ಲೋಕ ಅದಾಲತ್‌ನಲ್ಲಿ ಮತ್ತೆ ಒಂದಾದ ಸತಿಪತಿ

KannadaprabhaNewsNetwork |  
Published : Mar 21, 2024, 01:05 AM IST
ಶಹಾಪುರ ನಗರದ ಹೆಚ್ಚುವರಿ ನ್ಯಾಯಾಲಯದಲ್ಲಿ ಲೋಕ ಅದಾಲತ್‌ ಕಾರ್ಯಕ್ರಮದಲ್ಲಿ ಸತಿಪತಿಗಳು ಒಂದಾಗಿ ಪರಸ್ಪರ ಹಾರ ಬದಲಾಯಿಸಿದರು. | Kannada Prabha

ಸಾರಾಂಶ

ಶಹಾಪುರದ ಹೆಚ್ಚುವರಿ ನ್ಯಾಯಾಲಯದಲ್ಲಿ ಲೋಕ ಅದಾಲತ್‌ ಕಾರ್ಯಕ್ರಮದಲ್ಲಿ ಸತಿಪತಿಗಳು ಒಂದಾಗಿ ಪರಸ್ಪರ ಹಾರ ಬದಲಾಯಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ನನ್ನ ಪತಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಜೀವನಾಂಶ ನೀಡಿ ಎಂದು ನ್ಯಾಯಾಲಯದ ಮೊರೆ ಹೋಗಿದ್ದ ಪತ್ನಿ. ಕೊನೆಗೆ ನ್ಯಾಯಾಧೀಶರು ತಿಳಿ ಹೇಳಿದ್ದಕ್ಕೆ, ಸತಿ-ಪತಿ ಒಪ್ಪಿಕೊಂಡು, ಲೋಕ್‌ ಅದಾಲತ್‌ ಕಾರ್ಯಕ್ರಮದಲ್ಲಿ ಪರಸ್ಪರ ಹಾರ ಬದಲಾಯಿಸುವ ಮೂಲಕ ಮತ್ತೆ ಬಾಳ ಬಂಡಿ ಎಳೆಯಲು ಮುಂದಾದರು. ಇದಕ್ಕೆ ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲರು ಸಾಕ್ಷಿಯಾದರು.

ಎಂಟು ವರ್ಷದ ಹಿಂದೆ ಮುಡಬೂಳ ಗ್ರಾಮದ ರೇಣುಕಾ ಎನ್ನುವರ ಜೊತೆ ವನದುರ್ಗ ಗ್ರಾಮದ ಲಕ್ಷ್ಮಣ ಹುಣಸಿಗಿಡ ಅವರ ಸಂಗಡ ಮದುವೆಯಾಗಿತ್ತು. ದಾಂಪತ್ಯದಲ್ಲಿ ತುಸು ಭಿನ್ನಾಭಿಪ್ರಾಯ ಬಂದು ಇಬ್ಬರು ಪರಸ್ಪರ ದೂರ ಉಳಿದುಕೊಂಡಿದ್ದರು. ನನ್ನ ಪತಿ ನಿಷ್ಕಾಳಜಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೇಣುಕಾ ನ್ಯಾಯಾಲಯಕ್ಕೆ ಪ್ರತಿ ತಿಂಗಳು 5 ಸಾವಿರ ಜೀವನಾಂಶ ನೀಡುವಂತೆ ಅರ್ಜಿ ಸಲ್ಲಿಸಿದ್ದರು ಎನ್ನುತ್ತಾರೆ ರೇಣುಕಾಳ ಪರ ವಕೀಲ ಎಂ.ಎನ್. ಪೂಜಾರಿ.

ನ್ಯಾಯಾಧೀಶ ಬಸವರಾಜ ಅವರು, ಹಿರಿಯ ಸ್ಥಾನದಲ್ಲಿ ನಿಂತು ಸಂಸಾರದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರುತ್ತವೆ. ಸರಿಪಡಿಸಿಕೊಂಡು ಇಬ್ಬರು ಮುನ್ನಡೆಯಬೇಕು. ದ್ವೇಷ ಹಾಗೂ ಸ್ವಾಭಿಮಾನದಿಂದ ಏನು ಸಾಧಿಸಲು ಸಾಧ್ಯವಿಲ್ಲ ಎಂದು ಇಬ್ಬರಿಗೂ ತಿಳಿ ಹೇಳಿದಾಗ, ನ್ಯಾಯಾಧೀಶರ ಸಲಹೆ ಒಪ್ಪಿಕೊಂಡು ಒಂದಾಗಿ ಬಾಳಲು ಮುಂದಾದರು ಎಂದು ಲಕ್ಷ್ಮಣ ಪರ ವಕೀಲ ರಾಮಣ್ಣಗೌಡ ಕೊಲ್ಲೂರ ತಿಳಿಸಿದರು.

ನಂತರ ನ್ಯಾಯಾಧೀಶರ ಸಮ್ಮುಖದಲ್ಲಿ ಇಬ್ಬರು ಪರಸ್ಪರ ಹಾರ ಬದಲಾಯಿಸಿಕೊಂಡು ಸಿಹಿ ಹಂಚಿಕೊಂಡರು.

ನ್ಯಾಯಾಲಯದ ಶಿರಸ್ತೇದಾರ ಪ್ರಕಾಶ ಪಾಟೀಲ್, ರಿಜ್ವಾನ ಅರಿಕೇರಿ, ವಕೀಲರಾದ ಉಮೇಶ ಕುಲರ‍್ಣಿ, ಸತ್ಯಮ್ಮ ಹೊಸಮನಿ, ಶಿವಶರಣಪ್ಪ ಭಾಗವಹಿಸಿದ್ದರು.

2,527 ಪ್ರಕರಣ ಇತ್ಯರ್ಥ:

ಶಹಾಪುರ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ ಕಾರ್ಯಕ್ರಮದಲ್ಲಿ ರಾಜೀ ಸಂಧಾನದ ಮೂಲಕ ತಾಲೂಕಿನ ಮೂರು ನ್ಯಾಯಾಲಯಗಳಲ್ಲಿನ ಪ್ರಕರಣ ಸೇರಿ ಒಟ್ಟು 2,527 ಪ್ರಕರಣ ಇತ್ಯರ್ಥಪಡಿಸಿದೆ ಎಂದು ನ್ಯಾಯಾಲಯದ ಶಿರಸ್ತೇದಾರರು ತಿಳಿಸಿದ್ದಾರೆ.

ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಸಿದ್ದರಾಮ ಟಿ.ಪಿ. ಅವರ ಸಮ್ಮುಖದಲ್ಲಿ ಲಘು ಪ್ರಕರಣ, ಜನನ ಮರಣ ಪ್ರಕರಣ, ಮೋಟಾರ ವಾಹನ ಕಾಯ್ದೆ ಸೇರಿ ಒಟ್ಟು 410 ಪ್ರಕರಣಗಳು ಹಾಗೂ ₹2.42 ಕೋಟಿ ಸಂದಾಯವಾಗಿದೆ.

ಅದರಂತೆ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಶೋಭಾ ಸಮ್ಮುಖದಲ್ಲಿ 1,047 ಪ್ರಕರಣ ಹಾಗೂ ₹32.89 ಲಕ್ಷ ಹಣ ಸಂದಾಯವಾಗಿದೆ. ಅಲ್ಲದೆ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಸಮ್ಮುಖದಲ್ಲಿ 1,070 ಪ್ರಕರಣ ಮತ್ತು ₹5.29 ಲಕ್ಷ ರು.ಗಳು ಹಣ ಸಂದಾಯವಾಗಿದೆ ಎಂದು ನ್ಯಾಯಾಲಯದ ಶಿರಸ್ತೇದಾರ ಪ್ರಕಾಶ ಪಾಟೀಲ್ ಮಾಹಿತಿ ನೀಡಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ