ಬಳ್ಳಾರಿ: ಅನಿವಾಸಿ ಭಾರತೀಯರಾಗಿರುವ ಸಾಹಿತಿ ಡಾ. ಗುರುಪ್ರಸಾದ ಕಾಗಿನೆಲೆ ಅವರ ನೂತನ ಕಾದಂಬರಿ ‘ಸತ್ಕುಲ ಪ್ರಸೂತರು’ ಶ್ರೇಣಿಕೃತ ಸಮಾಜ ವ್ಯವಸ್ಥೆಯ ಮನಸ್ಥಿತಿಯನ್ನು ಉಗ್ಗಡಿಸುವ ಕಥನವಾಗಿದೆ ಎಂದು ಬಳ್ಳಾರಿಯ ಹಿರಿಯ ಸಂಶೋಧಕ, ಸಾಹಿತಿ ಡಾ. ಚಿಕ್ಕ್ಯಾಟೆಮಠದ ವೀರಭದ್ರಯ್ಯ ಪ್ರತಿಪಾದಿಸಿದರು.
ಲೇಖಕ ಸ್ವಾಮಿ ಬೇಗೂರ್ ಮಾತನಾಡಿ, ‘ಸತ್ಕುಲ ಪ್ರಸೂತರು’ ಒಂದು ವಿಭಿನ್ನವಾದ ಕಾದಂಬರಿ. ಇದರಲ್ಲಿ ವಿವಿಧ ಧರ್ಮಗಳ ನಡುವಿನ ಸೂಕ್ಷ್ಮಸಂವೇದನೆಯ ಸಂಗತಿಗಳಿವೆ. ಮನುಷ್ಯ ಜಾತಿ, ಧರ್ಮ, ವರ್ಣ, ವರ್ಗದ ಚೌಕಟ್ಟನ್ನು ಮೀರಿ ಓರ್ವ ಶ್ರೇಷ್ಠ ಮನುಜನಾಗಿ ‘ಮಾನವ ಧರ್ಮ’ವನ್ನು ಎತ್ತಿ ಹಿಡಿಯಬೇಕೆನ್ನುವ ಅಂಶವು ಓದುಗರ ಅನುಭವಕ್ಕೆ ಬರುತ್ತದೆ ಎಂದರು.
ಕನ್ನಡ ಓದುಗರ ಕಟ್ಟೆಯ ಹರೀಶ ಕೃಷ್ಣಪ್ಪ ಮಾತನಾಡಿ, ಇಲ್ಲಿ ಲೇಖಕರೇ ಒಂದು ಪಾತ್ರವಾಗಿ, ಆ ಪಾತ್ರವೇ ಸಂಪೂರ್ಣ ಕಾದಂಬರಿಯ ನಿರೂಪಣೆಯನ್ನು ಮಾಡುತ್ತದೆ. ಓದಿದಷ್ಟೂ ಅದರಲ್ಲಿರುವ ವಿಷಯಗಳು, ಪಾತ್ರಗಳು ಹಾಗೂ ಸನ್ನಿವೇಶಗಳು ಗಮನಸೆಳೆಯುತ್ತವೆ ಎಂದರು.ಕಾದಂಬರಿಯ ಲೇಖಕ ಡಾ. ಗುರುಪ್ರಸಾದ್ ಮಾತನಾಡಿ, ‘ಸತ್ಕುಲ ಪ್ರಸೂತರು’ ಸಂಪೂರ್ಣ ಕಾಲ್ಪನಿಕ ಕಾದಂಬರಿ. ಇಲ್ಲಿ ಲೇಖಕನೇ ನಿರೂಪಕನಾಗಿ ಕಥೆಯನ್ನು ಕೊನೆಯವರೆಗೆ ತೆಗೆದುಕೊಂಡು ಹೋಗುತ್ತಾನೆ. ಓದುಗನ ತನ್ಮಯತೆಯಲ್ಲಿ ಅದು ತನ್ನದೇ ಕಥೆ ಎಂಬ ಅನುಭವವಾಗುತ್ತದೆ. ಕಾದಂಬರಿಯ ಎಲ್ಲ ಪಾತ್ರ ಮತ್ತು ಸನ್ನಿವೇಶಗಳನ್ನು ಕಾಲ್ಪನಿಕವಾಗಿ ಹೆಣೆಯಲಾಗಿದೆ ಎಂದರು.
ಮಿನ್ನೆಸೊಟ ಸಂಗೀತ ಕನ್ನಡ ಕೂಟದ ಅಧ್ಯಕ್ಷ ರಮೇಶ್ ಮುನಿಸ್ವಾಮಿ ಮಾತನಾಡಿದರು. ಅನಿತಾ ಮೋಹನ್ ಮಠದ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಬಳಗದ ಅಧ್ಯಕ್ಷ ಅರವಿಂದ ಝಳಕಿ ಅವರು ಲೇಖಕರಾದ ಡಾ. ಗುರುಪ್ರಸಾದ್ ಕಾಗಿನೆಲೆ ಮತ್ತು ಡಾ. ಚಿಕ್ಕ್ಯಾಟೆಮಠದ ವೀರಭದ್ರಯ್ಯ ಅವರನ್ನು ಸನ್ಮಾನಿಸಿದರು. ಕನ್ನಡ ಓದುಗರ ಕಟ್ಟೆ ಹಿರಿಯ ಸದಸ್ಯ ಮೋಹನ್ ಮಠದ ವಂದಿಸಿದರು. ಉಮಾ ಹರೀಶ್ ಕೃಷ್ಣಪ್ಪ, ನಳಿನಿ ಸ್ವಾಮಿ ಬೇಗೂರು, ಅನಿತಾ ಮೋಹನ ಮಠದ, ಆಶೀಶ್ ಲೀಲಾ ಕುಂಬಾರ, ಪದ್ಮನಾಭನ್ ಗೋವಿಂದನ್, ಸುರೇಶ್ ನಿಜಗುಣ, ದಿನೇಶ್ ಪಟ್ಟಣಶೆಟ್ಟಿ, ಮಮತಾ ಸುರೇಶ್ ಪೂಜಾರಿ ಇದ್ದರು.