದಿದ್ದಾರೆ. ಹಲವು ಸಂಘ- ಸಂಸ್ಥೆಗಳಲ್ಲಿ ತೊಡಗಿಕೊಂಡಿದ್ದಾರೆ.

ಕಾರವಾರ: ರಾಜ್ಯ ಅಬಕಾರಿ ಇಲಾಖೆಯಲ್ಲಿ ಅಧೀಕ್ಷಕರಾಗಿ ಕಾರವಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂತೋಷ ಕುಡಾಳ್ಕರ ದಿವ್ಯಾಂಗರಾಗಿದ್ದರೂ, ಕ್ರೀಡಾಕೂಟ, ಸಮಾಜ ಸೇವೆಯಲ್ಲಿ ತೊಡಗಿಕೊಂಡು ದಿವ್ಯಾಂಗರು ಹೀಗೆಲ್ಲ ಚಟುವಟಿಕೆಯಿಂದ ಇರಬಹುದು ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ. ಕರ್ತವ್ಯದಲ್ಲಿ ಕಟ್ಟುನಿಟ್ಟು. ಯಾರ ಮುಲಾಜಿಗೂ ಒಳಗಾಗದ ಸ್ವಭಾವ. ಜತೆಗೆ ಸೈಕ್ಲಿಂಗ್‌ನಲ್ಲಿ ಪದಕಗಳನ್ನು ಬಾಚಿರುವ ಇವರು ಪ್ಯಾರಾ ಒಲಿಂಪಿಕ್‌ನಲ್ಲೂ ಭಾಗವಹಿಸಿ ವಿಶ್ವಮಟ್ಟದಲ್ಲಿ 8ನೇ ಸ್ಥಾನ ಗಳಿಸಿ ಗಮನ ಸೆಳೆದಿದ್ದಾರೆ. ಹಲವು ಸಂಘ- ಸಂಸ್ಥೆಗಳಲ್ಲಿ ತೊಡಗಿಕೊಂಡಿದ್ದಾರೆ. ಇವರು ಒಂದೇ ಕೈ ಮಾತ್ರ ಉಪಯೋಗಿಸಬಹುದು. ಇನ್ನೊಂದು ಕೈ ಯಾವ ಬಳಕೆಗೂ ಸಿಗದು. ದಿವ್ಯಾಂಗರಾಗಿದ್ದರೂ ಸಾಮಾನ್ಯರೊಂದಿಗೆ ಕ್ರೀಡೆಯಲ್ಲಿ ಪೈಪೋಟಿಗಿಳಿಯುತ್ತಾರೆ. ಸೈಕ್ಲಿಂಗ್ ತುಳಿಯುತ್ತಾರೆ. ಸಾಮಾನ್ಯರೊಂದಿಗೆ ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಇವೆಂಟ್ ಆದ ಟೂರ್ ದೆ ಟೊದಲ್ಲಿ 100 ದಿನಗಳಲ್ಲಿ 5300 ಕಿಮೀ ಕ್ರಮಿಸಿ ಡೈಮಂಡ್ ಪದಕ ಪಡೆದಿದ್ದಾರೆ. 2023ರಲ್ಲಿ 2600 ಕಿಮೀ ಕ್ರಮಿಸಿ ಪ್ಲಾಟಿನಂ ಹಾಗೂ 2024ರಲ್ಲಿ 2502 ಕಿಮೀ ಕ್ರಮಿಸಿ ಬಂಗಾರದ ಪದಕ ಪಡೆದಿದ್ದಾರೆ. ಸಂತೋಷ್ 2022ರಲ್ಲಿ ಕಾರವಾರ ಬೈಸಿಕಲ್ ಕ್ಲಬ್ ಸದಸ್ಯರಾದ ತರುವಾಯ ಮಹಾರಾಷ್ಟ್ರ ಸಾಂಗ್ಲಿಯಲ್ಲಿ 50 ಕಿಮೀ ಸೈಕಲ್ ರೇಸ್‌ನಲ್ಲಿ ಭಾಗವಹಿಸಿ ವಿಶೇಷ ಬಹುಮಾನವನ್ನು ಪಡೆದಿದ್ದಾರೆ. ಸೈಕ್ಲಿಂಗ್‌ನಲ್ಲಿ ಹತ್ತಾರು ಕಡೆ ಸ್ಪರ್ಧಿಸಿ ಯಶಸ್ಸು ಗಳಿಸಿದ್ದಾರೆ.ಮೇ 2022ರಿಂದ ಡಿಸೆಂಬರ್ 2024ರ ವರೆಗೆ ಒಟ್ಟು 20389 ಕಿಮೀ ಸೈಕ್ಲಿಂಗ್ ಮಾಡಿದ್ದಾರೆ. ಅಂದರೆ ಒಟ್ಟು 659 ದಿನ ಸೈಕಲ್ ಚಲಾಯಿಸಿದ್ದು, ಸರಾಸರಿ ಪ್ರತಿದಿನ 31 ಕಿಮೀ ಆಗಿದೆ. 1996ರಲ್ಲಿ ಅಮೆರಿಕದ ಅಟ್ಲಾಂಟಾ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ 100 ಹಾಗೂ 200 ಮೀ. ಉದ್ದ ಜಿಗಿತದಲ್ಲಿ 8ನೇ ಸ್ಥಾನ ಪಡೆದಿದ್ದಾರೆ. ಸಿಡ್ನಿ ಪ್ಯಾರಾ ಒಲಿಂಪಿಕ್ಸ್‌ಗೆ ಆಯ್ಕೆ ಆದರೂ ಭಾಗವಹಿಸಲು ಸಾಧ್ಯವಾಗಲಿಲ್ಲ. ಸರ್ಕಾರಿ ಕೆಲಸಕ್ಕೆ ಸೇರಿದ ನಂತರ ಸಾಮಾನ್ಯರ ವಿಭಾಗದಲ್ಲಿ ರಾಜ್ಯಮಟ್ಟದ ಸರ್ಕಾರಿ ಕ್ರೀಡಾಕೂಟದಲ್ಲಿ ಬಾಗವಹಿಸಿ ಪದಕ ಮತ್ತು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಮೂಲತಃ ಕಾರವಾರದವರಾದ 49 ವರ್ಷದ ಸಂತೋಷ ಕುಡಾಳ್ಕರ ಓದಿದ್ದು ಬಿಎ. ಸದ್ಯ ಕಾರವಾರದ ರಾಜ್ಯ ಅಬಕಾರಿ ಇಲಾಖೆಯಲ್ಲಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಂದೆ ಮೋಹನ ಕುಡಾಳ್ಕರ್, ತಾಯಿ ರಾಧಾ, ಪತ್ನಿ ಸ್ಫೂರ್ತಿ, ಮಗಳು ಚೈತ್ರಾ ಹಾಗೂ ಕುಟುಂಬದವರ ನಿರಂತರ ಪ್ರೋತ್ಸಾಹ ಇವರಿಗಿದೆ.

ಪಹರೆ ವೇದಿಕೆಯ ಸಕ್ರಿಯ ಸದಸ್ಯರಾಗಿ, ತಮ್ಮ ಸಮುದಾಯದ ಶ್ರೀ ದುರ್ಗಾ ದೇವಿ ಹಿಂದೂ ಚಮಗಾರ ಜಾತಿಯ(ಹರಳಯ್ಯ) ಜಿಲ್ಲಾ ಸೇವಾ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ದಿವ್ಯಾಂಗರಾಗಿದ್ದೂ ಸರ್ಕಾರಿ ಸೇವೆಯಲ್ಲಿ ತೊಡಗಿಕೊಂಡು ಕ್ರೀಡೆ, ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ಮೂಲಕ ಸಂತೋಷ ಕುಡಾಲ್ಕರ್ ದಿವ್ಯಾಂಗರು, ಇತರರಿಗೆ ಮಾದರಿಯಾಗಿದ್ದಾರೆ.

ಸತತ ಸಾಧನೆ: ದಿವ್ಯಾಂಗರಲ್ಲಿ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ನಮ್ಮಿಂದ ಏನೂ ಆಗದು ಎಂದು ಕೈಕಟ್ಟಿಕೊಂಡು ಕುಳಿತುಕೊಳ್ಳಬಾರದು. ಸತತ ಸಾಧನೆಯಿಂದ ಗುರಿ ಮುಟ್ಟಲು ಸಾಧ್ಯ. ನನ್ನಿಂದ ಏನೆಲ್ಲ ಸಮಾಜಕ್ಕೆ ಕೊಡಲು ಸಾಧ್ಯವೋ ಅವೆಲ್ಲವನ್ನೂ ನೀಡುವ ಉದ್ದೇಶ ಇದೆ ಎಂದು ದಿವ್ಯಾಂಗ ನೌಕರ ಸಂತೋಷ ಕುಡಾಳ್ಕರ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ