ನಾಳೆ ದಾವಣಗೆರೆಯಲ್ಲಿ ಸಪ್ನ ಬುಕ್ ಹೌಸ್ ಶಾಖೆ ಉದ್ಘಾಟನೆ

KannadaprabhaNewsNetwork | Updated : Dec 12 2024, 12:31 AM IST

ಸಾರಾಂಶ

ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಸಪ್ನ ಬುಕ್ ಹೌಸ್ ಮಾಲೀಕ ನಿತಿನ್ ಶಾ, ನಿಜೇಶ್ ಶಾ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಜನರಲ್ಲಿ ಓದುವ ಸಂಸ್ಕೃತಿ ಬಿತ್ತುತ್ತಾ ಬಂದ ನಾಡಿನ ಪ್ರತಿಷ್ಟಿತ, ದೇಶದ ಅತೀ ದೊಡ್ಡ ಪುಸ್ತಕ ಭಂಡಾರವಾದ ಸಪ್ನ ಬುಕ್ ಹೌಸ್‌ನ ದಾವಣಗೆರೆ ಶಾಖೆ ನಗರದ ಪಿಜೆ ಬಡಾವಣೆಯ ಅಕ್ಕ ಮಹಾದೇವಿ ರಸ್ತೆಯಲ್ಲಿ ಡಿ.13ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆ ಮಾಲೀಕ, ವ್ಯವಸ್ಥಾಪಕ ನಿರ್ದೇಶಕ ನಿತಿನ್ ಶಾ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು, ಸಪ್ನ ಬುಕ್‌ ಹೌಸ್‌ನ 23ನೇ ನೂತನ ಶಾಖೆಯು ನಾಳೆ ಮಧ್ಯಾಹ್ನ 12 ಗಂಟೆಯಿಂದ ಕಾರ್ಯಾರಂಭವಾಗಲಿದ್ದು, ಈ ಮೂಲಕ ತಡವಾಗಿಯಾದರೂ ಎಲ್ಲಾ ಓದುಗರು ಮೆಚ್ಚುವಂತೆ ಸಪ್ನ ಬುಕ್ ಹೌಸ್ ಇಲ್ಲಿನ ಶಾಖೆ ಮೂಲಕ ಮತ್ತಷ್ಟು ಓದುಗರಿಗೆ ಹತ್ತಿರವಾಗುತ್ತಿದೆ ಎಂದರು.

ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ನೂತನ ಶಾಖೆ ಉದ್ಘಾಟಿಸಲಿದ್ದು, ಪ್ರಸಿದ್ಧ ವಿದ್ವಾಂಸ ನಾಡೋಜ ಪ್ರೊ.ಹಂಪ ನಾಗರಾಜಯ್ಯ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ದೀಪಾರಾಧನೆ ಮಾಡುವರು. ದಾವಿವಿ ಕುಲಪತಿ ಪ್ರೊ.ಬಿ.ವಿ.ಕುಂಬಾರ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಶಾಖೆ ಉದ್ಘಾಟನೆ ನಂತರ ಜಿಲ್ಲಾ ಗುರುಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಬಸಾಪುರ ಗ್ರಾಮದ ಬಸವ ಕಲಾ ಲೋಕದ ಅರುಣ ಮತ್ತು ತಂಡ ಸುಗಮ ಸಂಗೀತ ನಡೆಸಿಕೊಡಲಿದೆ ಎಂದು ಅವರು ಹೇಳಿದರು.

ಮೂರು ಮಹಡಿ ಕಟ್ಟಡದಲ್ಲಿ ಇಲ್ಲಿನ ಶಾಖೆ ಕಾರ್ಯಾರಂಭ ಮಾಡಲಿದೆ. ನೂತನ ಶಾಖೆ ಉದ್ಘಾಟನೆ ಹಿನ್ನೆಲೆಯಲ್ಲಿ ಓದುಗರಿಗೆ ಶೇ.10ರಿಂದ 20ರಷ್ಟು ರಿಯಾಯಿತಿ ನೀಡುತ್ತಿದ್ದೇವೆ. ಓದುಗರಿಗೆ ಬೇಕಾದ ಎಲ್ಲಾ ಪುಸ್ತಕಗಳನ್ನು ಒಂದೇ ಕಡೆ ಸಿಗುವಂತೆ ಮಾಡಿ, ಓದುವ ಪ್ರವೃತ್ತಿ ಹೆಚ್ಚಿಸುವ, ಒಂದು ಓದುವ ಬಳಗ ಹುಟ್ಟು ಹಾಕುವ ಕೆಲಸವನ್ನು ತಮ್ಮ ಸಂಸ್ಥೆ ಮಾಡಲಿದೆ. ಕನ್ನಡಿಗರ ಋಣ ಸಂದಾಯ ಮಾಡಲು ಕನ್ನಡ ಪುಸ್ತಕಗಳನ್ನು ಪ್ರಕಟಿಸಿ, ವ್ಯಾಪಕ ಓದುಗರಿಗೆ ತಲುಪಿಸುವ ಸದಾಶಯ ತಮ್ಮ ಸಂಸ್ಥೆಯದ್ದಾಗಿದೆ. ಎಂತಹದ್ದೇ ಪುಸ್ತಕ, ಯಾವುದೇ ದೇಶದ, ಭಾಷೆ ಪುಸ್ತಕವಾಗಿದ್ದರೂ ಒಂದು ವಾರದಲ್ಲಿ ತರಿಸಿಕೊಡುವ ಕೆಲಸ ತಮ್ಮ ಸಂಸ್ಥೆ ಮಾಡುತ್ತದೆ ಎಂದು ಅವರು ತಿಳಿಸಿದರು.

ಸಂಸ್ಥೆಯ ನಿರ್ದೇಶಕ ನಿಜೇಶ್ ಶಾ ಮಾತನಾಡಿ, ಸ್ವಪ್ನ ಕಿಯೋಸ್ಕ್ ಮೂಲಕ ದೇಶ, ವಿದೇಶದಲ್ಲಿ ಸಿಗುವಂತಹ ಪುಸ್ತಕಗಳನ್ನು ಸಹ ಖರೀದಿಸಬಹುದು. ಸಪ್ನ ಬುಕ್‌ ಹಸ್‌ ಜ್ಞಾನಪೀಠ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸುಮಾರು 500 ಕ್ಕೂ ಹೆಚ್ಚು ಲೇಖಕರ 7 ಸಾವಿರಕ್ಕೂ ಅದಿಕ ಪುಸ್ತಕ ಪ್ರಕಟಿಸಿ, ಪುಸ್ತಕಗಳಿಗೆ ಪರ್ಯಾಯ ಹೆಸರಾಗಿ ಸಪ್ನ ಬುಕ್ ಹೌಸ್ ನಿಂತಿದೆ. ಈಗಾಗಲೇ ಬೆಂಗಳೂರು, ಕೊಯಮತ್ತೂರು, ಈರೋಡು, ಬೆಳಗಾವಿ, ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಕಲಬುರಗಿ ಸೇರಿದಂತೆ 22 ಶಾಖೆ ದಾವಣಗೆರೆಯಲ್ಲಿ ತಮ್ಮ ಸಂಸ್ಥೆಯ 23ನೇ ಶಾಖೆ ಕಾರ್ಯಾರಂಭವಾಗುತ್ತಿದೆ ಎಂದರು.

ಈ ವೇಳೆ ಸಪ್ನ ಬುಕ್‌ ಹೌಸ್‌ನ ದೊಡ್ಡೇಗೌಡ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಹಿರಿಯ ರಂಗಕರ್ಮಿ, ಲೇಖಕ ಬಾ.ಮ.ಬಸವರಾಜಯ್ಯ, ನಿವೃತ್ತ ಪ್ರಾಧ್ಯಾಪಕ, ಲೇಖಕ ಪ್ರೊ.ಗಂಗಾಧರಯ್ಯ ಹಿರೇಮಠ, ಲೇಖಕ ಸಿರಿಗೆರೆ ನಾಗರಾಜ, ರಂಗಕರ್ಮಿ ಎಸ್.ಎಸ್.ಸಿದ್ದರಾಜು ಇತರರು ಇದ್ದರು.

Share this article