ನಶಿಸುತ್ತಿರುವ ಗ್ರಾಮೀಣ ಸೊಗಡನ್ನು ಉಳಿಸಿ, ಬೆಳೆಸಿ

KannadaprabhaNewsNetwork | Published : Dec 25, 2023 1:30 AM

ಸಾರಾಂಶ

ಗ್ರಾಮೀಣ ಸೊಗಡನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಪ್ರತಿಯೊಬ್ಬರೂ ಮಾಡಬೇಕಿದೆ. ದೇಶದ ಬೆನ್ನೆಲುಬಾಗಿರುವ ರೈತ ಹಾಗೂ ದೇಶವನ್ನು ರಕ್ಷಿಸುವ ಸೈನಿಕರು ನಮಗೆ ಸ್ಫೂರ್ತಿಯಾಗಬೇಕು.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟಆಧುನಿಕತೆಯ ಸ್ಪರ್ಶದಿಂದ ಗ್ರಾಮೀಣ ಕಲೆ, ಸಂಸ್ಕೃತಿ ಹಾಗೂ ಆಟೋಟಗಳು ನಶಿಸುತ್ತಿವೆ. ಆದ್ದರಿಂದ ಗ್ರಾಮೀಣ ಸೊಗಡನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಪ್ರತಿಯೊಬ್ಬರೂ ಮಾಡಬೇಕಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಅಭಿಪ್ರಾಯಪಟ್ಟರು.

ತಾಲೂಕಿನ ಬಶೆಟ್ಟಹಳ್ಳಿ ಕ್ರಾಸ್ ನಲ್ಲಿರುವ ಶ್ರೀ ಸಾಯಿ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮೋತ್ಸವ ಹಾಗೂ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿದರು.

ಕೃಷಿಗೆ ತಂತ್ರಜ್ಞಾನ ಬಳಸಿ:

ದೇಶದ ಬೆನ್ನೆಲುಬಾಗಿರುವ ರೈತ ಹಾಗೂ ದೇಶವನ್ನು ರಕ್ಷಿಸುವ ಸೈನಿಕರು ನಮಗೆ ಸ್ಫೂರ್ತಿಯಾಗಬೇಕು. ರೈತರು ಕೃಷಿಯಲ್ಲಿ ಆಧುನಿಕತೆಯನ್ನು ಮೈಗೂಡಿಸಿಕೊಂಡು ಕಾಲ ಕಾಲಕ್ಕೆ ತಜ್ಞರ ಸಲಹೆ ಸೂಚನೆಯನ್ನು ಪಡೆದು ಉತ್ತಮ ಇಳುವರಿ ಪಡೆಯುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕೆಂದರು.

ಶಾಸಗಿ ಶಾಲೆಗಳ ಸಂಘದ ತಾಲೂಕು ಅಧ್ಯಕ್ಷ ವಿಸ್ಡಂ ನಾಗರಾಜ್ ಮಾತನಾಡಿ, ಶಿಕ್ಷಕರು ಹಾಗೂ ಪೋಷಕರು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಸೂಕ್ತ ಪ್ರೋತ್ಸಾಹ ನೀಡಿದಲ್ಲಿ ಅವರು ದೇಶದ ಆಸ್ತಿಯಾಗಬಲ್ಲರು ಎಂದು ಹೇಳಿದರು.

ಜಾನಪದ ಕಲಾವಿದ ಕವಿ ಹನಿಯೂರು ಚಂದ್ರೇಗೌಡ, ನಟಿ ಅಪೂರ್ವಶ್ರೀ ಮಾತನಾಡಿದರು. ಈ ಸಂದರ್ಭದಲ್ಲಿ ಬಶೆಟ್ಟಹಳ್ಳಿ ಅಧ್ಯಕ್ಷ ಡಿ.ವಿ.ವೆಂಕಟೇಶಪ್ಪ, ತಾ.ಪಂ ಮಾಜಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಇಸಿಒ ಭಾಸ್ಕರಗೌಡ, ವಿದ್ಯಾ ಸಂಸ್ಥೆಯ ಅಧ್ಯಕ್ಷೆ ದೀಪ ಮಂಜುನಾಥ್, ಕಾರ್ಯದರ್ಶಿ ಎಂ.ಮಂಜುನಾಥ್, ಅರುಣ್ಕುಮಾರ್, ನಾಗರಾಜ್, ಲಕ್ಷ್ಮೀ ನಾರಾಯಣರೆಡ್ಡಿ, ತಾದೂರು ರಘು ಇದ್ದರು.

ನೇಗಿಲು ಹೊತ್ತ ಶಾಸಕ:

ಕಾರ್ಯಕ್ರಮದಲ್ಲಿ ನೇಗಿಲು ಹಾಗೂ ಎತ್ತುಗಳ ಹೆಗಲ ಮೇಲೆ ಹಾಕುವ ಕಾಡಿ ಮರಕ್ಕೆ ಮೊದಲ ಪೂಜೆಯನ್ನು ಸಲ್ಲಿಸಿದ ಶಾಸಕ ರವಿಕುಮಾರ್, ನೇಗಿಲನ್ನು ಭುಜದ ಮೇಲೆ ಹೊತ್ತು ಸಾಗುವ ಮೂಲಕ ರೈತ ದಿನಾಚರಣೆಗೆ ಮೆರುಗನ್ನು ತಂದುಕೊಟ್ಟರು. ಬಳಿಕ ಶಾಲಾ ಆವರಣದಲ್ಲಿ ಸಿರಿಧಾನ್ಯಗಳ ರಾಶಿಗೆ ಪೂಜೆ ಸಲ್ಲಿಸಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹಳ್ಳಿ ಜೀವನ ನೆನಪಿಸಿದ ಗ್ರಾಮೋತ್ಸವ:

ಗುಡಿಸಲುಗಳ ಸಾಲು, ಬೀಸುವ ಕಲ್ಲಿನಲ್ಲಿ ಧಾನ್ಯ ಬೀಸುವು, ಮನೆಯ ಜಗುಲಿಯಲ್ಲಿ ಬೆಣ್ಣೆಯನ್ನು ಕಡೆಯುತ್ತಿರುವುದು, ಬಾವಿಯಲ್ಲಿ ನೀರು ಸೇದುವುದು, ಮಡಿಕೆಗಳ ತಯಾರಿಕೆ, ಕುಡಿಕೆಗಳ ಸಾಲು ಪಕ್ಕದ ಮೇದಾರ ಓಣಿಯಲ್ಲಿ ಬುಟ್ಟಿ ಹೆಣೆಯುವುದು, ಕಿರಾಣಿ ಅಂಗಡಿಗಳ ಸಾಲು ಇಸ್ತ್ರಿ ಅಂಗಡಿ, ದೇವಾಲಯ ಹೀಗೆ ಅಪ್ಪಟ ಗ್ರಾಮೀಣ ಸೊಗಡಿನ ವಾತಾವರಣ ಶಾಲಾ ಆವರಣದಲ್ಲಿ ಮಕ್ಕಳಿಂದ ಕೈಗೊಳ್ಳಲಾಗಿತ್ತು.

ಅಲ್ಲದೆ ಮದುವೆ ಮಂಟಪ, ಕಾಳು ಹುರಿಯುವುದು, ಗ್ರಾಮ ದೇವತೆಗಳ ಮೆರವಣಿಗೆ, ಗೋಲಿ, ಲಗೋರಿ, ಬುಗುರಿ, ಚಿನ್ನಿದಾಂಡು, ಕುಂಟೆಬಿಲ್ಲೆ, ಪಾಂಡಿ ಮನೆ, ಕಬಡ್ಡಿ, ಅಳಗುಳಿಮನೆ, ಚೌಕಾಬಾರ, ತೊಗಲು ಗೊಂಬೆಯಾಟ, ಕೊರವಂಜಿ ದೃಶ್ಯಗಳನ್ನು ಮಕ್ಕಳು ನಡೆಸಿಕೊಟ್ಟರು. ಇನ್ನು ಮಕ್ಕಳ ಸಂತೆ, ಆಹಾರ ಪ್ರದರ್ಶನ, ವಿಜ್ಞಾನ ವಸ್ತು ಪ್ರದರ್ಶನ, ಸುಗ್ಗಿಯ ಸಂಭ್ರಮ ಗಮನ ಸೆಳೆದವು.

Share this article