ಸರ್ವಪಲ್ಲಿ ರಾಧಾಕೃಷ್ಣ ಸಮುದಾಯ ಭವನ ನಿರ್ಮಾಣ: ಮಶಾಸಕ ಎಚ್.ಸಿ.ಬಾಲಕೃಷ್ಣ

KannadaprabhaNewsNetwork | Published : Aug 2, 2024 12:45 AM

ಸಾರಾಂಶ

ಮಾಗಡಿ ಪಟ್ಟಣದಲ್ಲಿ 7 ಕೋಟಿ ವೆಚ್ಚದಲ್ಲಿ ಈಗಾಗಲೇ ಗುರುಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದು, ಗುರುಭವನದ ಬದಲಾಗಿ ಸರ್ವಪಲ್ಲಿ ರಾಧಾಕೃಷ್ಣ ಹೆಸರಿನಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು. ಮಾಗಡಿಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

-ಶಿಕ್ಷಕರ ಸಂಘದಿಂದ ಪ್ರತಿಭಾ ಪುರಸ್ಕಾರ, ಸಾವಿತ್ರಿಬಾಯಿ ಫುಲೆ ಪ್ರಶಸ್ತಿ, ಶೈಕ್ಷಣಿಕ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಮಾಗಡಿ

ಪಟ್ಟಣದಲ್ಲಿ 7 ಕೋಟಿ ವೆಚ್ಚದಲ್ಲಿ ಈಗಾಗಲೇ ಗುರುಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದು, ಗುರುಭವನದ ಬದಲಾಗಿ ಸರ್ವಪಲ್ಲಿ ರಾಧಾಕೃಷ್ಣ ಹೆಸರಿನಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಪಟ್ಟಣದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಹಾಗೂ ಶೈಕ್ಷಣಿಕ ಬಲವರ್ಧನೆಯಲ್ಲಿ ಶಿಕ್ಷಕರ ಪಾತ್ರ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಗುರುಭವನ ನಿರ್ಮಾಣಕ್ಕೆ ಇಲಾಖೆಯಿಂದ ಕೆಲ ನ್ಯೂನತೆಗಳು ಎದುರಾಗಿದೆ ಎಂದು ತಿಳಿಸಿದರು.

ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗೆ 56 ಸಾವಿರ ಕೋಟಿ ಹಣ ನೀಡುತ್ತಿದೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ನಿಲ್ಲಲಿಲ್ಲ ಬರೀ ಮಾತನಾಡುವ ಪಕ್ಷಕ್ಕೆ ಮಣೆ ಹಾಕಿದರು. ಹಿಂದಿನ ಬಿಜೆಪಿ ಸರ್ಕಾರ 7ನೇ ವೇತನ ಆಯೋಗ ಜಾರಿ ಮಾಡಬಹುದಿತ್ತು. ಆದರೆ, ಅವರು ಶಿಕ್ಷಕರ ಪರವಾಗಿ ನಿಲ್ಲಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಕ್ಷಕರ ಪರವಾಗಿ ನಿಂತು ನಿಮ್ಮ ಬೇಡಿಕೆ ಈಡೇರಿಸಿದರು. ಆದರೂ ನೀವು ನಮ್ಮ ಪರ ನಿಲ್ಲಲಿಲ್ಲ ಎಂಬುದೇ ಬೇಸರದ ಸಂಗತಿಯಾಗಿದೆ ಎಂದರು.

ಹೆಣ್ಣು ಮಕ್ಕಳಿಗೆ ಶಿಕ್ಷಣ ನಿರಾಕರಿಸಿದ್ದ ಕಾಲಘಟ್ಟದಲ್ಲಿ ಸಾವಿತ್ರಿಬಾಯಿ ಫುಲೆ ಶೋಷಿತರಿಗೆ ಅಕ್ಷರದ ಬೆಳಕು ನೀಡುವ ಮೂಲಕ ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಮಹಿಳೆಯರ ಮೇಲಿನ ಧಾರ್ಮಿಕ ಮತ್ತು ಸಾಮಾಜಿಕ ಶೋಷಣೆಗಳನ್ನು ಶಿಕ್ಷಣದ ಮೂಲಕ ತೊಡೆದು ಹಾಕಲು ಶ್ರಮಿಸಿದರು. ಹೆಣ್ಣು ಮಕ್ಕಳಿಗೆ ಶಿಕ್ಷಣದ ಹಕ್ಕನ್ನು ಕಲ್ಪಿಸಲು ಸ್ವತಃ ಮಹಿಳಾ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದ ಧೀಮಂತ ಮಹಿಳೆ ಸಾವಿತ್ರಬಾಯಿ ಅವರನ್ನು ಗೌರವದಿಂದ ಸ್ಮರಿಸಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿರುವ ಸಮಸ್ಯೆಗಳ ಹಕ್ಕೊತ್ತಾಯಕ್ಕಾಗಿ ಆ.12ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಎಲ್ಲಾ ಶಿಕ್ಷಕರು ಭಾಗವಹಿಸಲು ಮನವಿ ಮಾಡಿದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ತಾಲೂಕಿನ ಶಿಕ್ಷಕರ 49 ಮಕ್ಕಳಿಗೆ ಪ್ರತಿಭಾ ಪುರಸ್ಕಾರ, 68 ಅತ್ಯುತ್ತಮ ಮಹಿಳಾ ಶಿಕ್ಷಕರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಬಿಇಒ ಚಂದ್ರಶೇಖರ್, ಶಿಕ್ಷಕರ ಸಂಘದ ರಾಜ್ಯ, ಜಿಲ್ಲಾ, ತಾಲೂಕು ಪದಾಧಿಕಾರಿಗಳು, ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ರಸ್ತೆಗೆ ಸರ್ವಪಲ್ಲಿ ರಾಧಾಕೃಷ್ಣ ಹೆಸರಿಗೆ ಮನವಿ

ಮಾಗಡಿ ಪಟ್ಟಣದ ಹೊಸಪೇಟೆ ವೃತ್ತದಿಂದ ಎನ್.ಇ.ಎಸ್ ವೃತ್ತದವರೆಗಿನ ರಸ್ತೆಗೆ ಸರ್ವಪಲ್ಲಿ ರಾಧಾಕೃಷ್ಣ ಹೆಸರನ್ನು ನಾಮಕರಣ ಮಾಡಬೇಕೆಂದ ಶಿಕ್ಷಕರ ಸಂಘದ ಪದಾಧಿಕಾರಿಗಳು ಶಾಸಕರಲ್ಲಿ ಮನವಿ ಮಾಡಿದರು.

Share this article