ಬಸವರಾಜ ಹಿರೇಮಠ
ಮುಂಗಾರು ಬೆಳೆಗೆ ಕೈ ಕೊಟ್ಟಿದ್ದ ಮಳೆ ಇದೀಗ ಹಿಂಗಾರು ಹಂಗಾಮಿನ ಮೇಲೂ ಕಣ್ಣಿಟ್ಟಿದೆ. ಹಿಂಗಾರು ಬಿತ್ತನೆ ಸಮಯದಲ್ಲಾಗಿದ್ದ ಒಂದೇ ಒಂದು ಮಳೆ ಹೊರತು ಪಡಿಸಿ ಮತ್ತೆ ಮಳೆಯಾಗದಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ನೀರಾವರಿ ವ್ಯವಸ್ಥೆ ಇರುವ ರೈತರು ಬೆಳೆ ಉಳಿಸಿಕೊಳ್ಳಲು ಒಂದೆರೆಡು ಬಾರಿ ನೀರು ಕೊಟ್ಟಿದ್ದು, ಒಣಬೇಸಾಯ ರೈತರು ಕಂಗಾಲಾಗಿದ್ದಾರೆ. ಈ ಮಧ್ಯೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಬಾರದು ಎಂದು ಜಿಲ್ಲಾಡಳಿತ ಕೆರೆಗಳಿಗೆ ನೀರು ತುಂಬಿಸಲು ಕಾಲುವೆಯಲ್ಲಿ ನೀರು ಹರಿಸಿದ್ದು, ರೈತರು ಕುಡಿಯುವ ನೀರಿನ ಜತೆಗೆ ಬೆಳೆ ಉಳಿಸಿಕೊಳ್ಳಲು ಬರೀ ಐದು ದಿನ ಅವಕಾಶ ಕೊಡಿ ಎಂದು ಜಿಲ್ಲಾಡಳಿತವನ್ನು ಅಂಗಲಾಚುತ್ತಿದ್ದಾರೆ.ಆದರೆ, ಕುಡಿಯುವ ನೀರಿನ ಉದ್ದೇಶಕ್ಕೆ ಬಿಟ್ಟಿರುವ ನೀರನ್ನು ಯಾವುದೇ ಕಾರಣಕ್ಕೂ ಬೆಳೆಗೆ ಹಾಯಿಸುವಂತಿಲ್ಲ ಎಂದು ಜಿಲ್ಲಾಡಳಿತವು ಸೂಚನೆ ನೀಡಿದ್ದು, ಕಣ್ಣ ಮುಂದೆ ನೀರು ಹರಿದರೂ ಬೆಳೆಗೆ ಹಾಯಿಸುವಂತಿಲ್ಲ ಎಂದು ಕಾಲುವೆ ಸುತ್ತಲಿನ ಭಾಗದ ರೈತರು ಒಣಗುತ್ತಿರುವ ಬೆಳೆ ನೋಡಿ ಮಮ್ಮಲ ಮರಗುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ನ.16ರಿಂದ ಮಲಪ್ರಭಾ ಬಲದಂಡೆ ಮತ್ತು ಎಡದಂಡೆ ಕಾಲುವೆಗಳಿಗೆ 10 ದಿನ ನೀರು ಹರಿಸಲಾಗುತ್ತಿದೆ. ಇನ್ನೂ ಕಾಲುವೆ ನೀರನ್ನು ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಗಳಿಗೆ ಬಳಸಬಾರದು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಜಿಲ್ಲಾಡಳಿತದ ಈ ನಿರ್ಧಾರವೇ ರೈತರನ್ನು ಚಿಂತೆಗೀಡು ಮಾಡಿದೆ. ಹಿಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಸಾಲ ಮಾಡಿ ಬಿತ್ತನೆ ಮಾಡಿರುವ ಬೆಳೆಗಳು ಒಣಗುವ ಹಂತ ತಲುಪಿವೆ. ಜಾನುವಾರುಗಳಿಗೂ ಮೇವಿನ ಕೊರತೆ ಎದುರಾಗುವ ಆತಂಕವಿದೆ. ಕನಿಷ್ಠ ಐದು ದಿನಗಳಾದರೂ ಕೃಷಿ ಭೂಮಿಗೆ ನೀರು ಹರಿಸಲು ಅವಕಾಶ ನೀಡಿದರೆ ಬೆಳೆ ಉಳಿಸಿಕೊಳ್ಳಬಹುದು ಎಂಬುದು ರೈತರ ಆಗ್ರಹ.
ಒಟ್ಟಿನಲ್ಲಿ ಬೆಳೆ ಉಳಿಸಿಕೊಳ್ಳಲು ಕೃಷಿ ಭೂಮಿಗೂ ನೀರು ಕೇಳುತ್ತಿರುವ ರೈತರ ಸಂಕಷ್ಟಕ್ಕೆ ಇತ್ತೀಚೆಗೆ ನಡೆದ ಕೆಡಪಿ ಸಭೆಯಲ್ಲಿ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ರೈತರ ಬೆಳೆಗೂ ನೀಡುವ ಬಿಡುವ ಕುರಿತು ಧ್ವನಿ ಎತ್ತಿದ್ದರು. ಆದರೆ, ಮಲಪ್ರಭಾದಲ್ಲಿ ಇರುವ ನೀರಿನ ಲಭ್ಯತೆ ಮೇಲೆ ಕುಡಿಯುವ ನೀರು ಮತ್ತು ಕೃಷಿ ಎರಡನ್ನೂ ಸಮತೋಲನಗೊಳಿಸಲು ಸಾಧ್ಯವೆ? ಎಂಬುದೇ ಪ್ರಶ್ನೆಯಾಗಿದೆ. ಶೇ.40ರಷ್ಟು ಬಿತ್ತನೆ..