ಕನ್ನಡಪ್ರಭ ವಾರ್ತೆ ಕುಷ್ಟಗಿ
ಪಟ್ಟಣದ ಗ್ರಾಮ ದೇವತೆ ದ್ಯಾಮವ್ವ ದೇವಿ ಜಾತ್ರಾ ಅಂಗವಾಗಿ ಸಪ್ತ ಭಜನೆ ಹಾಗೂ ನಿರಂತರ ದಾಸೋಹ ನಡೆಸಲಾಗುತ್ತಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪ್ರಸಾದ ಸ್ವೀಕರಿಸುತ್ತಿದ್ದಾರೆ.65 ವರ್ಷಗಳ ನಂತರ ನಡೆಯುತ್ತಿರುವ ಪಟ್ಟಣದ ಆರಾಧ್ಯ ದೇವತೆ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ಹಿನ್ನೆಲೆ ಮಳೆ ಬೆಳೆ ಸಮೃದ್ಧಿಗಾಗಿ ನಿರಂತರವಾಗಿ ಏಳು ದಿನಗಳ ಕಾಲ ಸಪ್ತ ಭಜನೆ ಹಾಗೂ ಅನ್ನಪ್ರಸಾದ ಹಮ್ಮಿಕೊಳ್ಳಲಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳುತ್ತಿದ್ದಾರೆ.
ಸಪ್ತಭಜನೆ:ಏ.10ರಿಂದ ಅಹೋರಾತ್ರಿ ನಿರಂತರವಾಗಿ ಮಕ್ಕಳು ಹಾಗೂ ಹಿರಿಯರು ಶಿವನಾಮ ಸ್ಮರಣೆ ಮಾಡುತ್ತಾ ಭಜನೆ ಮಾಡುತ್ತಿದ್ದಾರೆ. ಪ್ರತಿ ತಂಡಕ್ಕೆ 2 ತಾಸಿನಂತೆ ನಿರಂತರವಾಗಿ ಓಂ ನಮಃ ಶಿವಾಯಃ ಎಂಬ ಮಂತ್ರದೊಂದಿಗೆ ಸಪ್ತ ಭಜನೆಗೆ ಅವಕಾಶ ಕಲ್ಪಿಸಲಾಗಿದೆ. ಈ ಭಜನೆಯಲ್ಲಿ ಪಾಲ್ಗೊಳ್ಳುವಂತಹ ಭಕ್ತಾದಿಗಳು ನೀರಿನ ತೊಟ್ಟಿಯಲ್ಲಿ ನೀರು ಹಾಕಿಕೊಂಡು ಮಡಿಯಿಂದ ಮೇಟಿ ಕಂಬಕ್ಕೆ ಹೋಗಿ ತಾಳ ಹಿಡಿದು ಶಿವನಾಮ ಜಪಿಸಬೇಕು.ಪಟ್ಟಣದ ಭಕ್ತಾದಿಗಳು ಮಾತ್ರವಲ್ಲದೇ ಸುತ್ತಲಿನ ಗ್ರಾಮದವರು ಸಾಮೂಹಿಕ ಸಪ್ತ ಭಜನೆಯಲ್ಲಿ ನಿರತರಾಗುತ್ತಿದ್ದಾರೆ. ರೈತರು ಸಹ ಮಳೆರಾಯನ ಕೃಪೆಗೆ ಸಪ್ತ ಭಜನೆಯಲ್ಲಿ ನಿರತರಾಗಿದ್ದಾರೆ. ಏ.16ರಂದು ಭಜನಾ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವದ ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ಏ.19ರವರೆಗೆ ನಿರಂತರ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ.ಈ ಅಡುಗೆಯನ್ನು ಮಾಡುವ ಹಾಗೂ ಬಡಿಸುವ ಕಾರ್ಯದಲ್ಲಿ ನೂರಾರು ಜನರು ಸೇವಕರಂತೆ ಕೆಲಸ ಮಾಡುತ್ತಿದ್ದು, ಊಟ ಮಾಡುವ ಆವರಣದಲ್ಲಿ ಅನ್ನ ಕೆಡಿಸಬಾರದು, ಶಾಂತತೆ ಕಾಪಾಡಬೇಕು, ಆವರಣ ಸ್ವಚ್ಛತೆ ಇರುವಂತೆ ನೋಡಿಕೊಳ್ಳಬೇಕು ಸೇರಿದಂತೆ ಅನೇಕ ನಿಯಮಗಳ ನಾಮಫಲಕಗಳನ್ನು ನೇತುಹಾಕಲಾಗಿದೆ.
ಭಾನುವಾರ ಅನ್ನ ಸಂತರ್ಪಣೆಗಾಗಿ 5 ಕ್ವಿಂಟಲ್ ಬೂಂದಿ ಮತ್ತು 14 ಕ್ವಿಂಟಲ್ ಅಕ್ಕಿಯನ್ನು ಬಳಸಿ ಮಹಾ ಪ್ರಸಾದ ಮಾಡಲಾಯಿತು. ಸಾವಿರಾರು ಸಂಖ್ಯೆಯ ಭಕ್ತರು ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕಾರ ಮಾಡಿದರು.