ಅಂಗನವಾಡಿ ಉಳಿಸಿ ಚಳುವಳಿ: ಸರ್ಕಾರಕ್ಕೆ ಮನವಿ

KannadaprabhaNewsNetwork |  
Published : May 30, 2026, 02:15 AM IST
ಫೋಟೋ : ೨೯ಕೆಎಂಟಿ_ಎಂಎವೈ_ಕೆಪಿ೧ : ಹೊಸದಾಗಿ ಎಲ್‌ಕೆಜಿ ತರಗತಿಗಳನ್ನು ಆರಂಭಿಸದಂತೆ ಮನವಿಯನ್ನು ಗ್ರೇಡ್ ೨ ತಹಸೀಲ್ದಾರ ಸತೀಶ ಗೌಡ ಅವರಿಗೆ ಸಲ್ಲಿಸಲಾಯಿತು. ರಾಮನಾಥ ಶಾನಭಾಗ, ಗಣೇಶ ಅಂಬಿಗ, ರಾಜು ಮಾಸ್ತಿಹಳ್ಳ, ಗಜಾನನ ನಾಯ್ಕ, ಎಸ್.ಟಿ.ನಾಯ್ಕ, ಸವಿತಾ ತನ್ಮಡಗಿ, ಶಾಂತಾರಾಮ ನಾಯ್ಕ. ಶೋಭಾ ಮಡಿವಾಳ, ಜ್ಯೋತಿ ನಾಯ್ಕ ಇತರರು ಇದ್ದರು.   | Kannada Prabha

ಸಾರಾಂಶ

ರಾಜ್ಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ ತರಗತಿಗಳನ್ನು ಆರಂಭಿಸುವ ಮೂಲಕ ಅಂಗನವಾಡಿ ಕೇಂದ್ರಗಳನ್ನು ಮುಚ್ಚುವ ಅನಿವಾರ್ಯತೆ ಸೃಷ್ಟಿಸಲಾಗುತ್ತಿದೆ ಎಂದು ಹಲವು ಸಂಘಟನೆಗಳು ಶುಕ್ರವಾರ ತಾಲೂಕು ಸೌಧದಲ್ಲಿ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸುವ ಮೂಲಕ ಅಂಗನವಾಡಿ ಉಳಿಸಿ ಚಳುವಳಿ ಆರಂಭಿಸಿದರು

ಕನ್ನಡಪ್ರಭ ವಾರ್ತೆ ಕುಮಟಾ

ರಾಜ್ಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ ತರಗತಿಗಳನ್ನು ಆರಂಭಿಸುವ ಮೂಲಕ ಅಂಗನವಾಡಿ ಕೇಂದ್ರಗಳನ್ನು ಮುಚ್ಚುವ ಅನಿವಾರ್ಯತೆ ಸೃಷ್ಟಿಸಲಾಗುತ್ತಿದೆ ಎಂದು ಹಲವು ಸಂಘಟನೆಗಳು ಶುಕ್ರವಾರ ತಾಲೂಕು ಸೌಧದಲ್ಲಿ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸುವ ಮೂಲಕ ಅಂಗನವಾಡಿ ಉಳಿಸಿ ಚಳುವಳಿ ಆರಂಭಿಸಿದರು.

ಸಾಮಾಜಿಕ ಹೋರಾಟಗಾರ ರಾಮನಾಥ ಶಾನಭಾಗ, ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಒಕ್ಕೂಟದ ಗಣೇಶ ಅಂಬಿಗ ಇತರರು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಈಗಲೂ ಕೊಠಡಿ ಇತರ ಸಾಕಷ್ಟು ಮೂಲಸೌಕರ್ಯಗಳ ಕೊರತೆ ಇದೆ. ಕಳೆದ ವರ್ಷ ಆರಂಭಿಸಿದ ಎಲ್‌ಕೆಜಿ ತರಗತಿಗಳಿಗೇ ಪೂರಕ ವ್ಯವಸ್ಥೆಗಳಿಲ್ಲ. ಈಗ ಮತ್ತೆ ಏನೂ ವ್ಯವಸ್ಥೆಯಿಲ್ಲದೇ ಕನಿಷ್ಟ ಮಕ್ಕಳ ಆಟಿಕೆ ಸಾಮಗ್ರಿಗಳೂ ಇಲ್ಲದೇ ಎಲ್‌ಕೆಜಿ ತರಗತಿಗಳನ್ನು ತೆರೆಯಲು ಹೊರಟಿದ್ದೀರಿ, ಹೆಗಡೆಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರವುಗೊಳಿಸಲು ಶಿಫಾರಸು ಮಾಡಲಾದ ಶಿಥಿಲ ಕೊಠಡಿಯಲ್ಲಿ ಈ ವರ್ಷ ಎಲ್‌ಕೆಜಿ ಆರಂಭಿಸುವ ಪ್ರಯತ್ನ ನಡೆದಿದೆ. ಸದ್ಯ ತಾಲೂಕಿನಲ್ಲಿ ಇನ್ನೂ ಕಾರ್ಯಾರಂಭಗೊಳ್ಳದ ಎಲ್‌ಕೆಜಿ ತರಗತಿಗಳನ್ನು ಈ ವರ್ಷ ಆರಂಭಿಸಬಾರದು. ಸರ್ಕಾರದ ಆದೇಶವೆಂದು ಪ್ರಾರಂಭಿಸಲು ಹೊರಟರೆ ದೊಡ್ಡ ಮಟ್ಟದ ಹೋರಾಟಕ್ಕಿಳಿಯುತ್ತೇವೆ ಎಂದು ಎಚ್ಚರಿಸಿದರು.

ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸವಿತಾ ತನ್ಮಡಗಿ ಮಾತನಾಡಿ, ಕಳೆದ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಆರಂಭಿಸಲಾಗುತ್ತಿದೆ. ಇದರಿಂದಾಗಿ ಅಂಗನವಾಡಿಗಳಿಗೆ ಮಕ್ಕಳ ಸಂಖ್ಯೆ ಒಂದೇ ವರ್ಷದಲ್ಲಿ ತೀರಾ ಕಡಿಮೆಯಾಗುತ್ತಿದೆ. ಅಂಗನವಾಡಿಗಳನ್ನು ಸರ್ಕಾರದ ಅನುದಾನದಲ್ಲಿ ಸಾಕಷ್ಟು ಉನ್ನತೀಕರಿಸಲಾಗಿದ್ದು ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಹೈಟೆಕ್ ಅಂಗನವಾಡಿಗಳನ್ನು ಕೂಡಾ ನಿರ್ಮಿಸಲಾಗಿದೆ. ಇಷ್ಟೆಲ್ಲ ಮಾಡಿ ಮಕ್ಕಳು ಮಾತ್ರ ಬಾರದಿದ್ದರೆ ಅಂಗನವಾಡಿ ಮುಚ್ಚಬೇಕಾಗುತ್ತದೆ. ಬದಲಾಗಿ ಯೋಜನೆಯಲ್ಲಿ ಮಾರ್ಪಾಡು ಮಾಡಿ, ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ಎಲ್.ಕೆ.ಜಿ ತರಗತಿಗಳನ್ನು ಅಂಗನವಾಡಿಯಲ್ಲೇ ಅಳವಡಿಸಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದರು.

ಗ್ರೇಡ್-೨ ತಹಸೀಲ್ದಾರ ಸತೀಶ ಗೌಡ ಮನವಿ ಸ್ವೀಕರಿಸಿದರು. ಈ ವೇಳೆ ಬಿಇಒ ಉದಯ ನಾಯ್ಕ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸುವುದು, ಗುಣಮಟ್ಟದ ಶಿಕ್ಷಣ ನೀಡುವುದು ಮುಂತಾದ ಉದ್ದೇಶದಿಂದ ಮಕ್ಕಳ ಸಂಖ್ಯೆಗೆ ತಕ್ಕಂತೆ ೨೨ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ ತರಗತಿಗಳನ್ನು ಆರಂಭಿಸಲು ನಿರ್ದೇಶಿಸಲಾಗಿದೆ. ಹಲವು ಕಡೆಗಳಲ್ಲಿ ಈಗಾಗಲೇ ಎಲ್‌ಕೆಜಿ ತರಗತಿ ಆರಂಭವಾಗಿದೆ. ಇದಕ್ಕೆ ಪಾಲಕರ ಆಸಕ್ತಿಯೂ ಇದೆ. ಹೀಗಾಗಿ ಈ ವರ್ಷ ಉಳಿದ ಕಡೆಗಳಲ್ಲಿ ಎಲ್‌ಕೆಜಿ ತರಗತಿ ಆರಂಭಿಸುವುದಕ್ಕೆ ಪ್ರಯತ್ನ ನಡೆದಿದೆ. ಈ ಬಗ್ಗೆ ಸಮಸ್ಯೆಗಳಿದ್ದರೆ ರಾಜ್ಯಮಟ್ಟದಲ್ಲಿ ನಿರ್ಧಾರವಾಗಬೇಕಾಗಿದ್ದರಿಂದ ನಿಮ್ಮ ಮನವಿಯನ್ನು ಡಿಡಿಪಿಐ ಗಮನಕ್ಕೆ ತರಲಾಗುವುದು ಎಂದರು.

ನಿಕಟಪೂರ್ವ ಚುನಾಯಿತ ಗ್ರಾಪಂ ಪ್ರತಿನಿಧಿಗಳ ಒಕ್ಕೂಟದ ಎಸ್.ಟಿ. ನಾಯ್ಕ, ವಿರೂಪಾಕ್ಷ ನಾಯ್ಕ, ಗಜಾನನ ನಾಯ್ಕ, ಶಾಂತಾರಾಮ ನಾಯ್ಕ, ಕರವೇ ಸ್ವಾಭಿಮಾನಿ ಬಣದ ರಾಜು ಮಾಸ್ತಿಹಳ್ಳ, ಅಂಗನವಾಡಿ ಕಾರ್ಯಕರ್ತರ ಒಕ್ಕೂಟದ ಶೋಭಾ ಮಡಿವಾಳ, ಜ್ಯೋತಿ ಪಟಗಾರ, ನೇತ್ರಾ ನಾಯ್ಕ, ನಾಗರತ್ನಾ ನಾಯ್ಕ, ನಿರ್ಮಲಾ ಮುಕ್ರಿ, ರಾಧಾ ಪಟಗಾರ, ಸವಿತಾ ಅಂಬಿಗ, ರಾಜೇಶ್ವರಿ ನಾಯ್ಕ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಟೆ ಆಂಜನೇಯ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರ್ಪಡೆ ಬೇಡ
ಭೂ ಸಂತ್ರಸ್ತ ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಬಿಡಲ್ಲ: ಮಾಳಮ್ಮ